

ಕೆ.ಎಂ.ದೊಡ್ಡಿ: ಲೋಕಸರ ವ್ಯಾಪ್ತಿಯ ವಿಶ್ವೇಶ್ವರಯ್ಯ ನಾಲೆ ಕಾಮಗಾರಿ ಕೈಗೆತ್ತಿಕೊಂಡು ಹೊಸ ಸ್ಪರ್ಶ ನೀಡಿ ಆಧುನೀಕರಣಗೊಳಿಸಲಾಗುತ್ತಿದ್ದು ರೈತರು ಒಂದು ತಿಂಗಳ ನಂತರ ಕೃಷಿ ಚಟುವಟಿಕೆ ಆರಂಭಿಸಿ ಎಂದು ಶಾಸಕ ಕದಲೂರು ಉದಯ್ ಮನವಿ ಮಾಡಿದರು.
ಸಮೀಪದ ಸಬ್ಬನಹಳ್ಳಿ ಮತ್ತು ಯಡಗನಹಳ್ಳಿ ಗ್ರಾಮಗಳ ಕಾವೇರಿ ನೀರಾವರಿ ನಿಗಮದ ಲೋಕಸರ ಶಾಖಾ ನಾಲೆ ಅಡಿಯಲ್ಲಿ ನಾಲೆ ಅಭಿವೃದ್ಧಿ ಕಾಮಗಾರಿ ನಡೆಯುವ ಸ್ಥಳಕ್ಕೆ ಇಲಾಖೆ ಅಧಿಕಾರಿಗಳ ಜತೆಗೂಡಿ ಭೇಟಿ ಬುಧವಾರ ನೀಡಿ ಪರಿಶೀಲನೆ ನಡೆಸಿ ಮಾತನಾಡಿದ ಅವರು, ನೀರು ಕೊನೆ ಭಾಗದವರೆಗೂ ಸುಗಮವಾಗಿ ಹರಿಯಲು ನಾಲಾ ಆಧುನಿಕರಣ ಮಾಡುತ್ತಿದ್ದು ಉತ್ತಮ ಕಾಮಗಾರಿ ನಡೆಸಲು ರೈತರಿಗೆ ಅವಕಾಶ ಮಾಡಿಕೊಡಬೇಕು ಎಂದರು.
ಕಾವೇರಿ ನೀರಾವರಿ ನಿಗಮದ ವ್ಯಾಪ್ತಿಯ ಲೋಕಸರ ಭಾಗದ ನಾಲೆಗಳ ಕಾಮಗಾರಿ ಈಗಾಗಲೇ ಪ್ರಗತಿಯಲ್ಲಿದೆ. ಕೃಷಿ ಚಟುವಟಿಕೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಸರ್ಕಾರದಿಂದ ಸುಮಾರು 22 ಕೋಟಿ ರೂ. ವೆಚ್ಚದ ಯೋಜನೆಯಡಿ ನಾಲೆ ಕಾಮಗಾರಿ ನಡೆಯುತ್ತಿದೆ ಎಂದರು.
ಕಾಮಗಾರಿಯಲ್ಲಿ ಕಟ್ ಆ್ಯಂಡ್ ಕವರ್ ಪದ್ಧತಿಯ ಕಾಲುವೆ ನಿರ್ಮಾಣ, ಆರ್‌ಸಿಸಿ ಟ್ರಫ್ ಮತ್ತು ಅಡ್ಡ ಮೋರಿ ನಿರ್ಮಾಣ ಕಾರ್ಯಗಳು ನಡೆಯುತ್ತಿವೆ. ರೈತರಿಗೆ ಸಮಸ್ಯೆಗಳು ಆಗದಂತೆ ತ್ವರಿತವಾಗಿ ಸುಮಾರು ಎರಡು ತಿಂಗಳ ಅವಧಿಯಲ್ಲಿ ನಾಲಾ ಕಾಮಗಾರಿ ಪೂರ್ಣಗೊಳಿಸುವ ಭರವಸೆ ನೀಡಿದರು.
ಅಧಿಕಾರಿಗಳು ಹಾಗೂ ಗುತ್ತಿಗೆದಾರನ ಜತೆಗೂಡಿ ನಾಲಾ ಕಾಮಗಾರಿ ಪ್ರಗತಿ ಪರಿಶೀಲನೆ ನಡೆಸಿದ ಶಾಸಕರು ಗುಣಮಟ್ಟ ಹಾಗೂ ತಾಂತ್ರಿಕ ಅಡಚಣೆಗಳ ಕುರಿತು ಚರ್ಚೆ ನಡೆಸಿದ್ದೇನೆ. ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸುವ ಭರವಸೆಯನ್ನು ಅಧಿಕಾರಿಗಳು ಹಾಗೂ ಗುತ್ತಿಗೆದಾರರು ನೀಡಿದ್ದಾರೆ ಎಂದು ತಿಳಿಸಿದರು.
ಕಾವೇರಿ ನೀರಾವರಿ ನಿಗಮದ ಅಧೀಕ್ಷಕ ಅಭಿಯಂತರ ರಾಘುರಾಮನ್, ಭಾರತಿನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಣ್ಣೂರು ರಾಜೀವ್, ಮದ್ದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತೈಲೂರು ಚೆಲುವರಾಜು, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಬಿ.ಬಸವರಾಜು, ಕಾವೇರಿ ನೀರಾವರಿ ನಿಗಮದ ಎಇಇ ರಾಜೇಶ್, ಎಇ ನವೀನ್, ಗುತ್ತಿಗೆದಾರ ಹರೀಶ್, ಮುಖಂಡರಾದ ಕರಡಕೆರೆ ಮನು, ಯಡಗನಹಳ್ಳಿ ರವಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.