

ವಿಶಾಖಪಟ್ಟಣಂ: ನಾನು ನಕ್ಸಲೈಟ್ ಆಗಲು ಬಯಸಿದ್ದೆ ಎಂದು ವಿಶಾಖಪಟ್ಟಣಂ ಡಿಐಜಿ ಎಲ್ಕೆವಿ ರಂಗಾ ರಾವ್ ಅವರು ಅಚ್ಚರಿಯ ಹೇಳಿಕೆ ನೀಡಿದ್ದಾರೆ.
ಸಮಾಜ ಹೋಗುತ್ತಿರುವ ಮಾರ್ಗವನ್ನು ತಡೆದು, ಅದಕ್ಕೊಂದು ಆಕಾರ ನೀಡಲು ನಕ್ಸಲಿಸಂ ಒಂದೇ ಮಾರ್ಗ ಎಂದು ಅಂದುಕೊಂಡಿದ್ದೆ ಎಂದು ವಿಜಯನಗರಂ ಜಿಲ್ಲೆಯ ಕೊಟ್ಟವಲಸ ಮಂಡಲದ ಮಂಗಳಪಾಳೇಮ್ ಗ್ರಾಮದಲ್ಲಿ ಶನಿವಾರ ಶ್ರೀ ಗುರುದೇವ ಚಾರಿಟಬಲ್ ಟ್ರಸ್ಟ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ರಂಗಾ ರಾವ್ ಮಾತನಾಡಿದರು. ಜಾತಿ, ಹಣ ಮತ್ತು ಭ್ರಷ್ಟಾಚಾರದಂತಹ ಭೂತಗಳು ಭಾರತದಲ್ಲಿ ಹೆಚ್ಚಾಗಿವೆ. ಇಡೀ ದೇಶವನ್ನು ನಿರ್ಗತಿಕ ಹಾದಿಗೆ ಕೊಂಡೊಯ್ಯುತ್ತಿವೆ ಎಂದಿರುವ ಅವರು ತಮ್ಮ ಹಿಂದಿನ ಘಟನೆಯನ್ನು ಮೆಲಕು ಹಾಕಿದ್ದಾರೆ. ಕೃಷ್ಣ ಜಿಲ್ಲೆಯ ಒಂದು ಸಣ್ಣ ಹಳ್ಳಿಯವರಾಗಿರುವ ರಂಗಾ ರಾವ್, ತಮ್ಮ ಇಂಟರ್ನ್‌ಶಿಪ್ ದಿನಗಳಲ್ಲಿ ವೈದ್ಯರನ್ನು ಭೇಟಿಯಾಗಿ ನಕ್ಸಲರನ್ನು ಸೇರಲು ಕೇಳಿಕೊಂಡಿದ್ದರಂತೆ. ಆದರೆ, ತಮ್ಮ ನಿರ್ಧಾರ ತಪ್ಪು ಎಂಬುದು ವೈದ್ಯರ ಹೇಳಿದ ಮಾತಿನಿಂದಲೇ ಗೊತ್ತಾಗಿತ್ತಂತೆ.
ಬಳಿಕ ತಂದೆಯ ಆಸೆಯಂತೆ ಸಿವಿಲ್ ಪರೀಕ್ಷೆಗೆ ತಯಾರಿ ನಡೆಸಿ 1993ರ ಬ್ಯಾಚ್ನಲ್ಲಿ ಆಯ್ಕೆಯಾಗಿದ್ದಾಗಿ ರಂಗಾ ರಾವ್ ಹೇಳಿದ್ದಾರೆ. ಯಾವ ಇಲಾಖೆ ಎಂಬುದು ಮುಖ್ಯವಲ್ಲ. ನಾನು ಕೆಲಸ ಮಾಡುತ್ತಿರುವ ಪೊಲೀಸ್ ಇಲಾಖೆಯಲ್ಲೂ ನ್ಯಾಯ ಒದಗಿಸುವ ಗುರಿಯೊಂದಿಗೆ ನಡೆಯುತ್ತಿದ್ದೇನೆ. ಪ್ರಾಮಾಣಿಕತೆ ಮತ್ತು ಬದ್ಧತೆಯಿಂದ ಕೆಲಸ ಮಾಡುತ್ತಿದ್ದೇನೆ. ಅಂಬೇಡ್ಕರ್ ಕನಸಾದ ಭ್ರಷ್ಟಾಚಾರ ಮುಕ್ತ ಸಮಾಜಕ್ಕಾಗಿ ಶ್ರಮಿಸುತ್ತಿದ್ದೇನೆಂದರು.
ಇದೇ ವೇಳೆ ಎಲ್ಲರೂ ತಮ್ಮ ಗುರಿಯಡೆಗೆ ಕೆಲಸ ಮಾಡಲು ಕರೆ ನೀಡಿದರು. ಆಂಧ್ರ ಪ್ರದೇಶದ ಹಲವು ಇಲಾಖೆಗಳಲ್ಲಿ ಕೆಲಸ ಮಾಡಿರುವ ರಂಗಾ ರಾವ್ ಅವರು ಹಿಂದೊಮ್ಮೆ ನಕ್ಸಲ್ ವಿರೋಧಿ ಕಾರ್ಯ ಪಡೆಯ ಮುಖ್ಯಸ್ಥರು ಆಗಿದ್ದರು. (ಏಜೆನ್ಸೀಸ್)