ಅಮೆರಿಕ ಅಧ್ಯಕ್ಷೀಯ ಚುನಾವಣೆ; ಕಣಕ್ಕೆ ಧುಮುಕಿದ್ರು ಭಾರತೀಯ ಮೂಲದ ವಿವೇಕ್ ರಾಮಸ್ವಾಮಿ

Vivek Ramaswamy
Published on

| ಬೆಂಕಿ ಬಸಣ್ಣ ನ್ಯೂ ಯಾರ್ಕ್

ಭಾರತೀಯ ಮೂಲದ ವಿವೇಕ್ ರಾಮಸ್ವಾಮಿ 2024ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಪಾರ್ಟಿಯ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ. ಈ ವಿಷಯ ಅಮೆರಿಕದಲ್ಲಿರುವ ಭಾರತೀಯರಿಗೆ ರೋಮಾಂಚನ ಉಂಟುಮಾಡಿದೆ.

ಈಗಾಗಲೇ ಡೊನಾಲ್ಡ್ ಟ್ರಂಪ್ ಮತ್ತು ನಿಕ್ಕಿ ಹ್ಯಾಲೆ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕೆ ಜಿಗಿದಿದ್ದಾರೆ. ಈಗಿರುವ ಅಧ್ಯಕ್ಷ ಜೋ ಬೈಡೆನ್ ಮತ್ತು ಡೆಮೊಕ್ರೆಟಿಕ್ ಪಕ್ಷದವರು 2021ರ ಜನವರಿ 6ರಲ್ಲಿ ಅಮೆರಿಕದ ಪಾರ್ಲಿಮೆಂಟ್ ಮೇಲೆ ನಡೆದ ಆಕ್ರಮಣದ ಪ್ರಮುಖ ಆರೋಪಿ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಹೇಗಾದರೂ ಮಾಡಿ ಸ್ಪರ್ಧೆ ಮಾಡದಂತೆ ಅನರ್ಹಗೊಳಿಸಬೇಕೆಂದು ಸತತ ಪ್ರಯತ್ನ ಮಾಡುತ್ತಿದ್ದಾರೆ.

ಒಂದು ವೇಳೆ ಡೊನಾಲ್ಡ್ ಟ್ರಂಪ್ ಅನರ್ಹಗೊಂಡರೆ ರಿಪಬ್ಲಿಕ್ ಪಾರ್ಟಿಯಲ್ಲಿ ನಡೆಯುವ ಇಂಟರ್ನಲ್ ಪ್ರೈಮರಿ ಎಲೆಕ್ಷನ್​ನಲ್ಲಿ ವಿವೇಕ್ ರಾಮಸ್ವಾಮಿ ಅವರಿಗೆ ಗೆಲ್ಲುವ ಅವಕಾಶ ತುಂಬಾ ಹೆಚ್ಚುತ್ತದೆ. ಇನ್ನೊಂದೆಡೆ ಡೆಮಾಕ್ರೆಟಿಕ್ ಪಾರ್ಟಿಯ ಅಭ್ಯರ್ಥಿಯಾಗಿ ಈಗಾಗಲೇ 80 ವರ್ಷ ದಾಟಿರುವ ಹಾಲಿ ಅಧ್ಯಕ್ಷ ಜೋ ಬೈಡೆನ್ ಮತ್ತೆ ಸ್ಪರ್ಧಿಸುವ ನಿರೀಕ್ಷೆ ಇದೆ.

ಡೊನಾಲ್ಡ್ ಟ್ರಂಪ್ ಮತ್ತು ಜೋ ಬೈಡೆನ್ ಇಬ್ಬರಿಂದಲೂ ನಿರಾಶಗೊಂಡಿರುವ ಅಮೆರಿಕನ್ನರು ಹೊಸ ಅಭ್ಯರ್ಥಿಯನ್ನು ಮುಂದಿನ ಬಾರಿ ಆಯ್ಕೆ ಮಾಡುವ ನಿರೀಕ್ಷೆ ಇದೆ.

ಯಾರು ಈ ವಿವೇಕ್ ರಾಮಸ್ವಾಮಿ?

ಚೈತನ್ಯ ತುಂಬಿದ 37 ವರ್ಷದ ಯುವಕ ವಿವೇಕ್ ರಾಮಸ್ವಾಮಿ ಅವರು ಅಮೆರಿಕದಲ್ಲಿ ಹೊಸ ಅಲೆ ಸೃಷ್ಟಿಸಿದ್ದಾರೆ. ಇವರ ತಂದೆ-ತಾಯಿ ರಾಮಸ್ವಾಮಿ ಮತ್ತು ಗೀತಾ ಕೇರಳದಿಂದ ಕೆಲವು ದಶಕಗಳ ಹಿಂದೆ ಅಮೆರಿಕದ ಓಹೈವೋ ರಾಜ್ಯಕ್ಕೆ ವಲಸೆ ಬಂದಿದ್ದರು. ವಿದ್ಯಾರ್ಥಿ ದೆಸೆಯಿಂದಲೂ ಅತ್ಯಂತ ಪ್ರತಿಭಾವಂತರಾದ ವಿವೇಕ್ ಪ್ರತಿಷ್ಠಿತ ಹಾರ್ವರ್ಡ್ ಮತ್ತು ಯೇಲ್ ಯುನಿವರ್ಸಿಟಿಗಳಿಂದ ಡಿಗ್ರಿ ಪಡೆದಿದ್ದಾರೆ. ಈಗಾಗಲೇ ಎರಡು ಪುಸ್ತಕಗಳನ್ನು ಬರೆದು ಪ್ರಕಟಿಸಿದ್ದಾರೆ.

ಚಿಕ್ಕ ವಯಸ್ಸಿನಲ್ಲಿಯೇ ಉದ್ಯಮಿಯಾಗಿ ವಿವೇಕ್ ಅವರು ಬಹುದೊಡ್ಡ ಯಶಸ್ಸನ್ನು ಕಂಡಿದ್ದಾರೆ. ಇವರು ಫಾರ್ಮಸಿಟಿಕಲ್ ಕಂಪನಿ ರೊಯ್ವೆಂಟ್ ಸೈನ್ಸಸ್ (Roivant Sciences) ಮೆಡಿಕೇರ್ ನೇವಿಗೇಷನ್ ಕಂಪನಿ ಚಾಪ್ಟರ್ ಮೆಡಿಕೇರ್​ ಮತ್ತು ಸಾಫ್ಟ್​ವೇರ್​ ಹಾಗೂ ನೆಟ್​ವರ್ಕ್​ ಕಂಪನಿ ಕ್ಯಾಂಪಸ್ ವೆಂಚರ್ ನೆಟ್​ವರ್ಕ್ ಸ್ಥಾಪಿಸಿದ್ದಾರೆ. ಇವರ ಬಗ್ಗೆ ಪ್ರತಿಷ್ಠಿತ ಫೋರ್ಬ್ಸ್​ ಮ್ಯಾಗಜಿನ್ ಲೇಖನ ಪ್ರಕಟಿಸಿತ್ತು. ವಿವೇಕ್ ಅವರ ಪತ್ನಿ ಹೆಸರು ಅಪೂರ್ವ ತಿವಾರಿ ಮತ್ತು ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net