

ಈ ವಾಂತಿ ಕಾಯಿಲೆಯಾಗಿ ನಿರಂತರ ತೊಂದರೆ ನೀಡುವುದೂ ಇದೆ. ಆಯುರ್ವೆದ ವಾತಜ, ಪಿತ್ತಜ, ಕಫಜ, ಸನ್ನಿಪಾತಜ ಹಾಗೂ ಆಗಂತುಜ ಎಂದು ಐದು ವಿಧವಾಗಿ ಇದನ್ನು ವಿವರಿಸಿದೆ. ಜಠರದಲ್ಲಿರುವ ಆಹಾರವು ಅಧಿಕ ವೇಗದೊಂದಿಗೆ ಮೇಲ್ಮುಖವಾಗಿ ತಳ್ಳಲ್ಪಟ್ಟು ಬಾಯೊಳಗೆ ತುಂಬಿ ಹೊರಚೆಲ್ಲಲ್ಪಡುವ ಈ ಪ್ರಕ್ರಿಯೆಯಲ್ಲಿ ಸಂಬಂಧಿತ ಅವಯವಗಳು ವೇದನೆಯಿಂದ ಕೂಡಿರುತ್ತವೆ. ವಾಂತಿಯಾಗುವ ಅಲ್ಪವೇ ಕಾಲ ಮೊದಲು ಬಾಯಿಯಲ್ಲಿ ಒಗರು ರುಚಿಯಿದ್ದರೆ ಅದು ವಾತಜ ಛರ್ದಿ, ಹುಳಿಯ ಅನುಭವವಾದರೆ ಪಿತ್ತಜ ಛರ್ದಿ, ಸಿಹಿ ರುಚಿಯು ಗ್ರಹಿಸಲ್ಪಟ್ಟರೆ ಕಫಜ ವಾಂತಿ ಎಂದರ್ಥ. ಮೂರು ರುಚಿಗಳು ಸೇರಿಕೊಂಡು ಹೀಗೆ ಪ್ರತ್ಯೇಕವಾದ ಅನುಭವ ಆಗದಿದ್ದರೆ ಸನ್ನಿಪಾತಜ ಅರ್ಥಾತ್ ತ್ರಿದೋಷಜ ವಾಂತಿ ಎಂದು ತಿಳಿಯಬೇಕಾಗುತ್ತದೆ. ನಿರ್ದಿಷ್ಟವಾಗಿ ಹೇಳುವುದಾದರೆ, ಅನ್ನವಹ ಸ್ರೋತಸ್ನಲ್ಲಿ ನಡೆಯುವ ಈ ಕ್ರಿಯೆಯಲ್ಲಿ ಪ್ರಾಣವಾಯು, ಉದಾನವಾಯು, ಸಮಾನವಾಯು, ಪಾಚಕಪಿತ್ತ, ಕ್ಲೇದಕಕಫ ಹಾಗೂ ರಸಧಾತುಗಳ ಭಾಗಿತ್ವ ಇರುತ್ತದೆ. ಪ್ರಮುಖವಾಗಿ ಜೀರ್ಣಕ್ರಿಯೆಯಲ್ಲಿ ವ್ಯತ್ಯಯ ಉಂಟಾಗಿ ಪದೇಪದೇ ವಾಂತಿಯಾಗಲು ಆರಂಭವಾಗುತ್ತದೆ.
ಕಾರಣಗಳು ಹಲವು: ಅತಿಯಾಗಿ ದ್ರವಪದಾರ್ಥ ಸೇವನೆ ಮಾಡುವುದೂ ವಾಂತಿಯ ಹಲವು ಕಾರಣಗಳಲ್ಲಿ ಒಂದು! ನೀರು ಕುಡಿಯುವುದು ಒಳ್ಳೆಯದೆಂದುಕೊಂಡು ಹಲವರು ಮೂರ್ನಾಲ್ಕು ಲೀಟರ್ಗಳಷ್ಟು ನೀರನ್ನು ದೇಹಕ್ಕೆ ಹೇರುವುದಿದೆ. ಸಾಮಾನ್ಯವಾಗಿ ಒಂದೂವರೆಯಿಂದ ಎರಡುವರೆ ಲೀಟರ್ನಷ್ಟು ನೀರು ನಮ್ಮ ದೇಹಕ್ಕೆ ಸಾಕಾಗುತ್ತದೆ. ಇನ್ಯಾವುದೋ ದೇಶದಲ್ಲಿ ನಡೆದ ಸಂಶೋಧನೆಯ ಆಧಾರದಲ್ಲಿ ಹೆಚ್ಚು ನೀರು ಕುಡಿಯಲು ಆರಂಭಿಸುವುದು ವ್ಯರ್ಥ ಕಸರತ್ತು. ಅತಿಯಾಗಿ ಎಣ್ಣೆತಿಂಡಿ ಹಾಗೂ ಜಿಡ್ಡು ಪದಾರ್ಥಗಳ ಸೇವನೆ, ದೇಹಕ್ಕೆ ಹಿತವಲ್ಲದ ಆಹಾರ, ಊಟಕ್ಕೆ ರುಚಿ ತರುತ್ತದೆಂದು ಉಪ್ಪು ಮಿತಿಮೀರಿದ ಪ್ರಮಾಣದಲ್ಲಿ ಸೇವನೆ, ಹೊತ್ತುಗೊತ್ತಿಲ್ಲದೆ ಯಾವ್ಯಾವುದೋ ಸಮಯದಲ್ಲಿ ಅನ್ನಪಾನ, ಶರೀರಕ್ಕೆ ಅಗತ್ಯವಿರುವುದಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಆಹಾರ ಸೇವನೆ, ದೇಹಕ್ಕೆ ಒಗ್ಗಿಕೊಳ್ಳದ ಭೋಜನವನ್ನು ಮಾಡುವುದು, ಉದ್ವೇಗಕ್ಕೆ ಒಳಗಾಗುವುದು, ಆಹಾರವು ಜೀರ್ಣವಾಗದಿರುವುದು, ಆಹಾರವನ್ನು ಸರಿಯಾಗಿ ಜಗಿಯದೆ ಗಡಿಬಿಡಿಯಿಂದ ವೇಗವಾಗಿ ಊಟವನ್ನು ಮಾಡುವುದು, ಹೊಟ್ಟೆಯ ಜಂತು ಬಾಧೆ, ಆಯುರ್ವೆದವು
ಹೇಳಿದ ಹದಿನೆಂಟು ತೆರನಾದ ವಿರುದ್ಧಾಹಾರಗಳ ಸೇವನೆ, ತಾಪ, ಭೀತಿ, ಚಿಂತೆ, ಅಶಾಂತಿ ಮೊದಲಾದವು ವಾಂತಿ ಉಂಟುಮಾಡುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಅರ್ಧ ತಲೆನೋವು, ಸೂರ್ಯನ ಚಲನೆಗೆ ಅನುಗುಣವಾಗಿ ತೀವ್ರವಾಗುವ ಸೂರ್ಯಾವರ್ತ ಎಂಬ ತಲೆನೋವು, ಜಠರದಲ್ಲಿ ಉಂಟಾಗುವ ವ್ರಣಗಳು, ಪಿತ್ತಾಶಯದಲ್ಲಿ ಉಂಟಾಗುವ ಕಲ್ಲುಗಳು, ಮೂತ್ರದ ಕಲ್ಲು, ಕರುಳಿನಲ್ಲಿ ಆಗುವ ನೋವು, ಉದರದ ಅನೇಕ ತೀವ್ರ ಸಮಸ್ಯೆಗಳು ವಾತದಿಂದಾಗುವ ವಾಂತಿಗೆ ವಿಶೇಷ ಕಾರಣಗಳು. ಕಾಮಾಲೆರೋಗ, ಆಮ್ಲಪಿತ್ತ, ಯಕೃತ್ನ ರೋಗಗಳು, ತಿಂದಷ್ಟು ತೃಪ್ತಿಯಾಗದ ಲಕ್ಷಣ, ಮೂಗು, ಬಾಯಿ ಮೊದಲಾದ ದೇಹದ್ವಾರಗಳಿಂದ ರಕ್ತಸ್ರಾವವಾಗುವ ರಕ್ತಪಿತ್ತವೆಂಬ ವ್ಯಾಧಿ, ಮೂತ್ರಪಿಂಡದ ಸಮಸ್ಯೆಗಳು, ಮೂತ್ರ ತಡೆ ಹಾಗೂ ಕಷ್ಟಕರ ಮೂತ್ರವಿಸರ್ಜನೆ, ತ್ರಿದೋಷಗಳಿಂದ ಬರುವ ಸನ್ನಿಪಾತಜ ಜ್ವರ, ತಲೆಸುತ್ತುವುದು ಮೊದಲಾದವು ಪಿತ್ತಜ ವಾಂತಿಯನ್ನು ಉಂಟುಮಾಡುತ್ತವೆ. ಕೆಮ್ಮು, ಅಸ್ತಮಾ, ಕ್ಷಯರೋಗ, ಹೊಟ್ಟೆಯ ಜಂತುಹುಳ, ಸಸ್ಯ ಅಥವಾ ಖನಿಜ ದ್ರವ್ಯಗಳ ವಿಷ, ಅಭ್ಯಾಸಬಲದಿಂದಾಗುವ ವಾಂತಿ, ಗರ್ಭಿಣಿಯರಲ್ಲಿ ಬೆಳಗಿನ ಹೊತ್ತಿನಲ್ಲಾಗುವ ವಾಂತಿ ಮೊದಲಾದವುಗಳು ವಿಶೇಷವಾಗಿ ಕಫಜ ವಾಂತಿ ಎನಿಸಿಕೊಳ್ಳುತ್ತವೆ.
ವಾಂತಿಯಾಗುವುದಕ್ಕೂ ಮೊದಲೇ ಹಲವಾರು ಮುನ್ಸೂಚನೆ ಗಳಿವೆ. ಎದೆಯಭಾಗದಲ್ಲಿ ಸಮಾಧಾನ ಇಲ್ಲದಂತಾಗುವುದು, ವಾಕರಿಕೆ ಬರುವುದು, ಅತಿಯಾದ ಜೊಲ್ಲುಸ್ರಾವ, ಆಹಾರ ಸೇವನೆಗೆ ನಿರಾಸಕ್ತಿ, ತೇಗು ಬರದಿರುವುದು, ಬಾಯಲ್ಲಿ ಉಪ್ಪಿನ ಅಂಶ ಇದ್ದಂತೆ ಭಾಸವಾಗುವುದು- ಇವೆಲ್ಲಾ ಪೂರ್ವಲಕ್ಷಣಗಳು. ವಾಂತಿ ಆದಾಗ ಸಿಗುವ ಕ್ಷಣಕಾಲದ ಸುಖಕ್ಕಿಂತ ವಾಂತಿ ನಮ್ಮ ಬಳಿ ಸುಳಿಯದಿದ್ದರೆ ಇರುವ ನೆಮ್ಮದಿಯೇ ಒಳಿತು.
(ಪ್ರತಿಕ್ರಿಯಿಸಿ: : vvsudina@gmail.com)