ವಿನಯ್ ಗುರೂಜಿ ವಿರುದ್ಧದ ವೀಡಿಯೋ: ಭಕ್ತವೃಂದದ ತೀವ್ರ ಆಕ್ಷೇಪ

vinay
Published on

ಶಿವಮೊಗ್ಗ: ಸಾಮಾಜಿಕ ಜಾಲತಾಣದಲ್ಲಿ ವಿನಯ್ ಗುರೂಜಿ ಅವರ ಚಾರಿತ್ರೃವಧೆ ಮಾಡುವಂತಹ ವೀಡಿಯೋ ಹರಿದಾಡುತ್ತಿರುವುದು ಗುರೂಜಿ ಭಕ್ತರನ್ನು ಕೆರಳಿಸಿದೆ. ಸುಳ್ಳು ಸುದ್ದಿ ಹರಿದಾಡುವಂತೆ ಮಾಡುವವರ ವಿರುದ್ಧ ಕಠಿಣ ಕ್ರಮಕ್ಕೆ ಭಕ್ತವೃಂದ ಒತ್ತಾಯಿಸಿದೆ.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿನಯ್ ಗುರೂಜಿ ಭಕ್ತರಾದ ರಾಘವೇಂದ್ರ ಹೆಬ್ಬಾರ್, ಗುರೂಜಿ ಬಗ್ಗೆ ಹರಿದಾಡುತ್ತಿರುವ ವೀಡಿಯೋ ಷಡ್ಯಂತ್ರದ ಭಾಗವಾಗಿದೆ. ಇದನ್ನು ಖಂಡಿಸಿ ಎಲ್ಲ ಭಕ್ತರೂ ಒಗ್ಗೂಡಿ ನ.14ರ ಬೆಳಗ್ಗೆ 10.30ಕ್ಕೆ ಶಿವಪ್ಪನಾಯಕ ವೃತ್ತದಿಂದ ಡಿಸಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಿದ್ದೇವೆ ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಮೂಲಕ ಗೃಹ ಸಚಿವರಿಗೆ ಮನವಿ ನೀಡಲಾಗುವುದು. ವೀಡಿಯೋ ಬಗ್ಗೆ ಸಮಗ್ರ ತನಿಖೆ ನಡೆಸಬೇಕೆಂಬುದು ನಮ್ಮ ಆಗ್ರಹವಾಗಿದೆ. ಈ ವೀಡಿಯೋ 2020ರಲ್ಲೇ ಬೆಳಕಿಗೆ ಬಂದಿತ್ತು. ಆ ಸಂದರ್ಭದಲ್ಲಿ ವಿನೋದ್ ಶೆಟ್ಟಿ ಎಂಬುವವರು ಸೇರಿದಂತೆ ನಾಲ್ಕೈದು ಮಂದಿ ವಿರುದ್ಧ ಬೆಂಗಳೂರಿನಲ್ಲಿ ದೂರು ದಾಖಲಾಗಿ ಅವರೆಲ್ಲರ ಬಂಧನವೂ ಆಗಿತ್ತು. ಕೆಲ ತಿಂಗಳ ಬಳಿಕ ಅವರೆಲ್ಲರೂ ಬಿಡುಗಡೆಯಾಗಿದ್ದಾರೆ. ಈಗ ವೀಡಿಯೋ ಮತ್ತೆ ಹರಿದಾಡುತ್ತಿದೆ ಎಂದು ವಿವರಿಸಿದರು.

ವಿನಯ್ ಗುರೂಜಿ ಎಂದಿಗೂ ಪ್ರಚಾರ ಹಾಗೂ ಅಪಪ್ರಚಾರಕ್ಕೆ ಪ್ರತಿಕ್ರಿಯಿಸಿದವರಲ್ಲ. ಅವರು ಎಂದಿಗೂ ಸಮಚಿತ್ತ ಕಾಯ್ದುಕೊಂಡವರು. ಆದರೆ ಈ ಘಟನೆಯಿಂದ ಕೆಲ ಭಕ್ತರಲ್ಲಿ ಗೊಂದಲವಾಗಿದೆ. ಇನ್ನು ಕೆಲವರಲ್ಲಿ ತಲ್ಲಣ ಸೃಷ್ಟಿಯಾಗಿದೆ. ಹೀಗಾಗಿ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ಹೇಳಿದರು.

ವಿನಯ್ ಗುರೂಜಿ ವಿರುದ್ಧ ಷಡ್ಯಂತ್ರ ನಡೆಯುತ್ತಿರುವುದು ಇದೇ ಮೊದಲಲ್ಲ. ಹಲವು ಬಾರಿ ಇಂತಹ ಪ್ರಯತ್ನಗಳು ನಡೆದಿವೆ. ಆದರೆ ಅವರೆಂದೂ ಇವುಗಳಿಗೆ ಉತ್ತರ ನೀಡಲಿಲ್ಲ. ಯಾವುದೇ ಘಟನೆಗಳು ನಡೆದರೂ ಅದರಲ್ಲಿ ಗುರೂಜಿ ಅವರನ್ನು ಸಿಲುಕಿಸುವ ಪ್ರಯತ್ನ ನಡೆಯುತ್ತಿದೆ ಎಂದು ದೂರಿದರು.

ಗುರೂಜಿ ಭಕ್ತರಾದ ಶಂಕರ್, ಚಂದನ್ ಮುಂತಾದವರು ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net