

ಶಿವಮೊಗ್ಗ: ವೀರಶೈವ ಲಿಂಗಾಯತ ಸಮಾಜವನ್ನು ಸಂಘಟನೆ ಮಾಡುವ ವಿಚಾರದಲ್ಲಿ ಯಾವುದೇ ರಂಧ್ರಗಳಿಲ್ಲ. ಕೆಲವರು ಈಗ ರಂಧ್ರ ಕೊರೆಯುವ ಕೆಲಸ ಮಾಡುತ್ತಿದ್ದು ಅವರನ್ನು ಬಲೆ ಹಾಕಬೇಕಿದೆ. ರಂಧ್ರ ಕೊರೆಯುವವರಿಗೆ ವೀರಭದ್ರನ ಅವತಾರ ತಾಳಲೇಬೇಕಾಗುತ್ತದೆ ಎಂದು ಸಿರಿಗೆರೆಯ ತರಳಬಾಳು ಬೃಹನ್ಮಠದ ಶ್ರೀ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಎಚ್ಚರಿಕೆ ನೀಡಿದರು.
ನಗರದ ಚೌಕಿ ಮಠದ ಆವರಣದಲ್ಲಿ ಶುಕ್ರವಾರ ಶಿವಮೊಗ್ಗ ವೀರಶೈವ ಲಿಂಗಾಯಿತ ಸಂಘಟನಾ ವೇದಿಕೆಯಿಂದ ಶ್ರೀ ವೀರಭದ್ರೇಶ್ವರ ಜಯಂತೋತ್ಸವ ಹಾಗೂ ಧರ್ಮಸಭೆ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಸಮಾಜದಲ್ಲಿ ಜಾತಿ ಜಾತಿಗಳ ನಡುವೆ ಸಂಘರ್ಷ ಹೆಚ್ಚಾಗುತ್ತಿದ್ದು ವೀರಭದ್ರ ಜಯಂತಿ ಒಂದು ಜಾತಿಗೆ ಮೀಸಲಾಗಬಾರದು ಎಂದರು.
ಇಂದು ದೀಪ ಹಚ್ಚುವುದು ತುಂಬಾ ಕಷ್ಟ. ಬೆಂಕಿ ಹಚ್ಚುವುದು ಸುಲಭವಾಗಿದೆ. ದೇಶದಲ್ಲಿ ದೀಪ ಹಚ್ಚುವ ಕೆಲಸ ಆಗಬೇಕಿದೆ. ರಾಜಕೀಯಕ್ಕಾಗಿ ಧರ್ಮವನ್ನು ದುರುಪಯೋಗ ಮಾಡಿಕೊಳ್ಳಬಾರದು. ತಾವು ಎಲ್ಲಿರಬೇಕೆಂಬ ಅರಿವು ಜನರಿಗೆ ಇದ್ದರೆ ದೇಶಾದ್ಯಂತ ನಡೆಯುತ್ತಿರುವ ಕೋಲಾಹಲ ಎಂದೋ ನಿಂತು ಹೋಗುತ್ತಿತ್ತು. ಇಂದು ಧರ್ಮ ಕ್ಷೇತ್ರಗಳೇ ಕುರುಕ್ಷೇತ್ರಗಳಾಗಿವೆ. ಇದಕ್ಕೆ ಸಮಾಜ ಸಿಡಿದೆದ್ದಿಲ್ಲ ಎಂದಲ್ಲ. ಸಮಾಜ ಸಿಡಿದೆದ್ದಿದೆ. ಅರಮನೆಗಳು ಅಳಿಸಿ ಹೋಗಿವೆ. ಆದರೆ ಗುರುಮನೆಗಳು ಇಂದಿಗೂ ಇವೆ. ಮುಂದೆಯೂ ಇರಲಿವೆ. ಧರ್ಮದ ಬಗ್ಗೆ ಭಾರತೀಯರಿಗೆ ಇರುವ ಅಪಾರ ನಂಬಿಕೆಯೇ ಇದಕ್ಕೆ ಕಾರಣ ಎಂದು ಹೇಳಿದರು.
ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ರಾಷ್ಟ್ರೀಯ ಅಧ್ಯಕ್ಷ ಪ್ರದೀಪ್ ಕಂಕನಾಡಿ ಮಾತನಾಡಿ, ವೀರಭದ್ರೇಶ್ವರ ಜಯಂತಿ ಆರು ಸಾವಿರಕ್ಕಿಂತ ಅಧಿಕ ಗ್ರಾಮಗಳಲ್ಲಿ ಆಚರಣೆ ಅಗಿರುವುದು ವಿಶೇಷ. ಶರಣರ ಮೂಲ ಬಸವ ಕಲ್ಯಾಣದಲ್ಲಿದೆ. ಆದರೆ ಅದು ಇಂದು ಪೀರ್ ಪಾಷಾನ ಸಾಮ್ರಾಜ್ಯವಾಗಿದೆ. ರಾಜ್ಯದ ಎಲ್ಲ ಮಠಾಧೀಶರು ಪುರಾತತ್ವ ಇಲಾಖೆಯಿಂದ ತನಿಖೆ ಮಾಡಿಸಿ ಮೂಲ ಅನುಭವ ಮಂಟಪವನ್ನು ಸಮಾಜಕ್ಕೆ ಮರಳಿ ಕೊಡಿಸುವ ಕೆಲಸ ಮಾಡಬೇಕಿದೆ ಎಂದು ಮನವಿ ಮಾಡಿದರು.
ಕಾರ್ಯಕ್ರಮ ಉದ್ಘಾಟಿಸಿ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಮಾತನಾಡಿದರು. ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ಜಿಲ್ಲಾಧ್ಯಕ್ಷ ಅಧ್ಯಕ್ಷ ಬಿ.ಶಿವರಾಜ್ ಅಧ್ಯಕ್ಷತೆ ವಹಿಸಿದ್ದರು. ಬಸವೇಶ್ವರ ವೀರಶೈವ ಸಮಾಜದ ಅಧ್ಯಕ್ಷ ಎಸ್.ಎಸ್.ಜ್ಯೋತಿಪ್ರಕಾಶ್ ಪ್ರಾಸ್ತಾವಿಕ ಮಾತನಾಡಿದರು. ಮುಖಂಡ ಎಚ್.ಸಿ.ಯೋಗೇಶ್ ಮಾತನಾಡಿದರು. ಶಾಸಕ ಎಸ್.ಎನ್.ಚನ್ನಬಸಪ್ಪ, ಎಂಎಲ್ಸಿ ಡಾ. ಧನಂಜಯ ಸರ್ಜಿ, ಮುಖಂಡರಾದ ಗೌರಮ್ಮ ಷಡಾಕ್ಷರಿ, ವೀರೇಶ್ ಗೌಡ, ರುದ್ರಮುನಿ ಸಜ್ಜನ್, ಅನಿತಾ ರವಿಶಂಕರ್, ಬಳ್ಳೆಕೆರೆ ಸಂತೋಷ, ಅಂಜಿ ರುದ್ರೇಶ್ ಉಪಸ್ಥಿತರಿದ್ದರು.