ವಿಶ್ವಾವಸು ಸಂವತ್ಸರಕ್ಕೆ ಶಿವಮೊಗ್ಗ ಜಿಲ್ಲೆಯಲ್ಲಿ ಸಂಭ್ರಮದ ಸ್ವಾಗತ

yugadi
ಹೊಂಬುಜ ಮಠದ ಶ್ರೀ ದೇವೇಂದ್ರ ಕೀರ್ತಿ ಭಟ್ಟಾರಕರು ಪಂಚಾಗ ಶ್ರವಣ ನಡೆಸಿಕೊಟ್ಟರು.
Published on

ಶಿವಮೊಗ್ಗ: ಜಿಲ್ಲಾದ್ಯಂತ ಭಾನುವಾರ ಯುಗಾದಿ ಹಬ್ಬವನ್ನು ಜನರು ಸಂಭ್ರಮದಿಂದ ಆಚರಿಸಿದರು. ವಿಶ್ವಾವಸು ಸಂವತ್ಸರವನ್ನು ಜನರು ಸಂಭ್ರಮದಿಂದ ಸ್ವಾಗತಿಸಿದರು. ನೂತನ ಸಂವತ್ಸರದ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಸಾರ್ವಜನಿಕವಾಗಿ ನಡೆದಿದ್ದು ವಿಶೇಷವಾಗಿತ್ತು.

ಮನೆ ಮುಂಭಾಗದಲ್ಲಿ ರಂಗೋಲಿ ಚಿತ್ತಾರ, ಬಾಗಿಲಿಗೆ ತಳಿರು ತೋರಣ ಕಟ್ಟಿ ಹೊಸ ನಿರೀಕ್ಷೆಯೊಂದಿಗೆ ನೂತನ ಸಂವತ್ಸರವನ್ನು ಸ್ವಾಗತಿಸಿದರು. ಬೇವು-ಬೆಲ್ಲ ಸ್ವೀಕರಿಸಿ, ವಿವಿಧ ವಿಶೇಷ ಖಾದ್ಯಗಳನ್ನು ತಯಾರು ಮಾಡಿ ವಿಶೇಷ ಭೋಜನದೊಂದಿಗೆ ಶಾಸ್ತ್ರೋಕ್ತವಾಗಿ ಯುಗಾದಿ ಆಚರಿಸಿದರು.

ಬೇರೆ ಊರುಗಳಲ್ಲಿ ನೆಲೆಸಿರುವ ಬಹುತೇಕ ಮಂದಿ ಹಬ್ಬಕ್ಕಾಗಿ ತವರೂರಿಗೆ ಬಂದು ಯುಗಾದಿ ಆಚರಣೆ ಮಾಡಿದರು. ಬೆಲೆ ಏರಿಕೆ ಭರಾಟೆ ನಡುವೆಯೂ ಯುಗಾದಿ ಸಂಭ್ರಮ ಮಸುಕಾಗಲಿಲ್ಲ. ಮೋಡ ಕವಿದ ವಾತಾವರಣ ಇದ್ದುದರಿಂದ ಭಾನುವಾರ ಚಂದ್ರ ದರ್ಶನ ಸಾಧ್ಯವಾಗಲಿಲ್ಲ. ಸೋಮವಾರ ಸಂಜೆ ಚಂದ್ರ ದರ್ಶನ ಪಡೆದ ಎಲ್ಲರೂ ಖುಷಿಪಟ್ಟರು. ಹಳ್ಳಿಗಳಲ್ಲಿ ಚಂದ್ರನ ಸ್ವರೂಪವನ್ನು ಗಮನಿಸಿ ಈ ವರ್ಷದ ಮಳೆ, ಬೆಳೆ, ಆರೋಗ್ಯ ಮತ್ತಿತರ ವಿಷಯಗಳ ಬಗ್ಗೆ ತಮ್ಮದೇ ಆದ ರೀತಿ ವಿಶ್ಲೇಷಣೆ ಮಾಡಿದರು. ನಂತರ ಮನೆಯ ಹಿರಿಯರಿಗೆ ನಮಿಸಿ ಆಶೀರ್ವಾದ ಪಡೆದರು.

ವಿವಿಧ ದೇವಾಲಯಗಳಲ್ಲಿ ಪಂಚಾಗ ಶ್ರವಣ ನಡೆಯಿತು. ಪ್ರಮುಖ ಮಠಗಳಲ್ಲಿ ಮಠಾಧೀಶರು ಪಂಚಾಗ ಪಠಣದ ಜತೆಗೆ ಆಶೀರ್ವಚನ ನೀಡಿದರು. ಕೋಟೆ ರಸ್ತೆಯ ಶ್ರೀ ಶನೈಶ್ಚರ ದೇವಸ್ಥಾನದಲ್ಲಿ ಯುಗಾದಿ ಅಂಗವಾಗಿ 108 ಕಲಶಗಳ ಕುಂಭಾಭಿಷೇಕ, ಶನಿ ಶಾಂತಿಯಾಗ ಏರ್ಪಡಿಸಲಾಗಿತ್ತು. ಸಾಮೂಹಿಕ ಶನಿ ಶಾಂತಿಯಾಗದಲ್ಲಿ 30ಕ್ಕೂ ಹೆಚ್ಚು ಋತ್ವಿಜರು, ನಾಲ್ಕು ದ್ರವ್ಯಗಳೊಂದಿಗೆ 10 ಸಾವಿರಕ್ಕೂ ಹೆಚ್ಚು ಆಹುತಿಯನ್ನು ಯಾಗಕ್ಕೆ ಸಮರ್ಪಿಸಿದರು. ಬಹುತೇಕ ದೇವಾಲಯಗಳಲ್ಲಿ ವಿಶೇಷ ಅಲಂಕಾರ ಹಾಗೂ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net