ಆತ್ಮಹತ್ಯೆ ನನ್ನ ಮುಂದಿದ್ದ ಕೊನೆಯ ಆಯ್ಕೆ! ವಿಡಿಯೋ ಅದಾಗಲೇ ಲೀಕ್​ ಆಗಿತ್ತು... ವಿಷ್ಣು ಪ್ರಿಯ ಓಪನ್ ಟಾಕ್​ | Vishnu Priya

ಆತ್ಮಹತ್ಯೆ ನನ್ನ ಮುಂದಿದ್ದ ಕೊನೆಯ ಆಯ್ಕೆ! ವಿಡಿಯೋ ಅದಾಗಲೇ ಲೀಕ್​ ಆಗಿತ್ತು... ವಿಷ್ಣು ಪ್ರಿಯ ಓಪನ್ ಟಾಕ್​ | Vishnu Priya
Published on

ಆಂಧ್ರಪ್ರದೇಶ: ಟಾಲಿವುಡ್​ನ ಜನಪ್ರಿಯ ನಿರೂಪಕಿ, ಬಿಗ್ ಬಾಸ್​ ಸ್ಪರ್ಧಿ ವಿಷ್ಣು ಪ್ರಿಯಾ (Vishnu Priya), ತಮ್ಮ ಜೀವನದಲ್ಲಿ ನಡೆದ ಕೆಲವೊಂದು ಕಹಿ ಘಟನೆಗಳ ಬಗ್ಗೆ ಇದೀಗ ಮುಕ್ತವಾಗಿ ಮಾತನಾಡಿದ್ದಾರೆ. ಪ್ರಿಯಾ ನೀಡಿರುವ ಒಂದಷ್ಟು ಹೇಳಿಕೆಗಳು ಸದ್ಯ ಜಾಲತಾಣಗಳಲ್ಲಿ ಹರಿದಾಡಿದ್ದು, ಶಾಕಿಂಗ್ ವಿಚಾರಗಳು ನೆಟ್ಟಿಗರ ಹುಬ್ಬೇರಿಸಿದೆ.

ಸುಡಿಗಲಿ ಸುಧೀರ್ ಜತೆಗಿನ ಅವರ ತೆಲುಗಿನ 'ಪೋವ್ ಪೋರಾ ಗೇಮ್ ಶೋ' ಪ್ರಿಯಾಗೆ ಹೆಚ್ಚಿನ ಜನಪ್ರಿಯತೆ ತಂದುಕೊಟ್ಟಿದ್ದು, ತೆಲುಗು ಮಂದಿಗೆ ತಿಳಿದಿದೆ. ಈ ಕಾರ್ಯಕ್ರಮದಿಂದ ಸಿಕ್ಕ ಅಪಾರ ಖ್ಯಾತಿಯ ಬೆನ್ನಲ್ಲೇ ಅವರು ತೆಲುಗು ಬಿಗ್ ಬಾಸ್ ಸೀಸನ್ 8ಕ್ಕೆ ಎಂಟ್ರಿಕೊಟ್ಟರು. ಆದಾಗ್ಯೂ, ಸದಾ ಹಸನ್ಮುಖಿಯಾಗಿ ತೆರೆ ಮೇಲೆ ಕಾಣಿಸಿಕೊಳ್ಳುವ ವಿಷ್ಣು ಪ್ರಿಯಾ ಅವರ ಜೀವನದಲ್ಲಿ ಕೆಲವು ಕರಾಳ ರಾತ್ರಿಗಳಿವೆ. ಇತ್ತೀಚೆಗೆ ನಡೆದ ಸಂದರ್ಶನದಲ್ಲಿ, ತಾವು ಎದುರಿಸಿದ ಕೆಲವು ದುಃಖಕರ ಘಟನೆಗಳ ಬಗ್ಗೆ ಅವರು ಮೌನ ಮುರಿದಿದ್ದಾರೆ.

ಫೇಸ್‌ಬುಕ್ ಖಾತೆ ಹ್ಯಾಕ್

"ಕೆಲವು ಸಮಯದ ಹಿಂದೆ, ನನ್ನ ಮುಖವನ್ನು ಹೋಲುವ ವಿಡಿಯೋವನ್ನು ಮಾರ್ಫ್​ ಮಾಡಿ ಜಾಲತಾಣಗಳಲ್ಲಿ ಹರಿಬಿಡಲಾಗಿತ್ತು. ಆ ಅಸಭ್ಯ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್​ ಆಗಿ, ಕಡೆಗೆ ನನ್ನ ವಾಟ್ಸಾಪ್‌ ಸಂಖ್ಯೆಗೂ ಬಂದಿತು. ಒಂದು ನಿಮಿಷ ಅದನ್ನು ನೋಡಿ ನನಗೆ ಭಾರೀ ಆಘಾತವಾಯ್ತು. ಬಹುತೇಕರು ವಿಡಿಯೋದಲ್ಲಿರುವ ವ್ಯಕ್ತಿ ನಿಜಕ್ಕೂ ನಾನೇ ಎಂದು ಭಾವಿಸಿದ್ದರು. ಇದರಲ್ಲಿರುವುದು ನಾನಲ್ಲ ಎಂದು ಪರಿ ಪರಿಯಾಗಿ ಹೇಳಿದರೂ ಕೆಲವರು ನನ್ನನ್ನು ನಂಬಲಿಲ್ಲ. ಅದೇ ಸಮಯದಲ್ಲಿ, ನನ್ನ ಫೇಸ್‌ಬುಕ್ ಖಾತೆಯನ್ನು ಸಹ ಹ್ಯಾಕ್ ಮಾಡಲಾಗಿತ್ತು" ಎಂದಿದ್ದಾರೆ.

"ನನ್ನ ಹ್ಯಾಕ್ ಆದ ಫೇಸ್​ಬುಕ್​ ಖಾತೆಯಲ್ಲಿ ಆ ಅಸಭ್ಯ ವಿಡಿಯೋ ಶೇರ್ ಆಗಿತ್ತು. ಇದನ್ನು ನೋಡಿದ ನನ್ನಜ್ಜ, ಅಜ್ಜಿಗೆ ಫೋನ್ ಮಾಡಿ ವಿಷ್ಣು ಯಾಕೆ ಇಂಥಾ ಪೋಸ್ಟ್‌ಗಳನ್ನು ಮಾಡಿದ್ದಾಳೆ ಎಂದು ಕೇಳಿದ್ದರು. ನಾನು ಹೊರಗೆ ಹೋದಾಗ, ತುಂಬಾ ಜನರು ನನ್ನ ಮುಂದೆಯೇ ಆ ವಿಡಿಯೋಗಳ ಬಗ್ಗೆ ಮಾತಾಡುತ್ತಿದ್ದರು. ಇನ್ನೂ ಕೆಲವರು ದೃಶ್ಯಕ್ಕೆ ಸಂಬಂಧಿಸಿದಂತೆ ನೇರವಾಗಿ ನನ್ನ ಬಳಿಯೇ ಕೇಳಿದ್ದಾರೆ" ಎಂದರು.

ತಾಯಿ ನೀಡಿದ ಧೈರ್ಯ

"ಆ ಕಠಿಣ ಸಮಯದಲ್ಲಿ ನನಗೇನು ಮಾಡಬೇಕು ತಿಳಿಯಲಿಲ್ಲ. ದುಃಖಕ್ಕೆ ಒಳಗಾದೆ. ಆಗ ನನ್ನ ಮುಂದಿದ್ದ ಕಡೆಯ ಆಯ್ಕೆ ಎಂದರೆ ಅದು ಆತ್ಮಹತ್ಯೆ ಮಾಡಿಕೊಳ್ಳುವುದು. ಆದರೆ, ಅಂದು ನನ್ನ ತಾಯಿ ನನಗೆ ನೀಡಿದ ಧೈರ್ಯ ಇಂದು ನನ್ನನ್ನು ಇಲ್ಲಿಗೆ ತಂದು ನಿಲ್ಲಿಸಿದೆ. ಇಲ್ಲದಿದ್ದರೆ, ನಾನು ಯಾವತ್ತೋ ಇಹಲೋಕಕ್ಕೆ ತೆರಳಿರುತ್ತಿದ್ದೆ" ಎಂದು ಭಾವುಕರಾಗಿ ಮಾತನಾಡಿದ್ದಾರೆ. ವಿಷ್ಣು ಪ್ರಿಯಾ ಅವರ ಹೇಳಿಕೆಗಳು ವೈರಲ್ ಆಗ್ತಿದ್ದಂತೆ ನೆಟ್ಟಿಗರು ಕಾಮೆಂಟ್‌ ಮಾಡಿದ್ದು, ನಿಮ್ಮ ಧೈರ್ಯ, ದಿಟ್ಟತನಕ್ಕೆ ಸಲಾಂ ಎಂದಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net