ಮಕ್ಕಳಿಗೆ ವಾಹನ ಚಲಾಯಿಸಲು ನೀಡದಿರಿ

23 gkp 02
ತಿತಿಮತಿಯಲ್ಲಿ ಇತ್ತೀಚೆಗೆ ಆಯೋಜಿಸ್ದಿ ಅಪರಾಧ ತಡೆ ಮಾಸಾಚರಣೆ ಮತ್ತು ಕಾನೂನು ಅರಿವು ಕಾರ್ಯಕ್ರಮದಲ್ಲಿ ವಿರಾಜಪೇಟೆ ಕ್ರೈಂ ಬ್ರಾಂಚ್ ಎಎಐ ಗಣಪತಿ, ಸಿಬ್ಬಂದಿ ಕಿರಣ್‌ಕುಮಾರ್, ವಸತಿ ಶಾಲೆಯ ಪ್ರಾಂಶುಪಾಲ ಷಡಕ್ಷರಿ ಮತ್ತಿತರರು ಭಾಗವಹಿಸಿದ್ದರು.
Published on

ಗೋಣಿಕೊಪ್ಪ: ತಿತಿಮತಿಯ ಮುರಾರ್ಜಿ ದೇಸಾಯಿ ವಸತಿ ಶಾಲೆ ಹಾಗೂ ವಿರಾಜಪೇಟೆ ನಗರ ಪೋಲಿಸ್ ಠಾಣೆ ಸಹಯೋಗದಲ್ಲಿ ಅಪರಾಧ ತಡೆ ಮಾಸಾಚರಣೆ ಮತ್ತು ಕಾನೂನು ಅರಿವು ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.

ತಿತಿಮತಿಯ ಮುರಾರ್ಜಿ ದೇಸಾಯಿ ವಸತಿ ಶಾಲೆಯ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮ ಉದ್ಘಾಟಿಸಿದ ವಿರಾಜಪೇಟೆ ಕ್ರೈಂ ಬ್ರಾಂಚ್ ಎಎಸ್‌ಐ ಗಣಪತಿ ಮಾತನಾಡಿ, ಮಕ್ಕಳಿಗೆ ಅಪಘಾತ ಮತ್ತು ಸುರಕ್ಷತೆ, ಅಪರಾಧ ತಡೆ ಮತ್ತು ಅದರ ಪರಿಣಾಮಗಳ ಬಗ್ಗೆ ಮಾಹಿತಿ ನೀಡಬೇಕು. ಸಾರ್ವಜನಿಕರು ಯಾವುದೇ ಕಾನೂನು ಬಾಹಿರ ಕೆಲಸಗಳಲ್ಲಿ ತೊಡಗಬಾರದು. ಚಿಕ್ಕಮಕ್ಕಳಿಗೆ ದ್ವಿಚಕ್ರ ವಾಹನ ಚಲಾಯಿಸಲು ಪಾಲಕರು ಅವಕಾಶ ನೀಡಬಾರದು. ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು, ನಾಲ್ಕು ಚಕ್ರ ವಾಹನಗಳನ್ನು ಓಡಿಸಲು ಡಿಎಲ್, ಇನ್ಷುರೆನ್ಸ್ ಹೊಂದಿರುವುದು ಕಡ್ಡಾಯ ಎಂದರು.

ಕಾಲಕ್ಕೆ ತಕ್ಕಂತೆ ಅಪರಾಧಗಳ ಶೈಲಿಯೂ ಬದಲಾಗುತ್ತಿದೆ. ಸೈಬರ್ ಅಪರಾಧ, ದರೋಡೆ, ಮನೆಕಳ್ಳತನ, ಮಾದಕ ವಸ್ತುಗಳ ಸಾಗಾಣಿಕೆ, ಮಾನವ ಕಳ್ಳ ಸಾಗಾಣಿಕೆ ಸೇರಿದಂತೆ ಅನೇಕ ಅಪರಾಧಗಳು ಯಥೇಚ್ಛವಾಗಿ ದಾಖಲಾಗುತ್ತಿದ್ದು, ಜನರು ಈ ವಿಷಯಗಳಲ್ಲಿ ಸಾಕಷ್ಟು ಜಾಗರೂಕರಾಗಬೇಕಿದೆ ಎಂದರು.

ಪೊಲೀಸ್ ಸಿಬ್ಬಂದಿ ಕಿರಣ್‌ಕುಮಾರ್ ಅಪರಾಧ ಮತ್ತು ಕಾನೂನು ಅರಿವು ಕುರಿತು ಮಾಹಿತಿ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮುರಾರ್ಜಿ ವಸತಿ ಶಾಲೆಯ ಪ್ರಾಂಶುಪಾಲ ಷಡಕ್ಷರಿ ಅವರು ಸಮಾಜದಲ್ಲಿ ಉತ್ತಮ ನಾಗರಿಕರಿಗೆ ಸಿಗುವ ಗೌರವ ಹಾಗೂ ಇಂದಿನ ಸಮಾಜದಲ್ಲಿ ಮಕ್ಕಳಿಗೆ ಕಾನೂನಿನ ಅರಿವಿದ್ದರೆ ಆಗುವ ಪ್ರಯೋಜನಗಳ ಕುರಿತು ಮಾಹಿತಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net