

ಝಾನ್ಸಿ: ಸಾಮಾಜಿಕ ಜಾಲತಾಣಗಳಲ್ಲಿ ಹಲವಾರು ಭಯಾನಕ ವಿಡಿಯೋ ಹಾಗೂ ಸುದ್ದಿಗಳನ್ನು ಪ್ರತಿನಿತ್ಯ ನೋಡುತ್ತಿರುತ್ತೇವೆ. ಅವುಗಳಲ್ಲಿ ಕೆಲವೊಂದಕ್ಕೆ ವಿವರಣೆಗಳು ಲಭ್ಯವಾಗಿರುತ್ತವೆ. ಆದರೆ ಕೆಲವೊಂದಕ್ಕೆ ವಿವರಣೆ ಸಿಗದೆ ನಿಗೂಢವಾಗೇ ಉಳಿದುಬಿಡುತ್ತವೆ. ಇದೇ ರೀತಿಯಾದ ಮತ್ತೊಂದು ಭಯಾನಕ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಉತ್ತರ ಪ್ರದೇಶದ ಐತಿಹಾಸಿಕ ಝಾನ್ಸಿ ನಗರದ ಕಾಶಿರಾಂ ಪಾರ್ಕ್ ಒಂದರಲ್ಲಿ ಜಿಮ್ ಮಾಡುವ ಯಂತ್ರವೊಂದು ಇದ್ದಕ್ಕಿದಂತೆ ವರ್ಕೌಟ್ ಮಾಡುತ್ತಿರುವ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ನೆಟ್ಟಿಗರ ತಲೆಗೆ ಹುಳ ಬಿಟ್ಟಿದೆ.
ಮೈ ಜುಂ ಎನ್ನುವ ವಿಡಿಯೋ ತುಣಕನ್ನು ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಅವರು ಟ್ವಿಟರ್ನಲ್ಲಿ ಹಂಚಿಕೊಂಡಿದ್ದು, ಸ್ಪಷ್ಟವಾಗಿ ಇದು ಉತ್ತರ ಪ್ರದೇಶದಲ್ಲಿ ಎಲ್ಲೋ ಸಂಭವಿಸಿದೆ. ವಾಟ್ಸ್ಆ್ಯಪ್ ಮೂಲಕ ಈ ವಿಡಿಯೋ ಸ್ವೀಕರಿಸಿದೆ. ಇದರಲ್ಲಿ ಯಾರು ಜೀಮ್ ಮಾಡುತ್ತಿದ್ದಾರೆ? ಎಂದು ಪ್ರಶ್ನಿಸಿ ವಿಡಿಯೋ ಕುರಿತು ಬರೆದುಕೊಂಡಿದ್ದಾರೆ.
ವಿಡಿಯೋದಲ್ಲಿ ಏನಿದೆ?: ಪಾರ್ಕ್ನಲ್ಲಿ ಇಡಲಾಗಿರುವ ಅಪ್ ಆ್ಯಂಡ್ ಡೌನ್ ಶೋಲ್ಡರ್ ವ್ಯಾಯಾಮದ ಯಂತ್ರವೊಂದು ರಾತ್ರಿ ಸಮಯದಲ್ಲಿ ತನ್ನಷ್ಟಕ್ಕೆ ತಾನೇ ವರ್ಕೌಟ್ ಮಾಡುತ್ತಿದೆ. ಅಲ್ಲಿ ಯಾವೊಬ್ಬ ವ್ಯಕ್ತಿಯೂ ಕಾಣದಿರುವುದು ಎಲ್ಲರನ್ನೂ ದಂಗುಬಡಿಸಿದೆ. ಪೊಲೀಸರು ಸೇರಿದಂತೆ ಅನೇಕರು ವಿಡಿಯೋ ಮಾಡಿಕೊಳ್ಳುತ್ತಿದ್ದರು ಯಂತ್ರ ಮಾತ್ರ ತನ್ನ ವರ್ಕೌಟ್ ನಿಲ್ಲಿಸಲಿಲ್ಲ. ಸುಮಾರು 30 ಸೆಕೆಂಡ್ವರೆಗೂ ಹಾಗೇ ವರ್ಕೌಟ್ ಮಾಡಿದೆ.
ವೈರಲ್ ಆಗಿರುವ ವಿಡಿಯೋವನ್ನು ಈಗಾಗಲೇ ಒಂದು ಲಕ್ಷಕ್ಕೂ ಅಧಿಕ ಮಂದಿ ವೀಕ್ಷಣೆ ಮಾಡಿದ್ದಾರೆ. ಇದಕ್ಕೆ ಸಾಕಷ್ಟು ನೆಟ್ಟಿಗರು ಕಾಮೆಂಟ್ ಮಾಡಿದ್ದು, ವ್ಯಾಯಾಮ ಮಾಡುತ್ತಿರುವುದು ಮಿಸ್ಟರ್ ಇಂಡಿಯಾನಾ? ಅಥವಾ ಜಾನ್ ಸೀನಾರವರಾ? ಎಂದು ಹಾಸ್ಯ ಚಟಾಕಿ ಹಾರಿಸಿದ್ದಾರೆ.
ವಿಡಿಯೋದ ಅಸಲಿಯೆತ್ತೇನು?
ಇನ್ನು ವಿಡಿಯೋ ಬಗ್ಗೆ ಸ್ಪಷ್ಟನೆ ನೀಡಿರುವ ಝಾನ್ಸಿ ಪೊಲೀಸರು, ಇದರಲ್ಲಿ ಯಾವುದೇ ಅತಿಂದ್ರಿಯ ಅಥವಾ ಭೂತ ಚೇಷ್ಟೆ ಇಲ್ಲ. ವ್ಯಾಯಾಮ ಯಂತ್ರಕ್ಕೆ ಹೆಚ್ಚಾಗಿ ಗ್ರೀಸ್ ಹಾಕಿದ್ದರಿಂದ ಅದು ತನ್ನಷ್ಟಕ್ಕೆ ತಾನೇ ಕೆಲ ಸೆಕೆಂಡ್ವರೆಗೆ ಚಾಲನೆಯಲ್ಲಿತ್ತು ಎಂದು ತಿಳಿಸಿದ್ದಾರೆ.
ಪಾರ್ಕ್ನ ಸೆಕ್ಯುರಿಟಿ ಹೇಳಿಕೆ
ಇನ್ನು ಝಾನ್ಸಿ ಪಾರ್ಕ್ನಲ್ಲಿ ಕಳೆದ 8 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಸೆಕ್ಯುರಿಟಿ ಗಾರ್ಡ್, ಅಂದಿನಿಂದ ಇಂದಿನವರೆಗೂ ಪಾರ್ಕ್ನಲ್ಲಿ ಯಾವುದೇ ನಿಗೂಢ ಶಕ್ತಿಯ ಚಟುವಟಿಕೆ ಇಲ್ಲ ಎಂದು ಪ್ರಕರಣಕ್ಕೆ ತೆರೆ ಎಳೆದಿದ್ದಾರೆ. (ಏಜೆನ್ಸೀಸ್)