ವಿನಯಾಪ್ರಸಾದ್ ವಿಜಯಾನಂದ: ಕನಸು ಕಾಣುವ ಪ್ರತಿಯೊಬ್ಬರೂ ನೋಡಲೇಬೇಕಾದ ಚಿತ್ರ…

Vinayaprasad 2
Published on

ಬೆಂಗಳೂರು: ಡಾ. ವಿಜಯ ಸಂಕೇಶ್ವರ ಜೀವನಾಧಾರಿತ ‘ವಿಜಯಾನಂದ’ ಚಿತ್ರದ ಬಿಡುಗಡೆ ದಿನಾಂಕ ಹತ್ತಿರವಾದಂತೆ, ಜನರ ಕುತೂಹಲ, ನಿರೀಕ್ಷೆಗಳೂ ಇಮ್ಮಡಿಯಾಗಿವೆ. ಕನ್ನಡಿಗರೇ ನಿರ್ವಿುಸಿರುವ ಕನ್ನಡದ ಸಾಧಕನ ಕುರಿತ ಮಟ್ಟ ಮೊದಲ ಪ್ಯಾನ್ ಇಂಡಿಯಾ ಬಯೋಪಿಕ್ ಕಣ್ತುಂಬಿಕೊಳ್ಳಲು ದೇಶಾದ್ಯಂತ ಕಾತರತೆ ಹೆಚ್ಚಿದೆ. ಚಿತ್ರದಲ್ಲಿ ಅನಂತ್ ನಾಗ್, ರವಿಚಂದ್ರನ್, ವಿನಯಾ ಪ್ರಸಾದ್ ಅವರಂತಹ ದಿಗ್ಗಜರು, ನಿಹಾಲ್, ಭರತ್ ಬೋಪಣ್ಣ, ಸಿರಿ ಪ್ರಹ್ಲಾದ್, ಅರ್ಚನಾ ಕೊಟ್ಟಿಗೆ ಅವರಂತಹ ಯುವ ಕಲಾವಿದರು ನಟಿಸಿದ್ದಾರೆ. ಡಾ. ವಿಜಯ ಸಂಕೇಶ್ವರ ತಂದೆ ಬಿ.ಜಿ. ಸಂಕೇಶ್ವರ ಅವರ ಪಾತ್ರದಲ್ಲಿ ಅನಂತ್ ನಾಗ್ ಹಾಗೂ ಅವರ ತಾಯಿ ಚಂದ್ರಮ್ಮನವರ ಪಾತ್ರದಲ್ಲಿ ವಿನಯಾ ಪ್ರಸಾದ್ ಅಭಿನಯಿಸಿದ್ದಾರೆ. ವಿಜಯವಾಣಿ ಜತೆ ತಮ್ಮ ಪಾತ್ರದ ಬಗ್ಗೆ ಮಾತನಾಡಿದ ವಿನಯಾ ಪ್ರಸಾದ್, ‘32 ವರ್ಷಗಳ ಸಿನಿಮಾ ಜೀವನದಲ್ಲಿ ಹಲವಾರು ಚಿತ್ರಗಳಲ್ಲಿ, ಬೇರೆ ಬೇರೆ ಭಾಷೆಗಳಲ್ಲಿ ನಟಿಸಿದ್ದೇನೆ. ಆದರೆ, ಇದುವರೆಗೆ ನನಗೆ ಅತ್ಯಂತ ಖುಷಿ ನೀಡಿದ, ಗೌರವ ತಂದ ಪಾತ್ರ ಮತ್ತು ಸಿನಿಮಾ ಇದು. ಡಾ. ವಿಜಯ ಸಂಕೇಶ್ವರ ಸರ್ ಮತ್ತು ಡಾ. ಆನಂದ ಸಂಕೇಶ್ವರ ಅವರಿಗೆ ಹ್ಯಾಟ್ಸ್ ಆಫ್. ನಾನು ಚಂದ್ರಮ್ಮನವರ ಪಾತ್ರದಲ್ಲಿ ನಟಿಸಿದ್ದೇನೆ. ಇದು ನನ್ನ ಕರಿಯರ್​ನ ಮೊದಲ ವಾಸ್ತವದ ಪಾತ್ರ. ಅವರ ಕಿರಿಯ ವಯಸ್ಸಿನ ಪಾತ್ರದಲ್ಲಿ ನನ್ನ ಮಗಳು ಪ್ರಥಮಾ ಪ್ರಸಾದ್ ನಟಿಸಿದ್ದಾಳೆ. ಅವರು 30 ವಯಸ್ಸಿನಿಂದ 70 ವಯಸ್ಸಿನವರೆಗಿನ ಜರ್ನಿ ನನ್ನ ಪಾತ್ರದ ಮೂಲಕ ಹೇಳಿದ್ದೇವೆ. ಬೇರೆ ಬೇರೆ ವಯಸ್ಸಿನಲ್ಲಿ ಬೇರೆ ಬೇರೆ ವೇಷಭೂಷಣದ ಜತೆಗೆ ಅಭಿನಯವೂ ಬದಲಾಗಬೇಕು. ಅವರು ತಲೆ ಮೇಲೆ ಸೆರಗು ಹಾಕಿಕೊಳ್ಳುವುದು, ರೊಟ್ಟಿ ತಟ್ಟುತ್ತಿದ್ದ ರೀತಿ, ಊಟ ಮಾಡುವುದು, ಮಾತನಾಡುವುದು, ಅವರ ಹಾವ ಭಾವ, ಆಗ ಮೇಕಪ್ ಇರಲಿಲ್ಲ. ಕಣ್​ಕಪು್ಪ ಹಾಕಿಕೊಳ್ಳುತ್ತಿದ್ದರು. ಹಬ್ಬದ ದಿನಗಳಲ್ಲಿ ಕೆನ್ನೆಗೆ ಅರಿಶಿಣ ಹಚ್ಚಿಕೊಳ್ಳುತ್ತಿದ್ದರು. ಹಣೆಗೆ ಕುಂಕುಮ ಇಟ್ಟುಕೊಳ್ಳುತ್ತಿದ್ದರು. ಹೀಗೆ ಪ್ರತಿಯೊಂದು ವಿಷಯದಲ್ಲು ಅವರ ನಿಜ ಜೀವನಕ್ಕೆ ಹತ್ತಿರವಿರುವಂತೆ ಚಿತ್ರೀಕರಿಸಿದ್ದೇವೆ. ಆ ಜರ್ನಿಯನ್ನು ನಾನು ಬಹಳ ಎಂಜಾಯ್ ಮಾಡಿದ್ದೇನೆ’ ಎನ್ನುತ್ತಾರೆ.

ಕನಸು ಕಾಣುವ ಪ್ರತಿಯೊಬ್ಬರೂ ನೋಡಲೇಬೇಕಾದ ಚಿತ್ರ...

ಶ್ರೀಮತಿ ಲಲಿತಾ ಸಂಕೇಶ್ವರ, ಶ್ರೀಮತಿ ವಾಣಿ ಸಂಕೇಶ್ವರ ಅವರ ಜತೆ ವಿನಯಾ ಪ್ರಸಾದ್

ಚಿತ್ರೀಕರಣದ ಸಮಯದಲ್ಲಿ ಆದ ಅನುಭವಗಳ ಬುತ್ತಿ ಬಿಚ್ಚಿಡುವ ವಿನಯಾ ಪ್ರಸಾದ್, ‘ಆಗಾಗ ಲಲಿತಮ್ಮ (ಶ್ರೀಮತಿ ಲಲಿತಾ ಸಂಕೇಶ್ವರ) ಚಿತ್ರೀಕರಣದ ಸ್ಥಳಕ್ಕೆ ಬರುತ್ತಿದ್ದರು. ನಮ್ಮತ್ತಿ ಹೀಗಿರುತ್ತಿದ್ರು ರೀ.. ನೀವು ನಮ್ಮತ್ತಿ ಆಗಿದ್ದೀರಾ.. ಅಂತೆಲ್ಲ ಆಪ್ತವಾಗಿ ಹೇಳುತ್ತಿದ್ದರು. ಒಮ್ಮೊಮ್ಮೆ ತಾವೇ ಮನೆಯಿಂದ ಊಟ ಕಟ್ಟಿಸಿಕೊಂಡು ಬರುತ್ತಿದ್ದರು. ಎರಡು ದಿನಗಳಿಗೊಮ್ಮೆ ಡಾ. ವಿಜಯ ಸಂಕೇಶ್ವರ ಸರ್ ಕೂಡ ಸೆಟ್​ಗೆ ಬರುತ್ತಿದ್ದರು.‘ಲಾರಿ ಬಗ್ಗೆ ಏನೇ ಕೇಳಿ ಹೇಳುತ್ತೇನೆ. ಆದರೆ ಸಿನಿಮಾ ಅಂದರೆ ಅದನ್ನು ನೋಡುವುದಷ್ಟೇ ನನಗೆ ಗೊತ್ತು. ಈ ಕ್ಷೇತ್ರದಲ್ಲಿ ನಾನು ವಿದ್ಯಾರ್ಥಿ’ ಎಂದು ಹೇಳಿದ್ದು ನನಗೆ ನೆನಪಿದೆ. ಡಾ. ಆನಂದ ಸಂಕೇಶ್ವರ ಅವರು ಎಷ್ಟೇ ಕೆಲಸಗಳಿದ್ದರೂ, ಬಿಜಿಯಿದ್ದರೂ ಸಿನಿಮಾಗೆ ಸಮಯ ಕೊಡುತ್ತಿದ್ದರು. ಪ್ರತಿದಿನ ರಾತ್ರಿ ಚಿತ್ರತಂಡದವರು ಅಂದು ಚಿತ್ರೀಕರಿಸಿದ ವಿಡಿಯೋಗಳನ್ನು ಸಂಕಲನ ಮಾಡಿ ಅವರಿಗೆ ತೋರಿಸುತ್ತಿದ್ದರು. ಅವರ ಸಿನಿಮಾ ಕಾಳಜಿ ಅದ್ಭುತ. ಪ್ರತಿಫಲ ಏನೇ ಬರಲಿ ಆದರೆ ಮಾಡುವ ಕೆಲಸ ಚೆನ್ನಾಗಿ ಮಾಡಬೇಕು ಅಂತ ಮೊದಲ ಪ್ರಯತ್ನದಲ್ಲಿಯೇ ನಿರ್ವಪಕರಾಗಿ ಇಷ್ಟು ಉತ್ಸಾಹ ತೋರಿದ್ದಾರೆ. ವಿಆರ್​ಎಲ್ ಫಿಲಂ ಪ್ರೊಡಕ್ಷನ್ಸ್ ಸಂಸ್ಥೆ ಇನ್ನಷ್ಟು ಸಿನಿಮಾಗಳನ್ನು ಮಾಡಬೇಕು. ಅದರಿಂದ ಕನ್ನಡ ಚಿತ್ರರಂಗದ ಬೆಲೆ ಮತ್ತಷ್ಟು ಹೆಚ್ಚಲಿದೆ. ‘ವಿಜಯಾನಂದ’ ಚಿತ್ರವನ್ನು, ಕನಸು ಕಾಣುವ ಪ್ರತಿಯೊಬ್ಬರೂ ನೋಡಲೇಬೇಕು. ಏಕೆಂದರೆ ಇದು ಆ ಕನಸನ್ನು ಹೇಗೆ ನನಸು ಮಾಡಿಕೊಳ್ಳಬಹುದು ಎಂಬ ಉತ್ಸಾಹ ತುಂಬುವ ಸಿನಿಮಾ’ ಎಂದು ಹೇಳಿಕೊಳ್ಳುತ್ತಾರೆ.

ಅನಂತ್ ನಾಗ್ ಅಭಿನಯವಲ್ಲ, ಅದೊಂದು ಅಧ್ಯಯನ

ನಿರ್ದೇಶಕಿ ರಿಷಿಕಾ ಶರ್ಮಾ ಬಗ್ಗೆ ವಿನಯಾ ಪ್ರಸಾದ್, ‘ರಿಷಿಕಾ ಮೊದಲೇ ಸಾಕಷ್ಟು ತಯಾರಿ ಮಾಡಿಕೊಂಡಿದ್ದರು. ಎಲ್ಲಿಯೂ, ಯಾವುದೇ ಗೊಂದಲವಿಲ್ಲದೇ ಅಚ್ಚುಕಟ್ಟಾಗಿ ಪ್ಲಾ್ಯನ್ ಮಾಡಿಕೊಂಡಿರುತ್ತಿದ್ದರು. ಯಾವುದೇ ಪ್ರಶ್ನೆ ಕೇಳಿದರೂ, ಅವರ ಬಳಿ ಉತ್ತರವಿರುತ್ತಿತ್ತು. ಅವರು ಪಾತ್ರದ ವಿವರಣೆ ನೀಡುತ್ತಿದ್ದರೆ, ಆ ಪಾತ್ರ ನನ್ನ ಕಣ್ಣ ಮುಂದೆಯೇ ಬರುತ್ತಿತ್ತು, ಅಷ್ಟರ ಮಟ್ಟಿಗೆ ಸಿದ್ಧರಾಗಿದ್ದರು’ ಎಂದು ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಇನ್ನು ಅನಂತ್ ನಾಗ್ ಜತೆ ನಟಿಸಿದ ಕುರಿತು ಹೇಳಿಕೊಳ್ಳುವ ಅವರು, ‘ನಾನು ನಟಿಸಿದ ಮೊದಲ ಸಿನಿಮಾ ‘ಗಣೇಶನ ಮದುವೆ’. ಆ ಚಿತ್ರದಿಂದ ಇವತ್ತಿನವರೆಗೂ ಅನಂತ್ ನಾಗ್ ಸರ್ ಜತೆ ನಟಿಸುವುದು ಎಂದರೆ, ಅದೊಂದು ಅಧ್ಯಯನ. ಅವರು ಅಷ್ಟು ಸಿದ್ಧತೆ ಮಾಡಿಕೊಂಡಿರುತ್ತಿದ್ದರು’ ಎಂದು ಸಂತಸ ವ್ಯಕ್ತಪಡಿಸುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net