

ಎನ್.ಆರ್.ಪುರ: ಆಹಾರ, ವಿಹಾರ, ಆಚಾರ ಹಾಗೂ ವಿಚಾರ ಚೆನ್ನಾಗಿದ್ದರೆ ಪ್ರತಿಯೊಬ್ಬರೂ ಆರೋಗ್ಯವಾಗಿರಬಹುದು ಎಂದು ಉಜರೆ ಯೋಗ ಮತ್ತು ಪ್ರಕೃತಿ ಚಿಕಿತ್ಸೆಯ ಡಾ. ಅಮೃತಾ ಹೇಳಿದರು.
ಕುದುರೆಗುಂಡಿ ಅಶ್ವಗುಂಡೇಶ್ವರ ಸಭಾಭವನದಲ್ಲಿ ಗಾಯತ್ರಿ ವಿಪ್ರ ಮಹಿಳಾ ಬಳಗದ ಆಶ್ರಯದಲ್ಲಿ ಭಾನುವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಜೀವನಶೈಲಿ ಹಾಗೂ ಯೋಗದ ಬಗ್ಗೆ ಮಾತನಾಡಿದರು.
ಜೀವನ ಶೈಲಿ ವ್ಯತ್ಯಾಸವಾಗಿರುವುದರಿಂದಲೇ ಕಾಯಿಲೆಗಳು ಬರುತ್ತಿವೆ. ಚಿಂತೆಯೇ ಅನಾರೋಗ್ಯಕ್ಕೆ ಮೂಲ ಕಾರಣ. ಪ್ರತಿಯೊಬ್ಬರೂ ಯೋಗ, ಧ್ಯಾನ, ಪ್ರಾಣಾಯಾಮ ಮಾಡಿ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದರು.
ಉಜರೆ ಯೋಗ ಮತ್ತು ಪ್ರಕೃತಿ ಚಿಕಿತ್ಸೆಯ ಡಾ. ಸಂಗೀತಾ ಮಹಿಳೆಯರ ಆರೋಗ್ಯ ಹಾಗೂ ಆಹಾರ ಕ್ರಮದ ಬಗ್ಗೆ ಮಾತನಾಡಿ, ಮಹಿಳೆಯರಿಗೆ ಋತುಚಕ್ರದ ಸಮಸ್ಯೆ ಹೆಚ್ಚಾಗಿ ಕಾಡುತ್ತದೆ. ಆ ಸಮಯದಲ್ಲಿ ಮಂಡಿ, ಸೊಂಟ ನೋವು ಕಾಣಿಸುತ್ತದೆ. ಮಹಿಳೆಯರು ಸಾಕಷ್ಟು ನೀರು ಕುಡಿಯಬೇಕು. ಅನ್ನದ ಜತೆಗೆ ಸಿರಿಧಾನ್ಯ, ಜೋಳ, ರಾಗಿ ಸೇವಿಸಬೇಕು. ಪ್ರತಿನಿತ್ಯ ವ್ಯಾಯಾಮ ಮಾಡಬೇಕು ಎಂದು ಸಲಹೆ ನೀಡಿದರು.
ಗಾಯತ್ರಿ ವಿಪ್ರ ಮಹಿಳಾ ಬಳಗದ ಸಂಘಟನಾ ಕಾರ್ಯದರ್ಶಿ ಪಲ್ಲವಿ ಪ್ರಶಾಂತ್ ಮಾತನಾಡಿ, ಭಾರತ ಪ್ರಪಂಚಕ್ಕೆ ಯೋಗ ಕಲಿಸಿದೆ. ವಿದೇಶಿಯರು ಯೋಗದ ಬಗ್ಗೆ ಅಭಿಮಾನ ಬೆಳೆಸಿಕೊಂಡಿದ್ದಾರೆ. ದೇಹ ಹಾಗೂ ಮನಸ್ಸನ್ನು ಹತೋಟಿಯಲ್ಲಿಟ್ಟುಕೊಳ್ಳಲು ಯೋಗ ಸಹಕಾರಿ ಎಂದರು.
ಗಾಯತ್ರಿ ವಿಪ್ರ ಮಹಿಳಾ ಬಳಗದ ಅಧ್ಯಕ್ಷೆ ಮಮತಾ ಪ್ರಭಾಕರ್, ಶ್ರೀಲಕ್ಷ್ಮೀ, ವೀಣಾ, ಸುಧಾ ಇದ್ದರು.