ಒಂದೇ ಒಂದು ರಾಂಗ್​ ನಂಬರ್​ನಿಂದಾಗಿ 4 ಕೋಟಿ ರೂ. ಕಳೆದುಕೊಂಡ ಮಹಿಳೆ: ಎಚ್ಚರ ವಹಿಸದಿದ್ರೆ ಅಪಾಯ ಫಿಕ್ಸ್​! Wrong Call

Wrong Call
Published on

Wrong Call : ತಿರುಪತಿ ಜಿಲ್ಲೆಯ ಶ್ರೀಕಾಳಹಸ್ತಿಯ ಮೂಲದ ಬಿ. ಅಕ್ಷಯ್ ಕುಮಾರ್ ಎಂಬಾತ ಒಂದು ತಪ್ಪಾದ ನಂಬರ್​ಗೆ ಕರೆ ಮಾಡುವ ಮೂಲಕ ಓರ್ವ ಮಹಿಳೆಯನ್ನು ಭೇಟಿಯಾಗಿದ್ದ. ಅಲ್ಲದೆ, ಆಕಸ್ಮಿಕ ಭೇಟಿ ಅವರಿಬ್ಬರ ನಡುವೆ ಪರಿಚಯ ಬೆಳೆದು, ನಿಕಟ ಸಂಬಂಧಕ್ಕೂ ತಿರುಗಿತ್ತು. ಆದರೆ, ಅದೇ ರಾಂಗ್​ ನಂಬರ್​ ಆ ಮಹಿಳೆಯ ಜೀವನದಲ್ಲಿ ಎಂದಿಗೂ ಮರೆಯಲಾಗದ ಘಟನೆಯಾಗಿ ಉಳಿಯುತ್ತೆ ಅಂತ ಆಕೆ ಕನಸಿನಲ್ಲೂ ಭಾವಿಸಿರಲಿಲ್ಲ. ಅಷ್ಟಕ್ಕೂ ಏನಾಯ್ತು ಅನ್ನೋ ಕಂಪ್ಲೀಟ್​ ಮಾಹಿತಿ ಇಲ್ಲಿದೆ.

ಅಕ್ಷಯ್, ಕೊರೊನಾ ಅವಧಿಯಲ್ಲಿ ಪಶ್ಚಿಮ ಗೋದಾವರಿ ಜಿಲ್ಲೆಯ ಮಹಿಳೆಯೊಬ್ಬರ ಜೊತೆ ರಾಂಗ್​ ನಂಬರ್​ ಮೂಲಕ ಸಂಪರ್ಕಕ್ಕೆ ಬಂದಿದ್ದ. ಮೊದಲು ಆಕೆಗೆ ಆತ ಕರೆ ಮಾಡಿದ್ದ. ಆಕೆ ಯಾವುದೇ ಪ್ರತಿಕ್ರಿಯೆ ನೀಡದಿದ್ದಾಗ, ಆಕೆಗೆ ಮಸೇಜ್​ ಕಳುಹಿಸಲು ಪ್ರಾರಂಭಿಸಿದ. ಹೀಗೆ ಇಬ್ಬರ ನಡುವೆ ಪರಿಚಯ ಬೆಳೆಯಿತು. ಆ ಪ್ರಕ್ರಿಯೆಯಲ್ಲಿ, ಆಕೆಯ ಖಾಸಗಿ ವಿವರಗಳನ್ನು ಸಹ ಅಕ್ಷಯ್​ ತಿಳಿದುಕೊಂಡ.

ಖಾಸಗಿ ವಿಚಾರಗಳನ್ನು ಮುಂದಿಟ್ಟು ತನ್ನೊಂದಿಗೆ ಸ್ನೇಹ ಬೆಳೆಸಬೇಕೆಂದು ಮಹಿಳೆಗೆ ಆತ ಬೆದರಿಕೆ ಹಾಕಿದ. ಸ್ನೇಹ ಬೆಳೆಸದಿದ್ದರೆ ಇಲ್ಲದಿದ್ದರೆ, ತನ್ನ ಬಳಿ ಧ್ವನಿ ದಾಖಲೆಗಳಿವೆ. ಅವುಗಳನ್ನು ಆಕೆಯ ಪತಿಗೆ ಕಳುಹಿಸುವುದಾಗಿ ಬೆದರಿಕೆ ಹಾಕಿದ. ಅಲ್ಲದೆ, ತನ್ನ ಆಸೆಯನ್ನು ಈಡೇರಿಸಿಕೊಳ್ಳಲು ಆತ ಮಹಿಳೆಗೆ ಪದೇ ಪದೇ ಕಿರುಕುಳ ನೀಡುತ್ತಿದ್ದ ಎಂದು ವಿಶಾಖಪಟ್ಟಣ ಪೊಲೀಸರು ತಿಳಿಸಿದ್ದಾರೆ.

ಅಕ್ಷಯ್​ನಿಂದ ಕಿರುಕುಳ ನಿಲ್ಲದಿದ್ದಾಗ, ಸಂತ್ರಸ್ತೆಯ ಕುಟುಂಬ ಸದಸ್ಯರು ಪೊಲೀಸ್ ಠಾಣೆಗೆ ದೂರು ನೀಡಿದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು, ತನಿಖೆ ನಡೆಸಿ, ಆರೋಪಿಯ ಮೊಬೈಲ್ ಸಿಗ್ನಲ್ ಆಧರಿಸಿ ತಿರುಪತಿಯಲ್ಲಿ ಆತನನ್ನು ಗುರುತಿಸಿ ಬಂಧಿಸಿದ್ದಾರೆ.

ಆರೋಪಿ ಅಕ್ಷಯ್​ನಿಂದ 65 ಗ್ರಾಂ ಚಿನ್ನ ಮತ್ತು ಸೆಲ್ ಫೋನ್ ವಶಪಡಿಸಿಕೊಳ್ಳಲಾಗಿದೆ. ಅಲ್ಲದೆ, ಬ್ಯಾಂಕಿನಲ್ಲಿದ್ದ ಸುಮಾರು ಎರಡು ಕೋಟಿ ರೂಪಾಯಿ ಮೌಲ್ಯದ ನಗದನ್ನು ವಶಪಡಿಸಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಇಷ್ಟೂ ಹಣವನ್ನು ಮಹಿಳೆಯನ್ನು ಹೆದರಿಸಿ ಆತ ಸುಲಿಗೆ ಮಾಡಿದ್ದ ಅನ್ನೋ ವಿಚಾರ ಬೆಳಕಿಗೆ ಬಂದಿದೆ. ತನ್ನ ಖಾಸಗಿ ವಿಚಾರ ಗಂಡನಿಗೆ ಗೊತ್ತಾಗುತ್ತೆ ಅಂತ ಆಕೆ, ಅಕ್ಷಯ್​ ಕೇಳಿದ್ದನ್ನೆಲ್ಲ ಕೊಟ್ಟಿದ್ದಾಳೆ. ಒಂದೇ ಒಂದು ರಾಂಗ್​ ಕಾಲ್​ ಎಷ್ಟೆಲ್ಲ ಅವಾಂತರ ಮಾಡಿದೆ ನೋಡಿ. ಹೀಗಾಗಿ ಅಪರಿಚಿತರೊಂದಿಗೆ ಸ್ನೇಹ ಬೆಳೆಸುವಾಗ ಬಹಳ ಎಚ್ಚರಿಕೆಯಿಂದ ಇರಬೇಕು ಅನ್ನೋ ಸಂದೇಶವನ್ನು ಈ ರಾಂಗ್​ ಕಾಲ್​ ಸ್ಟೋರಿ ಹೇಳುತ್ತದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net