

ಅರಕಲಗೂಡು: ಸಿಇಟಿ ಪರೀಕ್ಷೆ ಪ್ರವೇಶ ಸಮಯದಲ್ಲಿ ವಿದ್ಯಾರ್ಥಿಗಳಿಗೆ ಜನಿವಾರ ತೆಗೆಸಿದ ಘಟನೆ ಖಂಡಿಸಿ ಪಟ್ಟಣದಲ್ಲಿ ಜನಿವಾರ ಧಾರಣೆ ಮಾಡುವ ವಿವಿಧ ಸಮುದಾಯಗಳು ಮುಖಂಡರು ಪ್ರತಿಭಟನೆ ನಡೆಸಿದರು.
ಕೋಟೆ ಕೋದಂಡರಾಮ ಪ್ರವಚನ ಮಂದಿರದಲ್ಲಿ ಸಭೆ ಸೇರಿದ ತಾಲೂಕು ಬ್ರಾಹ್ಮಣ ಮಹಾಸಭಾ, ಆರ್ಯ ವೈಶ್ಯ ಮಂಡಳಿ, ವಿಶ್ವ ಕರ್ಮ ಸಮುದಾಯ, ದೇವಾಂಗ ಸಮುದಾಯದ ಮುಖಂಡರು ಘಟನೆ ಖಂಡಿಸಿ ಘೋಷಣೆಗಳನ್ನು ಕೂಗುತ್ತಾ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು. ಅನಕೃ ವೃತ್ತ ಹಾಗೂ ದೊಡ್ಡಮ್ಮ ವೃತ್ತಗಳಲ್ಲಿ ಮಾನವ ಸರಪಳಿ ನಿರ್ಮಿಸಿದರು. ಬಳಿಕ ಅರೇಮಾದನಹಳ್ಳಿ ವಿಶ್ವ ಬ್ರಾಹ್ಮಣ ಮಠದ ಶಿವಸುಜ್ಞಾನ ತೀರ್ಥ ಸ್ವಾಮೀಜಿಗಳ ನೇತೃತ್ವದಲ್ಲಿ ತಾಲೂಕು ಕಚೇರಿಗೆ ತೆರಳಿ ಪ್ರತಿಭಟನೆ ನಡೆಸಿದರು.
ಅರೇಮಾದನಹಳ್ಳಿ ಮಠದ ಶ್ರೀ ಶಿವಸುಜ್ಞಾನತೀರ್ಥ ಸ್ವಾಮೀಜಿ ಮಾತನಾಡಿ, ಸಿಇಟಿ ಪರೀಕ್ಷೆ ವೇಳೆ ವಿದ್ಯಾರ್ಥಿಗಳಿಗೆ ಜನಿವಾರ ತೆಗೆಸಿದ್ದಲ್ಲದೆ ಪರೀಕ್ಷೆಗೆ ಕೂರಲು ಅವಕಾಶ ನೀಡದ ಘಟನೆ ತೀವ್ರ ಖಂಡನೀಯ. ಜನಿವಾರ ಧಾರಣೆ ಸನಾತನ ಧರ್ಮದ ಪವಿತ್ರ ಸಂಕೇತವಾಗಿದೆ. ಇದನ್ನು ತೆಗೆಸಿ ಅಪಮಾನ ಮಾಡಿರುವುದು ಅತ್ಯಂತ ಖಂಡನೀಯ. ಇದಕ್ಕೆ ಕಾರಣರಾದವರ ಮೇಲೆ ಕಠಿಣವಾದ ಕಾನೂನು ಕ್ರಮ ಕೈಗೊಳ್ಳುವ ಜತೆಗೆ ಇನ್ನೊಮ್ಮೆ ಇದು ಮರಕಳಿಸದಂತೆ ನೋಡಿಕೊಳ್ಳಬೇಕು ಎಂದು ಎಚ್ಚರಿಸಿದರು.
ವಕೀಲ ಎ.ಆರ್.ಜನಾರ್ಧನಗುಪ್ತ, ಮುಖಂಡರಾದ ಶ್ರೀನಿವಾಸ್‌ಮೂರ್ತಿ, ಪುಷ್ಪಾ ಹರೀಶ್, ದೇವಕಿ ಚಂದ್ರಶೇಖರ್ ಮಾತನಾಡಿ ಘಟನೆಯನ್ನು ತೀವ್ರವಾಗಿ ಖಂಡಿಸಿದರು. ಬಳಿಕ ತಹಸೀಲ್ದಾರ್ ಕೆ.ಸಿ ಸೌಮ್ಯಾ ಅವರಿಗೆ ಮನವಿ ಸಲ್ಲಿಸಲಾಯಿತು. ವಿವಿಧ ಸಮುದಾಯಗಳ ಮುಖಂಡರಾದ ಎ.ಎಸ್.ಹಿರಣ್ಣಯ್ಯ, ಎ.ಎನ್.ಗಣೇಶಮೂರ್ತಿ, ವಾಸುದೇವ್, ಗಣೇಶ್, ನರಸಿಂಹಮೂರ್ತಿ, ಪಿ.ಎನ್.ರಂಗನಾಥ್, ಎ.ಎನ್.ನಾಗೇಂದ್ರ, ಪಿ.ಎನ್.ರಮೇಶ್, ಕಿರಣ್‌ಕುಮಾರ್, ಪ್ರವೀಣ್‌ಕುಮಾರ್, ಎ.ಆರ್.ಸುಬ್ಬರಾವ್, ವೆಂಕಟೇಶಮೂರ್ತಿ, ವಿಪ್ರ ಮಹಿಳಾ ಬಳಗದ ಅಧ್ಯಕ್ಷೆ ರುಕ್ಮಿಣಿ, ಕಾರ್ಯದರ್ಶಿ ಪಿ.ಎಸ್.ಸುಧಾ, ಖಜಾಂಚಿ ಸವಿತಾ ಪಾಲ್ಗೊಂಡಿದ್ದರು.