

ಶಿವಮೊಗ್ಗ: ಜಿಲ್ಲೆಯಲ್ಲಿ ಟೋಲ್ ವಿರುದ್ಧದ ಹೋರಾಟ ಎರಡನೇ ದಿನವಾದ ಗುರುವಾರವೂ ಮುಂದುವರಿಯಿತು. ಶಿವಮೊಗ್ಗ-ಹಾನಗಲ್ ನಡುವೆ ಅಳವಡಿಸಿರುವ ಎರಡು ಟೋಲ್‌ಗೇಟ್‌ಗಳನ್ನು ತೆರವು ಮಾಡಬೇಕೆಂದು ಆಗ್ರಹಿಸಿ ಶಿಕಾರಿಪುರ ಟೋಲ್‌ಗೇಟ್ ವಿರೋಧಿ ಹೋರಾಟ ಸಮಿತಿ ಪ್ರಮುಖರು ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಅವೈಜ್ಞಾನಿಕವಾಗಿ ನಿರ್ಮಾಣಗೊಂಡಿರುವ ಟೋಲ್ ಅನ್ನು ಕೂಡಲೇ ತೆಗೆದು ಹಾಕಬೇಕು. 2013ರ ರಾಷ್ಟ್ರೀಯ ಹೆದ್ದಾರಿ ಕಾಯ್ದೆಯಡಿ ಟೋಲ್ ನಿರ್ಮಿಸಲು ಹಲವು ನಿಬಂಧನೆ ವಿಧಿಸಲಾಗಿದೆ. ಆದರೆ ರಾಜ್ಯ ಸರ್ಕಾರ ಆ ನಿಯಮ ಪಾಲನೆ ಮಾಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಯಾವುದೇ ಟೋಲ್‌ಗಳ ನಡುವೆ ಕನಿಷ್ಠ 60 ಕಿ.ಮೀ ಅಂತರವಿರಬೇಕು. ಆದರೆ ಸವಳಂಗ ಸಮೀಪದ ಕಲ್ಲಾಪುರ ಮತ್ತು ಶಿರಾಳಕೊಪ್ಪ ಸಮೀಪದ ಕುಟ್ರಳ್ಳಿಯಲ್ಲಿ ನಿರ್ಮಿಸಿರುವ ಟೋಲ್‌ಗೇಟ್‌ಗಳು ಕೇವಲ 30 ಕಿ.ಮೀ ಅಂತರದಲ್ಲಿವೆ. ಇದು ನಿಯಮಬಾಹಿರ. 20 ಕಿ.ಮೀ ಮಾತ್ರ ಸಂಚರಿಸುವವರಿಗೆ ತಿಂಗಳಿಗೆ 150 ರೂ. ಪಾಸ್ ನೀಡಲು ಅವಕಾಶವಿದೆ. ಅದನ್ನೂ ಅನುಸರಿಸಿಲ್ಲ ಎಂದು ದೂರಿದರು.
ಟೋಲ್‌ಗೇಟ್‌ಗಳು ಬಡವರಿಗೆ ಹೊರೆಯಾಗಿವೆ. ಸ್ಥಳೀಯ ನಿವಾಸಿಗಳು, ರೈತರಿಗೆ, ಆಸ್ಪತ್ರೆಗೆ ತೆರಳುವವರಿಗೆ ಆರ್ಥಿಕ ಹೊರೆಯಾಗಿದೆ. ಕೂಡಲೇ ಟೋಲ್‌ಗೇಟ್‌ಗಳನ್ನು ತೆರವು ಮಾಡಬೇಕೆಂದು ಒತ್ತಾಯಿಸಿದರು.
ಶಿಕಾರಿಪುರ ಟೋಲ್‌ಗೇಟ್ ವಿರೋಧಿ ಹೋರಾಟ ಸಮಿತಿ ಅಧ್ಯಕ್ಷ ಶಿವರಾಜ್ ಪಾಟೀಲ್, ಪ್ರಮುಖರಾದ ವಿನಾಯಕ ಪಾಟೀಲ್, ಅಬ್ದುಲ್ ನವೀದ್, ಪುಟ್ಟಣ್ಣ ಗೌಡ, ಶಿವರಾಜ್, ಶೇಖರಪ್ಪ, ಮನ್ಸೂರ್ ಖಾನ್, ಅಬೀದ್, ಹರೀಶ್ ಗೌಡ, ಮಂಜುನಾಥ್ ನಾಯ್ಕ ಇತರರಿದ್ದರು.