

ಕೆ.ಎಂ.ದೊಡ್ಡಿ: ವಿಧಾನ ಪರಿಷತ್ ಸದಸ್ಯ ಮಧು ಜಿ. ಮಾದೇಗೌಡ ಅವರ 59ನೇ ಹುಟ್ಟುಹಬ್ಬದ ಅಂಗವಾಗಿ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿತ್ತು.
ಮಂಡ್ಯ ಮಿಮ್ಸ್, ಭಾರತೀ ಎಜುಕೇಷನ್ ಟ್ರಸ್ಟ್, ಭಾರತೀ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ, ಎನ್‌ಸಿಸಿ ಮತ್ತು ಮಧು ಜಿ. ಮಾದೇಗೌಡ ಅಭಿಮಾನಿ ಬಳಗದ ವತಿಯಿಂದ ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ ನೂರಾರು ವಿದ್ಯಾರ್ಥಿಗಳು ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡಿದರು.
ಶಿಬಿರಕ್ಕೆ ಭಾರತೀ ಎಜುಕೇಷನ್ ಟ್ರಸ್ಟ್‌ನ ಕಾರ್ಯ ನಿರ್ವಾಹಕ ಟ್ರಸ್ಟಿ ಆಶಯ್ ಮಧು ಮಾದೇಗೌಡ ಚಾಲನೆ ನೀಡಿ ಮಾತನಾಡಿ, ನನ್ನ ತಂದೆ ಮಧು ಜಿ.ಮಾದೇಗೌಡ ಅವರಿಗೆ ಯಾವುದೇ ಅಧಿಕಾರ ಇಲ್ಲದಿದ್ದಾಗಲೂ ಜನರು ಆಗಾಧ ಪ್ರೀತಿ ತೋರುತ್ತಾ, ಹುಟ್ಟುಹಬ್ಬವನ್ನು ಆಚರಿಸುತ್ತಾ ಬಂದಿದ್ದಾರೆ. ಇತ್ತೀಚಿಗೆ ರಾಜಕೀಯವಾಗಿ ಅಧಿಕಾರ ಸಿಕ್ಕಿದ್ದು, ಇದರಿಂದ ಅಭಿಮಾನಿಗಳ ಪ್ರೀತಿ ಮತ್ತಷ್ಟು ಹಿಮ್ಮಡಿಗೊಳಿಸಿದೆ. ಇನ್ನೂ ಹೆಚ್ಚಿನ ಅಧಿಕಾರ ಸಿಕ್ಕಿದರೆ ಮತ್ತಷ್ಟು ಸಮಾಜ ಸೇವೆ ಮಾಡುತ್ತಾರೆ. ಅದಕ್ಕೆ ಜನರ ಆಶೀರ್ವಾದ ಬೇಕು ಎಂದರು.
ನನ್ನ ತಾತ ಮಾಜಿ ಸಂಸದ ಜಿ.ಮಾದೇಗೌಡ ಅವರು ಜನರಿಗಾಗಿ ಹೋರಾಟದಲ್ಲೇ ತನ್ನ ಜೀವ ಸವೆಸಿದ್ದು, ನಮ್ಮ ತಂದೆಯೂ ಸಹ ವಿಧಾನ ಪರಿಷತ್ ಸದಸ್ಯರಾಗಿ ಜನಪಯೋಗಿ ಕಾರ್ಯಗಳನ್ನು ಮಾಡಲು ಸಂಕಲ್ಪ ತೊಟ್ಟಿದ್ದಾರೆ. ನಾವು ಅವರ ಬೆನ್ನ ಹಿಂದೆ ನಿಲ್ಲುತ್ತೇವೆ ಎಂದರು.
ಭಾರತೀ ವಿದ್ಯಾಸಂಸ್ಥೆಯನ್ನು ಸ್ಥಾಪಿಸಿದ ಗೌಡರು ಲಕ್ಷಾಂತರ ವಿದ್ಯಾರ್ಥಿಗಳ ಜೀವನಕ್ಕೆ ದಾರಿದೀಪವಾಗಿದ್ದು, ಅವರ ಹಾದಿಯಲ್ಲಿ ನನ್ನ ತಂದೆ ಮತ್ತು ನಾನು ಸಾಗುತ್ತಾ ಅವರ ಆಶಯಗಳನ್ನು ಈಡೆೇರಿಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಭಾರತೀ ಕಾಲೇಜಿನ ಪ್ರಾಂಶುಪಾಲ ಡಾ.ಪಿ.ನಾಗೇಂದ್ರ, ಜಿ.ಮಾದೇಗೌಡ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಚಂದನ್, ಭಾರತೀ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ನಾಗಮಾದಯ್ಯ, ಹಿರಿಯ ಗಂಥಪಾಲಕ ಸಂಜೀವ್ ಸಿದ್ದರಾಮೇಗೌಡ, ಪ್ರೊ.ಪುಟ್ಟಸ್ವಾಮಿಗೌಡ, ಪ್ರೊ.ಜವರೇಗೌಡ, ಮಲ್ಲೇಶ್, ಪ್ರಸನ್ನ, ಪ್ರಮೋದ್ ಇತರರು ಇದ್ದರು.