ಜೂ.1ರಂದು ವಿಶ್ವ ಶಾಂತಿ ಮಹಾಯಾಗ

yaga
ಸೊರಬದಲ್ಲಿ ವಿಶ್ವ ಶಾಂತಿ ಮಹಾಯಾಗದ ಪೂರ್ವಭಾವಿ ಸಭೆಯಲ್ಲಿ ಆಹ್ವಾನ ಪತ್ರಿಕೆ ಬಿಡುಗಡೆ ಮಾಡಲಾಯಿತು. ರಾಜು, ಎಸ್.ಡಿ.ನಾಯಕ್, ರೇಣುಕಾ ಲೋಕೇಶ್, ಸುಮಾ, ಉಪಾಧ್ಯಕ್ಷೆ ಶಶಿಕಲಾ, ತ್ಯಾಗರಾಜ್ ಇತರರಿದ್ದರು.
Published on

ಸೊರಬ: ಚಂದ್ರಗುತ್ತಿ ಶ್ರೀ ರೇಣುಕಾಂಬ ದೇವಿ ಸನ್ನಿಧಿಯಲ್ಲಿ ಬ್ರಹ್ಮಶ್ರೀ ನಾರಾಯಣಗುರು ಧರ್ಮ ಪರಿಪಾಲನಾ ಸಂಘ (ಬಿಎಸ್‌ಎನ್‌ಡಿಪಿ) ತಾಲೂಕು ಘಟಕ ಹಾಗೂ ಶ್ರೀ ನಾರಾಯಣಗುರು ವೈದಿಕ ಸಮಿತಿಯಿಂದ ಜೂ.1ರಂದು ವಿಶ್ವ ಶಾಂತಿ ಮಹಾಯಾಗ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ತಾಲೂಕು ಅಧ್ಯಕ್ಷ ರಾಜು ಹಿರಿಯಾವಲಿ ಹೇಳಿದರು.

ಪಟ್ಟಣದಲ್ಲಿ ಏರ್ಪಡಿಸಿದ್ದ ಪೂರ್ವಭಾವಿ ಸಭೆಯಲ್ಲಿ ಆಹ್ವಾನ ಪತ್ರಿಕೆ ಬಿಡುಗಡೆ ಮಾಡಿ ಮಾತನಾಡಿದ ಅವರು, ದೇಶ ಹಾಗೂ ರಾಜ್ಯದಲ್ಲಿ ಶಾಂತಿ, ನೆಮ್ಮದಿ ನೆಲೆಸಲಿ, ಉತ್ತಮ ಮಳೆ-ಬೆಳೆ ಆಗಲಿ ಎಂಬ ಮಹಾಯಾಗ ಹಮ್ಮಿಕೊಳ್ಳಲಾಗಿದೆ. ಇದರಲ್ಲಿ ಸರ್ವ ಧರ್ಮೀಯರು ಭಾಗವಹಿಸಬಹುದು ಎಂದರು.

ಧರ್ಮಸ್ಥಳ ಶ್ರೀರಾಮ ಕ್ಷೇತ್ರ ಮಹಾ ಸಂಸ್ಥಾನದ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ಸಚಿವ ಎಸ್ ಮಧು ಬಂಗಾರಪ್ಪ ಕಾರ್ಯಕ್ರಮ ಉದ್ಘಾಟಿಸುವರು. ಸಿಗಂದೂರು ಶ್ರೀ ಚೌಡೇಶ್ವರಿ ದೇವಾಲಯದ ಧರ್ಮದರ್ಶಿ ರಾಮಪ್ಪ, ಸಂಸದ ಬಿ.ವೈ.ರಾಘವೇಂದ್ರ, ಶಾಸಕ ಬೇಳೂರು ಗೋಪಾಲಕೃಷ್ಣ, ಮಾಜಿ ಶಾಸಕರಾದ ಕುಮಾರ್ ಬಂಗಾರಪ್ಪ, ಎಚ್.ಹಾಲಪ್ಪ, ಸಂಘಟನೆಯ ಪದಾಧಿಕಾರಿಗಳು ಭಾಗವಹಿಸುವರು ಎಂದು ತಿಳಿಸಿದರು.

ಬಿಎಸ್‌ಎನ್‌ಡಿಪಿ ಜಿಲ್ಲಾಧ್ಯಕ್ಷ ಎಸ್.ಡಿ.ನಾಯಕ್ ಮಾತನಾಡಿ, ಇದೊಂದು ಧಾರ್ಮಿಕ ಕಾರ್ಯಕ್ರಮ, ಈಡಿಗ ಬಿಲ್ಲವ, ನಾಮಧಾರಿ, ದೀವರು, ತಿಯಾ, ಸಮಾಜದ 26 ಒಳಪಂಗಡಗಳ ಮಹಿಳಾ ಸ್ವಸಹಾಯ ಸಂಘಗಳ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದರು.

ಬಿಎಸ್‌ಎನ್‌ಡಿಪಿ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ರೇಣುಕಾ ಲೋಕೇಶ್ ಮಾತನಾಡಿ, ಹಿಂದುಳಿದ ಸಮಾಜಗಳು ಅಭಿವೃದ್ಧಿ ಹಾಗೂ ಸಮಾಜದ ಮುಖ್ಯವಾಹಿನಿಗೆ ಬರಬೇಕಾದರೆ ಸಮಾಜಮುಖಿ ಕಾರ್ಯಕ್ರಮಗಳಲ್ಲಿ ನಮ್ಮನ್ನು ತೊಡಗಿಸಿಕೊಳ್ಳಬೇಕು. ಸಮಾಜದ ಏಳಿಗೆಗೆ ಎಲ್ಲರೂ ಒಂದಾಗಬೇಕು. ಲೋಕಕಲ್ಯಾಣಾರ್ಥ ಹಮ್ಮಿಕೊಂಡಿರುವ ಧಾರ್ಮಿಕ ಕಾರ್ಯಕ್ರಮದಲ್ಲಿ ಎಲ್ಲ ಸಮಾಜದವರು ಭಾಗವಹಿಸಬೇಕು ಎಂದು ಮನವಿ ಮಾಡಿದರು.

ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ಸುಮಾ, ಉಪಾಧ್ಯಕ್ಷೆ ಶಶಿಕಲಾ, ರಾಜ್ಯ ಸಹ ಕಾರ್ಯದರ್ಶಿ ತ್ಯಾಗರಾಜ್, ಜಿಲ್ಲಾ ಮಹಿಳಾ ಘಟಕದ ಉಪಾಧ್ಯಕ್ಷೆ ಅನಸೂಯಾ, ಪ್ರಧಾನ ಕಾರ್ಯದರ್ಶಿ ಶ್ಯಾಮಲಾ ಚಂದ್ರಶೇಖರ್, ಪದಾಧಿಕಾರಗಳಾದ ಸುಮಂಗಲಾ, ಶ್ಯಾಮಲಾ, ರೇಖಾ, ಮಮತಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net