

IIT Baba: ಜ.13ರಿಂದ ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿ ಮಹಾ ಕುಂಭಮೇಳ ವಿಜೃಭಂಣೆಯಿಂದ ನಡೆಯುತ್ತಿದೆ. ಇದು ಜಗತ್ತಿನ ಅತಿದೊಡ್ಡ ಧಾರ್ಮಿಕ ಉತ್ಸವವಾಗಿದ್ದು, 144 ವರ್ಷಗಳಿಗೊಮ್ಮೆ ಸಂಭವಿಸುವ ಮಹಾ ಕುಂಭಮೇಳ. ಪ್ರತಿ 12 ವರ್ಷಗಳಿಗೊಮ್ಮೆ ಸಾಮಾನ್ಯ ಕುಂಭಮೇಳ ನಡೆಯುತ್ತದೆ. ಪ್ರಸ್ತುತ ಮಹಾ ಕುಂಭಮೇಳದ ಭಾಗವಾಗಿ ಸನ್ಯಾಸಿಗಳು, ಧಾರ್ಮಿಕ ಮುಖಂಡರು ಮತ್ತು ಭಕ್ತರು ಸೇರಿದಂತೆ ಒಂದೂವರೆ ಕೋಟಿಗೂ ಅಧಿಕ ಜನರು ತ್ರಿವೇಣಿ ಸಂಗಮದಲ್ಲಿ ಪವಿತ್ರ ಶಾಹಿ ಸ್ನಾನ ಮಾಡಿದ್ದಾರೆ. ಈ ಎಲ್ಲ ಜನಸಂದಣಿಯ ನಡುವೆ, ಓರ್ವ ವ್ಯಕ್ತಿ ಮಾತ್ರ ವಿಶೇಷವಾಗಿ ಜನರ ಗಮನ ಸೆಳೆದಿದ್ದಾರೆ. ಅವರೇ ‘ಐಐಟಿ ಬಾಬಾ’.
ಪ್ರಸ್ತುತ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ಜನರ ಆಕರ್ಷಣಾ ಕೇಂದ್ರವಾಗಿರುವ ಐಐಟಿ ಬಾಬಾ, ಕಳೆದ ಹಲವು ದಿನಗಳಿಂದ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದಾರೆ. ಅಪಾರ ಜ್ಞಾನ, ವಿದ್ಯೆಯಲ್ಲಿ ಪಂಡಿತರಾಗಿರುವ ಅಭಯ್ ಸಿಂಗ್ (ಐಐಟಿ ಬಾಬಾ), ಹೆಚ್ಚಿನ ಸಂಬಳದ ಉದ್ಯೋಗವನ್ನೆಲ್ಲ ಬಿಟ್ಟು, ಇದೀಗ ಆಧ್ಯಾತ್ಮದತ್ತ ಮುಖ ಮಾಡಿದ್ದಾರೆ. ಸದ್ಯ ಇದೇ ಈಗ ಹೆತ್ತವರ ಕಣ್ಣೀರಿಗೆ ಕಾರಣವಾಗಿದೆ. ಮಹಾಕುಂಭ ಮೇಳದಲ್ಲಿ ಭಕ್ತಾಧಿಗಳ ಗಮನ ಸೆಳೆಯುತ್ತಿರುವ ಬಾಬಾ, ತನ್ನ ಬಳಿ ಬರುವ ಜನರಿಗೆ ಹಲವು ಉಪಯುಕ್ತ ವಿಷಯಗಳನ್ನು ತಿಳಿಸುತ್ತ ಆಚರಣೆಯ ಭಾಗವಾಗಿದ್ದಾರೆ. ಪುತ್ರನ ಅನುಪಸ್ಥಿತಿಯಿಂದ ಕಂಗಾಲಾದ ಅಭಯ್ ತಂದೆ, ನಿಮ್ಮ ತಾಯಿಯನ್ನು ನೋಡಿಕೊಳ್ಳಬೇಕು. ಮನೆಯ ಜವಾಬ್ದಾರಿ ನಿನ್ನ ಮೇಲಿದೆ. ದಯವಿಟ್ಟು ಮನೆಗೆ ಹಿಂತಿರುಗಿ ಬಾ ಎಂದು ಮನವಿ ಮಾಡಿಕೊಂಡಿದ್ದಾರೆ.
ಐಐಟಿ ಬಾಬಾ ತಂದೆ ಕರಣ್ ಗ್ರೆವಾಲ್ ಮೂಲತಃ ಹರಿಯಾಣದ ಝಜ್ಜರ್ ನಿವಾಸಿ. ವೃತ್ತಿಯಲ್ಲಿ ವಕೀಲರಾದ ಅವರು, "ನಮ್ಮ ಕುಟುಂಬವು ಅಭಯ್ ಮನೆಗೆ ಮರಳಬೇಕೆಂದು ಒತ್ತಾಯಿಸುತ್ತಿದೆ. ನಮಗೆ ಗೊತ್ತು. ಅಭಯ್ ಅಪಾರ ಸಾಧನೆ ಮಾಡಿದ್ದಾರೆ. ಹೀಗಿರುವಾಗ ಮನೆಗೆ ಹಿಂತಿರುಗುವುದು ಅಷ್ಟು ಸುಲಭದ ಮಾತಲ್ಲ. ಆತ ಸನ್ಯಾಸಿಯಾಗಲು ನಿರ್ಧರಿಸಿರುವ ಬಗ್ಗೆ ಮಾಹಿತಿ ಇದೆ. ಅಭಯ್ ಆಧ್ಯಾತ್ಮದಲ್ಲಿ ಬಹಳ ಆಸಕ್ತಿ ಹೊಂದಿದ್ದರು. ಇದೇ ಕಾರಣದಿಂದ ಸನ್ಯಾಸತ್ವ ತೆಗೆದುಕೊಂಡಿದ್ದಾರೆ. ಕಳೆದ ಆರು ತಿಂಗಳವರೆಗೂ ನಾನು ಅವರೊಂದಿಗೆ ಸಂಪರ್ಕದಲ್ಲಿದ್ದೆ. ಅದಾದ ನಂತರ, ಅವರು ನನ್ನ ಮತ್ತು ನಮ್ಮ ಕುಟುಂಬದೊಂದಿಗಿನ ಎಲ್ಲಾ ಸಂಪರ್ಕವನ್ನು ಕಳೆದುಕೊಂಡಿದ್ದಾರೆ" ಎಂದು ಅಳಲು ತೋಡಿಕೊಂಡರು.
"ಈ ಹಿಂದೆ ಆತ ಹರಿದ್ವಾರದಲ್ಲಿ ಇದ್ದಾರೆ ಎಂಬ ಸುದ್ದಿ ತಿಳಿದು ಅಲ್ಲಿಯೇ ಅವರನ್ನು ಭೇಟಿ ಮಾಡಲು ಮುಂದಾದೆ. ಆದರೆ, ಆಗ ಆಗಲಿಲ್ಲ. ಈಗ ನೋಡಿದ್ರೆ ಸುದ್ದಿವಾಹಿನಿಗಳಲ್ಲಿ ಮತ್ತು ಜಾಲತಾಣಗಳಲ್ಲಿ ಹರಿದಾಡುತ್ತಿದ್ದಾರೆ. ದಯವಿಟ್ಟು ಮನೆಗೆ ಹಿಂತಿರುಗಿ ಬಾ ಎಂದು ನಾವೆಲ್ಲ ಕೋರಿಕೊಳ್ಳುತ್ತೇವೆ. ಅವರ ತಾಯಿ ಮಗನ ಹಿಂತಿರುಗುವಿಕೆಯ ನಿರೀಕ್ಷೆಯಲ್ಲಿದ್ದಾರೆ. ಇದನ್ನು ಅಭಯ್ಗೆ ನೇರವಾಗಿ ಕೇಳಿದ್ದಕ್ಕೆ ಅವರು ಆಗೋದಿಲ್ಲ" ಎಂದು ಹೇಳಿದರು ಎಂದರು. 'ನಾನು ಸನ್ಯಾಸತ್ವ ಸ್ವೀಕರಿಸಿದ್ದೇನೆ. ಈಗ ನನ್ನಿಂದ ಅದು ಅಸಾಧ್ಯ' ಎಂದು ಪುತ್ರ ಹೇಳುತ್ತಿದ್ದಂತೆ ಐಐಟಿ ಬಾಬಾ ಪೋಷಕರು ಕಣ್ಣೀರಿಟ್ಟಿದ್ದಾರೆ,(ಏಜೆನ್ಸೀಸ್).