ಮತಬ್ಯಾಂಕ್ ಸೃಷ್ಟಿ ಮಾಡುವದೇ ಕಾಂಗ್ರೆಸ್ ರಾಜಕಾರಣ: ಶೋಭಾ ಟೀಕೆ

shobhaaa
Published on

ಬೆಂಗಳೂರು:

ಮತಬ್ಯಾಂಕ್ ಬಿಟ್ಟು ಬೇರೇನೂ ಮಾಡಲು ಕಾಂಗ್ರೆಸ್ಸಿಗರಿಗೆ ಮನಸ್ಸಿಲ್ಲ. ಇದಕ್ಕೆ ಡಿ.ಕೆ.ಶಿವಕುಮಾರ್ ಅವರ ಹೇಳಿಕೆಯೇ ಉದಾಹರಣೆ ಎಂದು ಕೇಂದ್ರ ಸಚಿವ ಶೋಭಾ ಕರಂದ್ಲಾಜೆ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿ, ದಕ್ಷಿಣ ಕನ್ನಡದಲ್ಲಿ ಶಾಂತಿ ಕೆಡಲು ಕಾಂಗ್ರೆಸ್ ಸರ್ಕಾರದ ಇಬ್ಬಗೆಯ ನೀತಿ ಹಾಗೂ ತುಷ್ಟೀಕರಣವೇ ಕಾರಣ ಎಂದು ವಾಗ್ದಾಳಿ ನಡೆಸಿದರು.

ಮತ ಹಾಕಿದವರಿಗೆ ಮಾತ್ರ ಗ್ಯಾರಂಟಿ ಎಂದಿದ್ದರೆ ಈ ಪ್ರಶ್ನೆಯೇ ಬರುತ್ತಿರಲಿಲ್ಲ. ಯಾರು ನಿಮಗೆ ಮತ ಹಾಕಿದ್ದಾರೋ ಅವರಿಗೆ ಮಾತ್ರ ನೀವು ಗ್ಯಾರಂಟಿ ಕೊಡ್ತೀರೇನು? ಅವರು ಮಾತ್ರ ಸರ್ಕಾರಿ ಯೋಜನೆಯ ಸೌಲಭ್ಯ ಪಡೆಯಬೇಕೇ ಎಂದು ಕೇಳಿದರು.

ನಿಮ್ಮ ಉದ್ದೇಶ ಏನು? ನಿಮ್ಮ ಮಾತೇನು ಎಂದು ನಮಗೆ ಅರ್ಥವಾಗುತ್ತಿಲ್ಲ. ಹಿಂದೆ 2013ರಲ್ಲಿ ಸಿದ್ದರಾಮಯ್ಯ ಅವರು ಜಾತಿ ಜಾತಿಯನ್ನು ಒಡೆಯಲು ಶುರು ಮಾಡಿದ್ದರು. ಲಿಂಗಾಯತರನ್ನು ಒಡೆದಿದ್ದರು. ಕೇವಲ ಒಂದು ಜಾತಿಯವರಿಗೆ ಮಾತ್ರ ಶಾಲಾ ಪ್ರವಾಸ ಮಾಡಿದ್ದರು ಎಂದರು.

ದಕ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ಏನು ಮಾತನಾಡಲು ಹೊರಟಿದ್ದಾರೆ ಎನ್ನುವುದೇ ತಿಳಿಯುತ್ತಿಲ್ಲ. ಅಲ್ಲಿನ ಜನರಿಗೆ ಯಾರು ರಕ್ಷಣೆ ಕೊಡಬೇಕು? ಎಂದು ಅಸಮಾಧಾನ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net