

ಶಿವಮೊಗ್ಗ: ಪಂಚಬ್ರಹ್ಮ ಸ್ತೋತ್ರವು ವಿಶ್ವಕರ್ಮದ ಪ್ರಾಮುಖ್ಯದ ಬಗ್ಗೆ ತಿಳಿಸಿದೆ. ವಿಶ್ವಕರ್ಮರನ್ನು ಜ್ಞಾನ, ವಿಜ್ಞಾನ ಹಾಗೂ ಸದಾ ಪಂಚಭೂತಗಳೊಂದಿಗೆ ಕೆಲಸ ಮಾಡುವ ವಿಜ್ಞಾನಿಗಳೆಂದು ಭಗವದ್ಗೀತೆಯಲ್ಲಿ ಹೇಳಲಾಗಿದೆ ಎಂದು ಹೇಳಿದೆ ಎಂದು ಚಿತ್ರದುರ್ಗ ರಾಷ್ಟ್ರೀಯ ವಿಶ್ವಕರ್ಮ ವಂಶಿ ಸೇನೆ ಜಿಲ್ಲಾಧ್ಯಕ್ಷೆ ಪಿ.ಜಿ.ಅನಿತಲಕ್ಷ್ಮೀ ಆಚಾರ್ಯ ತಿಳಿಸಿದರು.
ಜಿಲ್ಲಾಡಳಿತ ಹಾಗೂ ಜಿಲ್ಲಾ ವಿಶ್ವಕರ್ಮ ಮಹಾಸಭಾದಿಂದ ಬುಧವಾರ ಏರ್ಪಡಿಸಿದ್ದ ವಿಶ್ವಕರ್ಮ ಜಯಂತ್ಯುತ್ಸವದಲ್ಲಿ ಮಾತನಾಡಿದ ಅವರು, ವಿಶ್ವಕರ್ಮರು ವೈದಿಕಶಾಸ್ತ್ರ ದ ಜತೆಗೆ ಶಿಲ್ಪಶಾಸ್ತ್ರವನ್ನು ಕಲಿತಿದ್ದಾರೆ. ಶಿಲ್ಪಸಹಿತ ಬ್ರಾಹ್ಮಣ್ಯ ಹೊಂದಿರುವ ಕುಲಶ್ರೇಷ್ಠರಾಗಿದ್ದಾರೆ. ವಿಶ್ವಕರ್ಮ ಸಮಾಜವು ಉತ್ಪಾದನಾ ಸಂಸ್ಕೃತಿಯನ್ನು ಈ ಜಗತ್ತಿಗೆ ಪರಿಚಯಿಸಿದೆ. ದೇಶದ ಬೆನ್ನೆಲುಬು ರೈತನಾದರೆ, ರೈತನ ಬೆನ್ನೆಲುಬು ವಿಶ್ವಕರ್ಮರು ಎಂದರು.
ಯುನೆಸ್ಕೋ ಪಾರಂಪರಿಕ ಪಟ್ಟಿಯಲ್ಲಿ ಭಾರತದ ಶಿಲ್ಪಕಲೆಗಳು ಸೇರ್ಪಡೆಯಾಗಿದೆ ಎಂದರೆ ಅದಕ್ಕೆ ಕಾರಣ ವಿಶ್ವಕರ್ಮರು. ನಮ್ಮ ಪೂರ್ವಜರು ದೇಶದ ಸಂಸ್ಕೃತಿ ಹಾಗೂ ಪರಂಪರೆಗೆ ನೀಡಿರುವ ಕೊಡುಗೆಯನ್ನು ನೋಡಲು ದೇಶ ವಿದೇಶದಿಂದ ಬರುತ್ತಿದ್ದು, ನಮ್ಮ ವಾಸ್ತುಶಿಲ್ಪ ಧರ್ಮಕ್ಕೆ ಕಲಶಪ್ರಾಯ ಎಂದು ಹೇಳಿದರು.
ಸಮುದಾಯ ಅಭಿವೃದ್ಧಿ ಆಗಬೇಕಾದರೆ ತಮ್ಮನ್ನು ಕಲೆಗೆ ಒಳಪಡಿಸಿಕೊಳ್ಳಬೇಕು. ಅದನ್ನು ಉಳಿಸುವ ಕೆಲಸ ಮಾಡಬೇಕು. ತಮ್ಮನ್ನು ತಾವು ಬೆಳೆಸಿಕೊಳ್ಳಬೇಕು, ತಿದ್ದಿಕೊಳ್ಳಬೇಕು. ಮೂಢನಂಬಿಕೆಯಿಂದ ಹೊರಬರಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಸಿ.ಎಸ್.ಚಂದ್ರಭೂಪಾಲ ಮಾತನಾಡಿ, ಭರತ ಖಂಡವು ಧಾರ್ಮಿಕ ಹಾಗೂ ಜನಜೀವನ ಸಂಸ್ಕೃತಿಯ ಹಿನ್ನೆಲೆಯನ್ನು ಹೊಂದಿದೆ. ಇಲ್ಲಿ ಉತ್ತಮ ಗುರುವನ್ನು ಪಡೆದರೆ ಮಾತ್ರ ಉತ್ತಮ ಸಂಸ್ಕೃತಿ ಪಡೆಯಲು ಸಾಧ್ಯ. ಇಂತಹ ಗುರುವಿನ ಸಂಸ್ಕೃತಿಯನ್ನು ವಿಶ್ವಕರ್ಮ ಸಮಾಜ ಒಳಗೊಂಡಿದೆ. ವಿಶ್ವಕರ್ಮ ಸಮಾಜದ ಜನರು ಇದುವರೆಗೂ ಯಾವ ಸಮಾಜಕ್ಕೂ ಅನ್ಯಾಯ ಮಾಡದೆ ಸ್ವಾವಲಂಬನೆಯಿಂದ ಬದುಕು ನಡೆಸುತ್ತಿದ್ದಾರೆ. ಎಲ್ಲ ಕ್ಷೇತ್ರಕ್ಕೂ ತಮ್ಮದೇ ಆದ ಕೊಡುಗೆ ನೀಡುತ್ತಿದ್ದಾರೆ ಎಂದರು.
ವೃತ್ತಿಯ ಆಧಾರದಿಂದ ನಾವೆಲ್ಲ ಬೇರೆ ಬೇರೆ ಜಾತಿಯಲ್ಲಿ ಗುರುತಿಸಿಕೊಂಡಿದ್ದೇವೆ. ಇದನ್ನು ಮೀರಿ ನಾವು ಮನುಷ್ಯ ದೃಷ್ಟಿಯಿಂದ ಎಲ್ಲರೂ ಒಂದೇ ಎಂಬ ಭಾವನೆಯಿಂದ ಬದುಕಬೇಕು. ಎಲ್ಲರನ್ನೂ ಮನುಷ್ಯತ್ವದಿಂದ ಕಾಣಬೇಕು. ಯಾವುದೇ ಸಮಾಜವಾಗಲಿ ಅದರ ಸಂಸ್ಕೃತಿಯನ್ನು ಅಳವಡಿಸಿಕೊಂಡು, ಕಾರ್ಯಸಿದ್ಧಿ ಮಾಡಿಕೊಂಡು ಮಾನವೀಯ ಗುಣಗಳನ್ನು ವೃದ್ಧಿಸಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.
ಅಪರ ಜಿಲ್ಲಾಧಿಕಾರಿ ವಿ.ಅಭಿಷೇಕ್, ಜಿಲ್ಲಾ ವಿಶ್ವಕರ್ಮ ಮಹಾಸಭಾ ಅಧ್ಯಕ್ಷ ಅಗರದಹಳ್ಳಿ ನಿರಂಜನಮೂರ್ತಿ, ಕಾಳಿಕಾ ಪರಮೇಶ್ವರಿ ದೇವಸ್ಥಾನ ಸಮಿತಿ ಅಧ್ಯಕ್ಷ ಎಸ್.ರಮೇಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಚ್.ಉಮೇಶ್ ಮುಂತಾದವರಿದ್ದರು.