

ಶಿಕಾರಿಪುರ: ಎಲ್ಲ ಆಚರಣೆಗಳ ಮೂಲ ಉದ್ದೇಶವೇ ಧರ್ಮೋತ್ಥಾನ. ಧರ್ಮ ಅವಲಂಬಿಸಿದವರು ಎಂದಿಗೂ ಸಾತ್ವಿಕತೆ ಅಂಗಳದಿಂದ ಹೊರಬರುವುದಿಲ್ಲ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಹೇಳಿದರು.
ತಾಲೂಕು ಜಂಗಮ ವೀರಶೈವ ಅರ್ಚಕ ಪುರೋಹಿತರ ಸಂಘದಿಂದ ಗುರುವಾರ ಆಯೋಜಿಸಿದ್ದ ಗೌರಿಶಂಕರ ಕಲ್ಯಾಣೋತ್ಸವ ಧಾರ್ಮಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ದೈವ ಬಲ ನಮ್ಮನ್ನು ಕಾಪಾಡುತ್ತದೆ. ಭಗವಂತನ ಆರಾಧನೆ, ಸ್ಮರಣೆಯಿಂದ ಮನಸ್ಸಿನಲ್ಲಿ ಸದ್ವಿಚಾರಗಳು ಹೆಚ್ಚುತ್ತವೆ ಎಂದು ತಿಳಿಸಿದರು.
ವಿಶ್ವಮಾನವ ಸಂದೇಶ ಸಾರಿದ್ದು ವೀರಶೈವ ಸಮಾಜ. ಗುರು-ಹಿರಿಯರಲ್ಲಿ ಭಕ್ತಿಯಿರಿಸಿ ಲೋಕಕಲ್ಯಾಣಾರ್ಥ ಮಾಡುವ ಇಂತಹ ಧಾರ್ಮಿಕ ಕಾರ್ಯಗಳು ಒಳಿತನ್ನು ಉಂಟುಮಾಡುತ್ತವೆ. ಭಕ್ತರ ಇಷ್ಟಾರ್ಥಗಳು ಸಿದ್ಧಿಯಾಗುತ್ತವೆ. ಗೌರಿಶಂಕರ ಕಲ್ಯಾಣೋತ್ಸವ, ರುದ್ರಾಕ್ಷಿ ಧಾರಣೆ ಹಾಗೂ ಶಿವದೀಕ್ಷೆಗಳಿಂದ ನಮ್ಮ ಸಂಕಷ್ಟಗಳು ದೂರವಾಗಿ ಸರ್ವರಲ್ಲಿ ಸಂತಸ ಮೂಡುತ್ತದೆ ಎಂದರು.
ತೊಗರ್ಸಿ ಮಳೆಹಿರೇಮಠದ ಶ್ರೀ ಮಹಂತ ದೇಶೀಕೇಂದ್ರ ಸ್ವಾಮೀಜಿ, ಸಾಲೂರಿನ ಶ್ರೀ ಗುರುಲಿಂಗ ಜಂಗಮ ಶಿವಾಚಾರ್ಯ ಸ್ವಾಮೀಜಿ, ದಿಂಡದಹಳ್ಳಿ ಶ್ರೀ ಪಶುಪತಿ ಶಿವಾನಂದ ಶಿವಾಚಾರ್ಯ ಸ್ವಾಮೀಜಿ, ಕಡೇನಂದಿಹಳ್ಳಿ ಶ್ರೀ ರೇವಣಸಿದ್ದೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ಎಂಎಡಿಬಿ ಮಾಜಿ ಅಧ್ಯಕ್ಷ ಕೆ.ಎಸ್.ಗುರುಮೂರ್ತಿ, ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಚನ್ನವೀರಪ್ಪ, ತಾಲೂಕು ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷ ಸುಧೀರ್ ಮಾರವಳ್ಳಿ, ರಕ್ಷಣಾ ವೇದಿಕೆ ಗೌರವಾಧ್ಯಕ್ಷ ಶಿವಯ್ಯ ಎಸ್. ಶಾಸ್ತ್ರಿ, ಜಂಗಮ ಸಮಾಜದ ಅಧ್ಯಕ್ಷ ಪುಟ್ಟಸ್ವಾಮಿ, ಜಂಗಮ ವೀರಶೈವ ಅರ್ಚಕ ಪುರೋಹಿತರ ಸಂಘದ ಅಧ್ಯಕ್ಷ ಪ್ರಭುಸ್ವಾಮಿ ಹಿರೇಮಠ, ಶಿವಕುಮಾರ್, ಮಹಂತಯ್ಯ, ವಾಗೀಶಯ್ಯ, ಪ್ರಸಾದಯ್ಯ ಇತರರಿದ್ದರು.