

ಅಮೆರಿಕ: ಭಾರತ ಸರ್ಕಾರದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಅಮೆರಿಕಕ್ಕೆ ಭಾರತದ ಹೊಸ ರಾಯಭಾರಿಯನ್ನು ನೇಮಕ ಮಾಡಿದೆ. ವಿನಯ್ ಮೋಹನ್ ಕ್ವಾತ್ರಾ ಅವರು ಅಮೆರಿಕಕ್ಕೆ ನೂತನ ರಾಯಭಾರಿಯಾಗಿ ನೇಮಕವಾಗಿದ್ದು, ಶೀಘ್ರದಲ್ಲೇ ಅವರು ಅಧಿಕಾರ ಸ್ವೀಕಾರ ಮಾಡಲಿದ್ದಾರೆ.
ಈ ಸಂಬಂಧ ಜುಲೈ 19 ಶುಕ್ರವಾರ ಭಾರತೀಯ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಆದೇಶ ಹೊರಡಿಸಿದೆ. ನಿವೃತ್ತ ವಿದೇಶಾಂಗ ಕಾರ್ಯದರ್ಶಿಯಾಗಿರುವ ಕ್ವಾತ್ರಾ ಅವರು ಅಮೆರಿಕದ ರಾಜಧಾನಿ ತಲುಪಿದ್ದಾರೆ.
ತರಣ್ಜೀತ್ ಸಿಂಗ್ ಸಂಧು ಅವರು ಜನವರಿಯಲ್ಲಿ ನಿವೃತ್ತರಾದ ನಂತರ ಖಾಲಿ ಇದ್ದ ರಾಯಭಾರಿ ಹುದ್ದೆಗೆ ಕ್ವಾತ್ರಾ ಅವರನ್ನು ನೇಮಕ ಮಾಡಿದೆ.
ಭಾರತದ ರಾಯಭಾರಿಯಾಗಿ ಅಧಿಕಾರ ಸ್ವೀಕರಿಸಲು ಸಂತೋಷವಾಗುತ್ತಿದೆ. ಎರಡು ದೇಶಗಳ ನಡುವಿನ ಬಾಂಧ್ಯವನ್ನು ವೃದ್ಧಿಸುವ ನಿಟ್ಟಿನಲ್ಲಿ ರಾಯಭಾರಿ ಕಚೇರಿಯ ತಂಡ ತನ್ನ ಕೆಲಸವನ್ನು ಮುಂದುವರೆಸಲಿದೆ ಎಂದು ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ವಿನಯ್ ಮೋಹನ್ ಕ್ವಾತ್ರಾ ಅವರು 2020ರಲ್ಲಿ ನೇಪಾಳ ರಾಯಭಾರಿಯಾಗಿ ನೇಮಕ ಆಗಿ ಕಾರ್ಯಾರಂಭ ಮಾಡುವ ಮುನ್ನ, ಆಗಸ್ಟ್ 2017 ರಿಂದ ಫೆಬ್ರವರಿ 2020ರವರೆಗೆ ಫ್ರಾನ್ಸ್ ದೇಶದಲ್ಲಿ ಭಾರತದ ರಾಯಭಾರಿಯಾಗಿ ಕಾರ್ಯ ನಿರ್ವಹಿಸಿದ್ದರು.