

ಬೆಂಗಳೂರು: ಗ್ರಾಮೀಣ ಜನತೆಗೆ ದಿನದ 24 ಗಂಟೆಯೂ ಹಳ್ಳಿಗಳಲ್ಲೇ ಉನ್ನತ ಗುಣಮಟ್ಟದ ಆರೋಗ್ಯ ಸೇವೆ ದೊರಕಿಸಿಕೊಡುವ ನಿಟ್ಟಿನಲ್ಲಿ ರಾಜ್ಯದ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಉನ್ನತೀಕರಿಸುವತ್ತ ರಾಜ್ಯ ಸರ್ಕಾರ ಹೆಜ್ಜೆ ಇಟ್ಟಿದೆ. ಸಿಎಂ ಗೃಹ ಕಚೇರಿ ‘ಕೃಷ್ಣಾ’ದಲ್ಲಿ ಗುರುವಾರ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಮತ್ತು ಅಧಿಕಾರಿಗಳ ತಂಡದ ಜತೆ ಮಾದರಿ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಪ್ರಾತ್ಯಕ್ಷಿಕೆ, ಯೋಜನೆ ಸ್ವರೂಪದ ಬಗ್ಗೆ ರ್ಚಚಿಸಿದ ಬಳಿಕ ಸಿಎಂ ಯಡಿಯೂರಪ್ಪ ಸುದ್ದಿಗೋಷ್ಠಿಯಲ್ಲಿ ಈ ವಿಷಯ ಘೋಷಿಸಿದರು. ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಮೇಲ್ದರ್ಜೆಗೆ ಏರಿಸಲು ಬೇಕಾದ ಅನುದಾನವನ್ನು ಮುಂದಿನ ಬಜೆಟ್ನಲ್ಲಿ ಕಾದಿರಿಸಲಾಗುವುದು. ಸರ್ಕಾರದ 20 ಅಂಶಗಳ ಕಾರ್ಯಕ್ರಮದಲ್ಲಿ 2380 ಪಿಎಚ್ಸಿಗಳಲ್ಲಿ ಸುಸಜ್ಜಿತ ಕಟ್ಟಡ, ಅತ್ಯಾಧುನಿಕ ಸವಲತ್ತು, ವೈದ್ಯರು ಮತ್ತು ಸಿಬ್ಬಂದಿಗೆ ವಸತಿ ಸೌಲಭ್ಯ ಕಲ್ಪಿಸಲಾಗುತ್ತದೆ ಎಂದು ವಿವರಿಸಿದರು.
ಪ್ರಧಾನಿ ಮೋದಿ ಆಶಯ: ಹೊಸ ನಿರ್ಧಾರದಿಂದ ಗ್ರಾಮೀಣ ಪ್ರದೇಶದ ಜನರು ಚಿಕಿತ್ಸೆಗಾಗಿ ತಾಲೂಕು, ಜಿಲ್ಲಾ ಆಸ್ಪತ್ರೆಗಳಿಗೆ ಅಲೆದಾಡುವುದು ತಪ್ಪಲಿದೆ. ಅಲ್ಲದೆ, ಅತ್ಯಾಧುನಿಕ ಉಪಕರಣಗಳನ್ನು ಒದಗಿಸುವುದರಿಂದ ಉತ್ತಮ ಗುಣಮಟ್ಟದ ಸೇವೆಯೂ ಲಭ್ಯವಾಗಲಿದೆ. ಜನರ ಯೋಗಕ್ಷೇಮದ ಕುರಿತು ಪ್ರಧಾನಿ ನರೇಂದ್ರ ಮೋದಿ ವ್ಯಕ್ತಪಡಿಸಿದ ಆಶಯದಂತೆ ಸರ್ಕಾರ ಈ ಕ್ರಮಕ್ಕೆ ಮುಂದಾಗಿದ್ದು, ದಿನದ 24 ತಾಸು ಹಾಗೂ ವಾರದ ಎಲ್ಲ ದಿನಗಳಲ್ಲಿ ಕಾರ್ಯನಿರ್ವಹಿಸುವ ಪಿಎಚ್ಸಿ ಗಳನ್ನಾಗಿ ಪರಿವರ್ತಿಸಲಾಗುತ್ತದೆ ಎಂದು ಸಿಎಂ ತಿಳಿಸಿದರು. ಪ್ರಾತ್ಯಕ್ಷಿಕೆ, ಯೋಜನೆ ಕುರಿತು ಚರ್ಚಾ ಸಭೆಯಲ್ಲಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್, ಆರೋಗ್ಯ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್, ಸಿಎಂ ಕಾರ್ಯದರ್ಶಿ ಸೆಲ್ವಕುಮಾರ್ ಹಾಗೂ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಎಂಬಿಬಿಎಸ್ ಮುಗಿಸಿದ ವೈದ್ಯರಿಗೆ 1 ವರ್ಷ ಗ್ರಾಮೀಣ ಸೇವೆ ಕಡ್ಡಾಯಗೊಳಿಸಿ ಈಗಾಗಲೇ ಆದೇಶ ಹೊರಡಿಸಲಾಗಿದೆ. ಇದರಿಂದ ಉನ್ನತೀಕರಿಸಿದ ಪಿಎಚ್ಸಿಗಳಿಗೆ ಬೇಕಾದ ವೈದ್ಯರ ಕೊರತೆ ನೀಗಲಿದೆ. ಸಮರ್ಪಕ ವಸತಿ ಸೌಲಭ್ಯವಿಲ್ಲವೆಂಬ ಕಾರಣಕ್ಕೆ ವೈದ್ಯರು, ಸಿಬ್ಬಂದಿ ಪಿಎಚ್ಸಿ ಸೇವೆಗೆ ಹಿಂದೇಟು ಹಾಕುತ್ತಿದ್ದಾರೆ. ಈ ಸಮಸ್ಯೆಗೆ ಪರಿಹಾರವಾಗಿ ಮಾದರಿ ಪಿಎಚ್ಸಿಗಳ ಆವರಣದಲ್ಲಿ ವೈದ್ಯರು, ಸಿಬ್ಬಂದಿಗೆ ಸುಸಜ್ಜಿತ ವಸತಿಗೃಹ ನಿರ್ವಿುಸಲಿದ್ದು, ಆಂಬುಲೆನ್ಸ್ ಸೇವೆಯನ್ನೂ ಒದಗಿಸಲಾಗುತ್ತದೆ ಎಂದು ಬಿಎಸ್ವೈ ತಿಳಿಸಿದರು.