

ಶಿಕಾರಿಪುರ: ತಾಲೂಕಿನ ಕೆಲವು ಖಾಸಗಿ ಶಾಲೆಗಳಲ್ಲಿ ಸಂವಿಧಾನದ ಪೀಠಿಕೆಯನ್ನು ಓದಿಸುತ್ತಿಲ್ಲ ಎಂದು ಆರೋಪಿಸಿ ಯುವ ಕಾಂಗ್ರೆಸ್ ಕಾರ್ಯಕರ್ತರು ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿದರು.
ಸ್ವಾತಂತ್ರ್ಯ ಪೂರ್ವದಲ್ಲಿ ಕೆಲವೇ ಸಮುದಾಯಗಳಿಗೆ ಓದುವ ಹಕ್ಕು ಇತ್ತು. ಆದರೆ ಡಾ. ಅಂಬೇಡ್ಕರ್ ಅವರ ಪ್ರಯತ್ನದ ಫಲವಾಗಿ ಮತ್ತು ಸಾಮಾಜಿಕ ಕಳಕಳಿಯಿಂದ ಎಲ್ಲ ಸಮುದಾಯದ ಮಕ್ಕಳು ಓದಿ ವಿದ್ಯಾವಂತರಾಗಿದ್ದಾರೆ. ಆದರೆ ಅಂಬೇಡ್ಕರ್ ವಿರಚಿತ ಸಂವಿಧಾನದ ಪೀಠಿಕೆಯನ್ನು ಪ್ರತಿ ಶಾಲೆಯಲ್ಲೂ ಓದಿಸಬೇಕೆಂಬ ಸರ್ಕಾರದ ಆದೇಶವಿದ್ದರೂ ಕೆಲವು ಖಾಸಗಿ ಶಾಲೆಗಳಲ್ಲಿ ಓದಿಸುತ್ತಿಲ್ಲ. ಇಂತಹ ಶಾಲೆಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಸಂವಿಧಾನ ನಮ್ಮ ಶ್ರೇಷ್ಠ ಗ್ರಂಥ. ಮುಂದಿನ ದಿನಗಳಲ್ಲಿ ಪ್ರತಿ ಶಾಲೆಯಲ್ಲೂ ಸಂವಿಧಾನ ಪೀಠಿಕೆಯನ್ನು ಓದಿಸದಿದ್ದರೆ ಯುವ ಕಾಂಗ್ರೆಸ್‌ನಿಂದ ಆಯಾ ಶಾಲೆಗಳ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ಪ್ರಮುಖರಾದ ಮಂಜುನಾಯ್ಕ, ರಾಘವೇಂದ್ರ ನಾಯಕ್, ಮಂಜುನಾಥ್, ಚರಣ್‌ರಾಜ್, ಸೈಯದ್ ಹುಸೇನ್, ಭಂಡಾರಿ ಮಾಲತೇಶ್, ಸುನಿಲ್, ಮಯೂರ್ ದರ್ಶನ್, ಸದ್ದು ಬಳ್ಳಿಗಾವಿ, ಗೋಪಿಕೃಷ್ಣ, ಹನುಮಂತ ನಾಯ್ಕ, ಸುಫಿಯಾನ್, ನಿಖಿಲ್, ಬಸವರಾಜ್, ಚಂದ್ರು ಇತರರಿದ್ದರು.