'ಕಾಲಿವುಡ್​ನಲ್ಲೂ ಇದೆ ಶೋಷಣೆ.. ಸಮಿತಿ ರಚನೆ ಅಗತ್ಯ'..ಸಂಚಲನ ಸೃಷ್ಟಿಸಿದ ನಟ ವಿಶಾಲ್ ಹೇಳಿಕೆ

Vishal
Published on

ಚೆನ್ನೈ: ಮಾಲಿವುಡ್​ನಲ್ಲಿ ನಟಿಯರು ಎದುರಿಸುತ್ತಿರುವ ಸಂಕಷ್ಟಗಳ ಕುರಿತು ನ್ಯಾಯಮೂರ್ತಿ ಹೇಮಾ ಸಮಿತಿ ಸಿದ್ಧಪಡಿಸಿರುವ ವರದಿ ಕಳೆದ ಕೆಲ ದಿನಗಳಿಂದ ತೀವ್ರ ಚರ್ಚೆಗೆ ಕಾರಣವಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ಈಗಾಗಲೇ ಹಲವು ನಟ, ನಟಿಯರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದೀಗ ಈ ಬಗ್ಗೆ ನಟ ವಿಶಾಲ್ ಮಹತ್ವದ ಹೇಳಿಕೆ ನೀಡಿದ್ದಾರೆ. ಮಹಿಳೆಯರ ರಕ್ಷಣೆಗೆ ಎಲ್ಲರೂ ಶ್ರಮಿಸಬೇಕು. ಅವರಿಗೆ ತೊಂದರೆ ಕೊಡುವವರಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ಪ್ರತಿಕ್ರಿಯಿಸಿದ್ದಾರೆ.

ಜಸ್ಟೀಸ್​ ಹೇಮಾ ಸಮಿತಿ ವರದಿಯಲ್ಲಿನ ವಿಷಯಗಳನ್ನು ಓದಿ ಆಘಾತವಾಯಿತು. ಮಹಿಳೆಯರಿಗೆ ಇಂತಹ ಸನ್ನಿವೇಶಗಳು ಎದುರಾಗುತ್ತಿರುವುದು ಬೇಸರದ ಸಂಗತಿ. ಪ್ರತಿಭಾವಂತರಿಗೆ ಸಿನಿಮಾಗಳಲ್ಲಿ ಅವಕಾಶ ನೀಡಬೇಕು. ಮಹಿಳೆಯರೊಂದಿಗೆ ಅನುಚಿತವಾಗಿ ವರ್ತಿಸುವವರಿಗೆ ಸೂಕ್ತ ಸಲಹೆ ನೀಡಬೇಕು. ಇಂತಹ ಸಂದರ್ಭಗಳು ಎದುರಾದಾಗ ನಾವು ಧೈರ್ಯದಿಂದ ಪ್ರತಿಕ್ರಿಯಿಸಬೇಕು. ನಮ್ಮನ್ನು ಸಹಾಯ ಕೇಳುವವರಿಗೆ ಗೌರವ ತೋರಿಸಬೇಕು ಎಂದರು.

ಕಾಲಿವುಡ್‌ನಲ್ಲೂ ಅನೇಕ ಮಹಿಳೆಯರು ಇಂತಹ ತೊಂದರೆಗಳನ್ನು ಎದುರಿಸುತ್ತಿದ್ದಾರೆ. ಇಂತಹ ಸಮಿತಿಯನ್ನು ತಮಿಳುನಾಡಿನಲ್ಲೂ ರಚಿಸಬೇಕು. ಇದಕ್ಕಾಗಿ ಯೋಜನೆ ಸಿದ್ಧಪಡಿಸುತ್ತಿದ್ದೇವೆ. 10ಕ್ಕೂ ಹೆಚ್ಚು ಸದಸ್ಯರನ್ನೊಳಗೊಂಡ ತಂಡ ರಚಿಸಲು ಚಿಂತನೆ ನಡೆಸುತ್ತಿದ್ದೇವೆ ಎಂದು ತಿಳಿಸಿದರು.

ಕಾಸ್ಟಿಂಗ್ ಕೌಚ್‌ನಿಂದ ತಾರತಮ್ಯದವರೆಗೆ ಮಾಲಿವುಡ್‌ನಲ್ಲಿ ಮಹಿಳೆಯರು ಅನೇಕ ತೊಂದರೆಗಳನ್ನು ಎದುರಿಸುತ್ತಿದ್ದಾರೆ ಎಂದು ಜಸ್ಟೀಸ್​ ಹೇಮಾ ಸಮಿತಿ ವರದಿಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net