

ಪಕ್ಷಿಗಳು ನಗುತ್ತವೆ ಎಂದರೆ ನಿಮಗೆ ನಂಬಲಾಗುತ್ತದೆಯಾ? ಅಥವಾ ಅಚ್ಚರಿಯಾಗುತ್ತಿದೆಯಾ? ಈ ವಿಡಿಯೋ ನೋಡಿದ ಮೇಲಾದರೂ ಹಕ್ಕಿಗಳು ನಗುತ್ತವೆ ಎಂಬುದನ್ನು ನಂಬಲೇಬೇಕು..!
ಐಎಫ್ಎಸ್ ಅಧಿಕಾರಿ ಸುಸಾಂತಾ ನಂದಾ ತಮ್ಮ ಟ್ವಿಟರ್ನಲ್ಲಿ ಎರಡು ಹಕ್ಕಿಗಳು ನಗುತ್ತಿರುವ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ವಿಡಿಯೋ ಈಗ ಸಖತ್ ಟ್ರೆಂಡ್ ಆಗಿದೆ. ಪಕ್ಷಿಗಳು ತಮ್ಮ ಕತ್ತನ್ನು ಮೇಲಕ್ಕೆತ್ತಿ ಅದೊಂಥರ ಗಹಗಹಿಸಿ ನಕ್ಕಂತೆ ಭಾಸವಾಗುತ್ತದೆ.
15 ಸೆಕೆಂಡ್ಗಳ ವಿಡಿಯೋ ಕ್ಲಿಪ್ ಇದು. ಪೋಸ್ಟ್ ಮಾಡಿದ ಕೆಲವೇ ಕ್ಷಣಗಳಲ್ಲಿ ನೆಟ್ಟಿಗರನ್ನು ಆಕರ್ಷಿಸಿದೆ. ಈಗಾಗಲೇ 6ಸಾವಿರಕ್ಕೂ ಹೆಚ್ಚು ವೀವ್ಸ್ ಪಡೆದಿದೆ. ಬಹುತೇಕರು ಎಲ್ಲರೂ ಅಚ್ಚರಿ ವ್ಯಕ್ತಪಡಿಸಿಯೇ ಕಾಮೆಂಟ್ ಬರೆದಿದ್ದಾರೆ.
ವಿಡಿಯೋ ಪೋಸ್ಟ್ ಮಾಡಿರುವ ಸುಸಾಂತಾ ನಂದಾ, ನೋಡಿ ಈ ಕೂಕಬುರ್ರಾ ಹಕ್ಕಿಗಳು ಹೇಗೆ ನಗುತ್ತಿವೆ. ತಮ್ಮ ಕತ್ತುಗಳನ್ನು ನೇರವಾಗಿ ಇಟ್ಟು, ಸ್ವಲ್ಪ ಹಿಂದಕ್ಕೆ ಬಾಗಿಸಿ ತುಂಬ ಒರಟಾಗಿ ನಗುತ್ತಿವೆ. ತಾವು ವಾಸಿಸಬೇಕಾದ ಪ್ರದೇಶವನ್ನು ದೃಢಪಡಿಸಿಕೊಂಡ ಕಾರಣಕ್ಕೆ ಹೀಗೆ ಗಡುಸಾಗಿ ಗಹಗಹಿಸಿ ನಗುತ್ತಿವೆ ಎಂದು ಕ್ಯಾಪ್ಷನ್ ಬರೆದಿದ್ದಾರೆ.
ಹಕ್ಕಿಗಳು ನಗುವುದು ತೀರ ಅಚ್ಚರಿಯ ಸಂಗತಿಯಾದರೂ ಕಿವಿಗೆ ಅಷ್ಟೇನೂ ಮುದ ಕೊಡುವುದಿಲ್ಲ. ಈ ಕೂಕಬುರ್ರಾ ಪಕ್ಷಿಗಳು ಹೆಚ್ಚಾಗಿ ಆಸ್ಟ್ರೇಲಿಯಾ ಮತ್ತು ನ್ಯೂ ಜಿನಿವಾದಲ್ಲಿ ಕಂಡುಬರುತ್ತವೆ. (ಏಜೆನ್ಸೀಸ್)