ಕಾರ್ವಿುಕರ ಹಿತ ಕಾಯಲು ಬದ್ಧ: ಫೋನ್ ಇನ್ ಕಾರ್ಯಕ್ರಮದಲ್ಲಿ ಸಚಿವ ಶಿವರಾಮ ಹೆಬ್ಬಾರ್ ಆಶ್ವಾಸನೆ

phone in -2
Published on
ಶ್ರಮಸಂಸ್ಕೃತಿಯನ್ನು ಸಾರುವವರು ಕಾರ್ವಿುಕರು. ಆದರೆ, ದುಡಿಯುವ ಈ ವರ್ಗಕ್ಕೆ ಹತ್ತುಹಲವು ಸಮಸ್ಯೆಗಳು. ಕರೊನಾದ ಸಂಕಷ್ಟ ಆ ತೀವ್ರತೆಯನ್ನು ಮತ್ತಷ್ಟು ಹೆಚ್ಚಿಸಿದೆ. ಹೀಗಿರುವಾಗ ರಾಜ್ಯ ಸರ್ಕಾರ ಕಾರ್ವಿುಕರ ಹಿತರಕ್ಷಣೆಗೆ ಕೈಗೊಂಡಿರುವ ಕ್ರಮಗಳನ್ನು ತಿಳಿಸಿ, ಯಾವುದೇ ಕಾರಣಕ್ಕೂ ಕಾರ್ವಿುಕರಿಗೆ ಅನ್ಯಾಯ ಆಗಲು ಬಿಡುವುದಿಲ್ಲ ಎಂಬ ಸ್ಪಷ್ಟೋಕ್ತಿ ಕಾರ್ವಿುಕ ಸಚಿವ ಶಿವರಾಮ ಹೆಬ್ಬಾರ್ ಅವರಿಂದ ಹೊಮ್ಮಿತು. ಗುರುವಾರ ‘ವಿಜಯವಾಣಿ’ ಕಚೇರಿಯಲ್ಲಿ ಆಯೋಜಿಸಲಾದ ಫೋನ್ ಇನ್ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಸಚಿವರು ಭಾಗವಹಿಸಿ, ರಾಜ್ಯದ ಮೂಲೆಮೂಲೆಗಳಿಂದ ಬಂದ ಕರೆಗಳಿಗೆ ಉತ್ತರಿಸಿದರು. ಅಷ್ಟೇ ಅಲ್ಲ, ಅವರಲ್ಲಿ ಆತ್ಮವಿಶ್ವಾಸ ತುಂಬಿ, ‘ನಿಮ್ಮೊಂದಿಗೆ ನಾವಿದ್ದೇವೆ’ ಎಂದು ಸಾರಿದರು.

ಬದಲಾದ ವ್ಯವಸ್ಥೆಯಲ್ಲಿ ವಿವಿಧ ಸೇವೆಗಳಿಗೆ ಮಾನವ ಸಂಪನ್ಮೂಲ ಒದಗಿಸುತ್ತಿರುವ ಹೊರಗುತ್ತಿಗೆ ಸಂಸ್ಥೆಗಳನ್ನೆಲ್ಲ ಮುಖ್ಯವಾಹಿನಿಗೆ ಜೋಡಿಸಿ, ಕಾರ್ವಿುಕರ ಪರಿಸ್ಥಿತಿ ದುರ್ಲಾಭಕ್ಕೆ ಕಡಿವಾಣ ಹಾಕಲಾಗುವುದು ಎಂದು ಕಾರ್ವಿುಕ ಇಲಾಖೆ ಸಚಿವ ಶಿವರಾಮ ಹೆಬ್ಬಾರ್ ಹೇಳಿದರು.

ವಿಜಯವಾಣಿ ಕಚೇರಿಯಲ್ಲಿ ಗುರುವಾರ ಏರ್ಪಡಿಸಿದ್ದ ಫೋನ್ ಇನ್ ಹಾಗೂ ಸಂವಾದ ಕಾರ್ಯಕ್ರಮದಲ್ಲಿ ಹತ್ತಾರು ಪ್ರಶ್ನೆಗಳಿಗೆ ಉತ್ತರಿಸಿದ ಸಚಿವರು, ಹೊರಗುತ್ತಿಗೆ ಹೆಸರಿನಲ್ಲಿ ಅನೇಕ ಸಂಸ್ಥೆಗಳು ಕಾರ್ವಿುಕರನ್ನು ಶೋಷಿಸುತ್ತಿವೆ. ಸಂಬಳ ಇನ್ನಿತರ ಸವಲತ್ತುಗಳನ್ನು ಸರಿಯಾಗಿ ಕೊಡುವುದಿಲ್ಲ, ಸರಿಯಾದ ವಿಳಾಸವೇ ಇಲ್ಲದ ಸಂಸ್ಥೆಗಳು ಹೊರಗುತ್ತಿಗೆ ವ್ಯವಹಾರ ನಡೆಸುತ್ತಿವೆ. ಅಂತಹ ಸಂಸ್ಥೆಗಳನ್ನು ಸರಿದಾರಿಗೆ ತರುವ ಕೆಲಸವನ್ನು ಕರೊನಾ ಮುಗಿದ ನಂತರ ಮಾಡಲಾಗುವುದು.

ಕಾಯ್ದೆ ರೀತ್ಯ ನಿಗದಿತ ಸಂಬಳ ಕಾರ್ವಿುಕರ ಕೈಗೆ ತಲುಪುವುದು ಸೇರಿ ಹಲವು ಕ್ರಮಗಳಿಗಾಗಿ ಕರಡು ನಿಯಮಾವಳಿ ರೂಪಿಸಲಾಗಿದೆ. ಈ ಪೈಕಿ ಹೊರಗುತ್ತಿಗೆ ಸಂಸ್ಥೆಗಳು ಆಯಾ ಕಾರ್ವಿುಕರ ಬ್ಯಾಂಕ್ ಖಾತೆಗೆ ನೇರವಾಗಿ ವೇತನ ಜಮೆ ಮಾಡುವುದನ್ನು ಕಡ್ಡಾಯಗೊಳಿಸಲಾಗಿದೆ. ಇದರಿಂದ ಶೋಷಣೆ ತಪ್ಪಿದೆ. ನಗದು ರೂಪದಲ್ಲಿ ಈ ಸಂಬಳ ಕೊಡುವಾಗ ಶೋಷಣೆಗೆ ದಾರಿಯಾಗಿತ್ತು. ದಾಖಲೆಯಲ್ಲಿ ತೋರಿಸುವುದೊಂದು, ಕಾರ್ವಿುಕರಿಗೆ ಕೊಡುವುದು ಮತ್ತೊಂದಿತ್ತು. ಬ್ಯಾಂಕ್ ಖಾತೆಗೆ ನೇರ ನಗದು ವರ್ಗಾವಣೆ ವ್ಯವಸ್ಥೆಯಿಂದ ಇದು ತಪ್ಪಿದೆ ಎಂದರು.

10 ಗಂಟೆಗೆ ಹೆಚ್ಚಿಸಲ್ಲ

ಕೆಲ ರಾಜ್ಯಗಳಲ್ಲಿ ಕಾರ್ವಿುಕರ ದುಡಿಮೆ ಅವಧಿಯನ್ನು 8 ರಿಂದ 10 ಗಂಟೆಗೆ ಏರಿಕೆ ಮಾಡಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಆದರೆ, ರಾಜ್ಯದಲ್ಲಿ ಕಾರ್ವಿುಕರನ್ನು ಹೆಚ್ಚು ಕಾಲ ದುಡಿಸಿಕೊಳ್ಳುವ ಬಗ್ಗೆ ಯಾವುದೇ ಪ್ರಸ್ತಾವನೆ ನಮ್ಮ ಮುಂದೆ ಬಂದಿಲ್ಲ ಎಂದು ಹೇಳಿದರು.

ಸಣ್ಣ ಕೈಗಾರಿಕೆಗೆ ನೆರವು

ಅತಿ ಹೆಚ್ಚು ಕಾರ್ವಿುಕರು ಈಗಲೂ ಸಣ್ಣ ಕೈಗಾರಿಕೆಗಳನ್ನು ಅವಲಂಬಿಸಿದ್ದಾರೆ. ಸಣ್ಣ ಕೈಗಾರಿಕೆಗಳು ತೀವ್ರ ಸಂಕಷ್ಟದಲ್ಲಿದ್ದು, ವಿದ್ಯುತ್ ಬಿಲ್ ಮನ್ನಾ ಮತ್ತು ಟ್ಯಾಕ್ಸ್ ಹಾಲಿಡೆ ಬಗ್ಗೆ ಪ್ರಸ್ತಾಪಿಸಿದ್ದು, ಈ ವಿಷಯವನ್ನು ಮುಖ್ಯಮಂತ್ರಿಗಳ ಬಳಿ ಚರ್ಚೆ ಮಾಡಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಸಂಕಷ್ಟದ ಕಾಲ

ಮೊದಲ ಬಾರಿಗೆ ಸಚಿವನಾದೆ, ಮುಖ್ಯಮಂತ್ರಿ ನನ್ನ ಮೇಲೆ ವಿಶ್ವಾಸವಿಟ್ಟು ಪ್ರಮುಖ ಕಾರ್ವಿುಕ ಇಲಾಖೆ ಹೊಣೆ ಒಪ್ಪಿಸಿದರು. ಈ ಬಾರಿ ಕಾರ್ವಿುಕರ ದಿನದ ಉತ್ಸವವನ್ನು ವಿಶಿಷ್ಟವಾಗಿ ಅಚರಿಸಲು ತಯಾರಿ ನಡೆದಿತ್ತು. ಆದರೆ, ಮಹಾಮಾರಿ ಕರೊನಾ ವಿಚಿತ್ರ ಪರಿಸ್ಥಿತಿಗೆ ತಳ್ಳಿದ್ದು, ಸಂಕಷ್ಟ ಕಾಲದಲ್ಲಿ ಸಂತಸ ಸರಿಯಲ್ಲವೆಂದು ಕೈಬಿಡಬೇಕಾಯಿತು.

ಶಾಸನಬದ್ಧ ನಿಧಿ

ರಾಜ್ಯದ ಕಟ್ಟಡ ಕಲ್ಯಾಣ ಕಾರ್ವಿುಕರ ನಿಧಿಯಡಿ -ಠಿ; 8,000 ಕೋಟಿ ಶುಲ್ಕ ಸಂಗ್ರಹವಾಗಿದೆ. ಇದು, ಕೇಂದ್ರ ಸರ್ಕಾರದ ಕಾನೂನಿನ ಅನ್ವಯ ಸ್ಥಾಪಿತವಾದ ನಿಧಿ. ನಿರ್ದಿಷ್ಟ ಕಾರ್ಯಕ್ರಮ ಹಾಗೂ ನೆರವಿಗಾಗಿ ಈ ನಿಧಿ ಸೀಮಿತ. ಬೇರೆ ಯೋಜನೆ ಅಥವಾ ಕಾರ್ಯಕ್ರಮಗಳಿಗೆ ನಿಧಿಯಲ್ಲಿನ ಹಣ ತೊಡಗಿಸಲು ಅವಕಾಶವಿಲ್ಲ.

ಸರ್ವವ್ಯಾಪಿ, ಸರ್ವಸ್ಪರ್ಶಿ

ಸಂಘಟಿತ, ಅಸಂಘಟಿತ ಎಲ್ಲರನ್ನೂ ಒಳಗೊಳ್ಳಬೇಕಿದೆ. ಇಲಾಖೆ ಕಾರ್ಯವಿಧಾನ ಸರ್ವವ್ಯಾಪಿ, ಯೋಜನೆ/ಕಾರ್ಯಕ್ರಮಗಳ ರೂಪರೇಷೆ ಸರ್ವರ್ಸ³ಯಾಗಿರಬೇಕು. ಇಷ್ಟು ದಿನ ಸುರಕ್ಷಿತ, ಸೌಖ್ಯವಾಗಿತ್ತು. ಹೀಗಾಗಿ ಅಸಂಘಟಿತ ಕಾರ್ವಿುಕರು ಹೇಳಲಿಲ್ಲ, ಇಲಾಖೆ ಕೇಳಲಿಲ್ಲ. 30 ವರ್ಷಗಳ ಹಿಂದೆಯೇ ಈ ವರ್ಗದ ಕಾರ್ವಿುಕರತ್ತ ಚಿತ್ತ ಹರಿಸಬೇಕಾಗಿತ್ತು. ಇದೀಗ ಕರೊನಾ ಪಾಠ ಕಲಿಸಿದೆ, ಜ್ಞಾನೋದಯವಾಗಿದೆ.

ಸದಸ್ಯತ್ವ ಅಭಿಯಾನ

ಕರೊನಾ ನಿಯಂತ್ರಣಕ್ಕೆ ಬಂದ ಬಳಿಕ ಅಸಂಘಟಿತ ಕಾರ್ವಿುಕರ ನೋಂದಣಿ ಅಭಿಯಾನಕ್ಕೆ ಚಾಲನೆ ನೀಡಲಾಗುವುದು. ಜಿಲ್ಲಾ ಮಟ್ಟದಲ್ಲಿ ಅಭಿಯಾನ ನಡೆಸಲಾಗುತ್ತದೆ. ಇದಕ್ಕಾಗಿ ಟೆಂಡರ್ ಕರೆಯಲಾಗುವುದು. ಈ ಅಭಿಯಾನವನ್ನು ಜಿಲ್ಲಾ ಮಟ್ಟದಿಂದ ತಾಲೂಕು ಮತ್ತು ಗ್ರಾಮ ಪಂಚಾಯಿತಿ ಮಟ್ಟಕ್ಕೂ ವಿಸ್ತರಿಸುವ ಆಲೋಚನೆ ಕೂಡ ನಮ್ಮ ಮುಂದಿದೆ ಎಂದು ತಿಳಿಸಿದರು.

ನಾನು ಹೆಬ್ಬಾರ್ ಮಾತಾಡ್ತಿರೋದು...

‘ನಾನು ಹೆಬ್ಬಾರ್ ಮಾತಾಡ್ತಿರೋದು ಹೇಳಿ’ ಸಾರ್ವಜನಿಕರ ಕರೆಗಳನ್ನು ಸ್ವೀಕರಿಸುತ್ತಲೇ ಸಚಿವ ಶಿವರಾಂ ಹೆಬ್ಬಾರ್ ಪ್ರತಿಕ್ರಿಯಿಸುತ್ತಿದ್ದ ಶೈಲಿಯಿದು. ಪ್ರತಿಯೊಬ್ಬರ ಅಹವಾಲು ಆಲಿಸಿ, ಅಂಕಿ-ಅಂಶ ಸಹಿತ ಉತ್ತರಿಸಿ ಸಮಾಧಾನಪಡಿಸುತ್ತಿದ್ದರು. ಇಲಾಖೆ ಅಧಿಕಾರಿಗಳ ಸಹಾಯವಿಲ್ಲದೆ ಸಚಿವರು ತಾವೆ ಎಲ್ಲ ಮಾಹಿತಿ ಸಹಿತ ಪ್ರತಿಕ್ರಿಯೆ ನೀಡಿದ್ದು ಗಮನಾರ್ಹ. ಅಲ್ಲದೆ, ಜನರು ಕೇಳಿದ್ದನ್ನು ನೋಟ್ ಮಾಡಿಕೊಳ್ಳಲು ಇಲಾಖೆ ಅಧಿಕಾರಿಗಳಿಗೆ ಸೂಚಿಸುತ್ತಿದ್ದರು.

ಸಾರ್ವಜನಿಕರ ಪ್ರಶ್ನೆಗಳಿಗೆ ಸಚಿವರ ಉತ್ತರ

ಕೇಂದ್ರ ಸರ್ಕಾರ ಘೋಷಿಸಿದಂತೆ, ಕಾರ್ವಿುಕರಿಗೆ ನೀಡಲಾಗುವ  2 ಸಾವಿರ  ರೂ. ನೆರವು ನನ್ನ ಖಾತೆಗೆ ಬಂದಿಲ್ಲ. | ಶಾಂತಪ್ಪ ಕಲಬುರಗಿ

ಈವರೆಗೆ 12.56 ಲಕ್ಷ ಕಾರ್ವಿುಕರ ಖಾತೆಗೆ ಹಣ ಸಂದಾಯ ಮಾಡಲಾಗಿದೆ. ಕಾರ್ವಿುಕರ ನೋಂದಣಿಯನ್ನು ನವೀಕರಿಸದವರು ಕಾರ್ವಿುಕ ಇಲಾಖೆ ನಿಗದಿ ಮಾಡಿರುವ 8277370000 ಸಂಖ್ಯೆಗೆ ವಾಟ್ಸ್​ಆಪ್ ಮೂಲಕ ನೋಂದಣಿ ಸಂಖ್ಯೆ ಮತ್ತು ಬ್ಯಾಂಕ್ ಖಾತೆಯನ್ನು ಕಳುಹಿಸಿದರೆ ಹಣ ಜಮಾವಣೆ ಮಾಡಲಾಗುವುದು.

ಚಾಲಕರಿಗೆ ಯಾವುದೇ ರೀತಿಯ ಸೌಲಭ್ಯಗಳಿಲ್ಲ. ಆಟೋ, ಕ್ಯಾಬ್ ಸೇರಿ ಎಲ್ಲ ರೀತಿಯ ಚಾಲಕರಿಗೂ ಜಾಬ್​ಕಾರ್ಡ್ ಕೊಡಿಸಲು ಕ್ರಮ ಕೈಗೊಳ್ಳಿ.

| ಖಲೀಲ್ ಅಹಮದ್ ಚನ್ನಗಿರಿ

ತಮಿಳುನಾಡಿನಲ್ಲಿ ಚಾಲಕರಿಗಾಗಿಯೇ ಪ್ರತ್ಯೇಕ ಮಂಡಳಿಯಿದೆ. ಅದೇ ರೀತಿ ರಾಜ್ಯದಲ್ಲೂ ಸ್ಥಾಪಿಸುವ ಉದ್ದೇಶ ಹೊಂದಲಾಗಿದೆ. ಅದರ ಮೂಲಕ ಚಾಲಕರಿಗೆ ನೆರವಾಗಲು ಕ್ರಮ ಕೈಗೊಳ್ಳುತ್ತೇವೆ.

ಬಟ್ಟೆ ಹೊಲಿಯುವ ರ್ದಜಿಗಳಿಗೆ ಯಾವುದೇ ನೆರವು ಸಿಗುತ್ತಿಲ್ಲ. ಕರೊನಾ ಬಂದ ನಂತರ ಆದಾಯವೇ ಇಲ್ಲದಂತಾಗಿದೆ. ಸರ್ಕಾರ ಅವರಿಗೆ ನೆರವಾಗಬೇಕು.

| ಮಮತಾ ನಾಯಕ್ ಶಿರಸಿ

ರ್ದಜಿಗಳು ಅಸಂಘಟಿತ ವಲಯ ವ್ಯಾಪ್ತಿಯಲ್ಲಿದ್ದಾರೆ. ಅವರನ್ನು ಗುರುತಿಸಿ ಸೌಲಭ್ಯ ದೊರಕಿಸಿಕೊಡುವುದಕ್ಕೆ ಕ್ರಮ ಕೈಗೊಳ್ಳಲಾಗುವುದು.

ನನ್ನ ಪತಿ ಖಾಸಗಿ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅಲ್ಲಿ ಭವಿಷ್ಯ ನಿಧಿ ನೀಡದೆ ಅನ್ಯಾಯ ಮಾಡಲಾಗುತ್ತಿದೆ.

| ರೇಖಾ ದಾವಣಗೆರೆ

ಶಾಲೆಯ ಆಡಳಿತ ಮಂಡಳಿ ಜತೆ ಮಾತನಾಡಿ, ಭವಿಷ್ಯ ನಿಧಿ ನೀಡುವಂತೆ ಸೂಚಿಸಲಾಗುವುದು.

ಶಿವಮೊಗ್ಗದ ಗಜಾನನ ಸಾರಿಗೆ ಸಂಸ್ಥೆಯ 300 ನೌಕರರಿಗೆ ವೇತನವಾಗಿಲ್ಲ. ಸಂಸ್ಥೆ ಈವರೆಗೆ ಕಾರ್ವಿುಕ ಇಲಾಖೆ ನಿಯಮಗಳನ್ನು ಸಮರ್ಪಕವಾಗಿ ಪಾಲಿಸುತ್ತಿಲ್ಲ.

| ಜೀವನ್​ಕುಮಾರ್ ಸಾಗರ

ಕರೊನಾದಿಂದಾಗಿ ಕಾರ್ವಿುಕರ ರೀತಿಯಲ್ಲಿಯೇ ಮಾಲೀಕರೂ ಸಮಸ್ಯೆಗೊಳಗಾಗಿದ್ದಾರೆ. ಅವರ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಕೆಲಸ ಮಾಡಬೇಕಿದೆ. ಸರಿಯಾದ ಸಮಯದಲ್ಲಿ ವೇತನ ನೀಡುವಂತೆ ಸಂಸ್ಥೆಗೆ ಸೂಚಿಸುತ್ತೇನೆ.

ರಾಜ್ಯದಲ್ಲಿ 80 ಸಾವಿರ ಛಾಯಾಗ್ರಾಹಕರಿದ್ದಾರೆ. ಅವರೆಲ್ಲ ಅಸಂಘಟಿತ ವಲಯದಲ್ಲಿದ್ದು, ಅವರಿಗೆ ಸ್ಮಾರ್ಟ್​ಕಾರ್ಡ್ ನೀಡಲು ಕ್ರಮ ಕೈಗೊಳ್ಳಿ.

| ನಾರಾಯಣಸ್ವಾಮಿ, ಛಾಯಾಗ್ರಾಹಕ ಸಂಘದ ಕಾರ್ಯದರ್ಶಿ

ಅಂಘಟಿತ ಕಾರ್ವಿುಕರನ್ನು ಗುರುತಿಸಿ ಸ್ಮಾರ್ಟ್​ಕಾರ್ಡ್ ನೀಡಲು ನಿರ್ಧರಿಸಲಾಗಿದೆ. ಅದಕ್ಕೆ ಶೀಘ್ರದಲ್ಲಿ ಚಾಲನೆ ನೀಡಲಾಗುವುದು.

ಅಸಂಘಟಿತ ಕಾರ್ವಿುಕರಿಗೆ ಪಿಎಫ್ ಜಾರಿಗೆ ತರಲು ಹಿಂದಿನ ಸರ್ಕಾರ ತೀರ್ವನಿಸಿತ್ತು, ಈ ಬಗ್ಗೆ ಏನು ಕ್ರಮ ಕೈಗೊಳ್ಳಲಾಗಿದೆ?

| ಉಮೇಶ್ ಅರಸೀಕರೆ

ಈ ಯೋಜನೆ ಶೀಘ್ರದಲ್ಲಿ ಜಾರಿಗೆ ಬರುವ ವಿಶ್ವಾಸವಿದೆ.

ಜೆಸ್ಕಾಂನಲ್ಲಿ ಕೆಲಸ ಮಾಡುತ್ತಿರುವ ಹೊರಗುತ್ತಿಗೆ ನೌಕರರು ಕೆಲಸ ಕಳೆದುಕೊಳ್ಳುವ ಭೀತಿ ಎದು ರಾಗಿದೆ. ಅದನ್ನು ತಡೆಯಲು ಅಧಿಕಾರಿಗಳಿಗೆ ಸೂಚನೆ ನೀಡಿ.

| ಬಸವರಾಜ್ ಜಳಕ ಬೀದರ್

ಸದ್ಯಕ್ಕೆ ಕೆಲಸದಿಂದ ತೆಗೆಯದಂತೆ ಸೂಚಿಸಲಾಗುವುದು. ಅಲ್ಲದೆ, ಕಾರ್ವಿುಕರ ಸಮಸ್ಯೆ ನಿವಾರಣೆಗೆ ಎಲ್ಲ ಪ್ರಯತ್ನ ಮಾಡಲಾಗುತ್ತದೆ.

ಕೂಲಿಕೆಲಸಕ್ಕಾಗಿ ಬಾಗಲಕೋಟೆಯಿಂದ ದಕ್ಷಿಣ ಕನ್ನಡಕ್ಕೆ ಬಂದಿದ್ದೇನೆ. ಮುಂಗಾರಿನ ಸಮಯವಾದ್ದರಿಂದ ವಾಪಾಸು ಊರಿಗೆ ತೆರಳಿ, ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಳ್ಳಬೇಕಿದೆ. ಆದರೆ, ವಾಪಾಸು ಹೋಗಲು ಬಿಡುತ್ತಿಲ್ಲ.

| ಹನುಮಂತಗೌಡ ಬಾಗಲಕೋಟೆ

ವಲಸೆ ಕಾರ್ವಿುಕರು ವಾಪಾಸು ತಮ್ಮ ಊರುಗಳಿಗೆ ತೆರಳಲು ವ್ಯವಸ್ಥೆ ಮಾಡಲಾಗುತ್ತಿದೆ. ಅದಕ್ಕಾಗಿ ಸರ್ಕಾರಿ ಸಾರಿಗೆ ಬಸ್​ಗಳ ಸಂಚಾರಕ್ಕೂ ಅನುವು ಮಾಡಿಕೊಡಲಾಗುತ್ತಿದೆ.

ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದೇನೆ. ಕರೊನಾದಿಂದ ತಿಂಗಳಿನಿಂದ ಕೆಲಸ ಮತ್ತು ಆದಾಯವಿಲ್ಲದಂತಾಗಿದೆ. ಈಗ ಗುತ್ತಿಗೆದಾರರು ಕೆಲಸಕ್ಕೆ ಬರಬೇಕೆಂದು ತಿಳಿಸಿದರೂ, ಕೆಲಸಕ್ಕೆ ಹೋಗಲು ಪೊಲೀಸರು ಬಿಡುತ್ತಿಲ್ಲ.

| ಮುರಗಪ್ಪ ಅಂಗಡಿ ಹುಬ್ಬಳ್ಳಿ

ರೆಡ್ ಜೋನ್ ಜಿಲ್ಲೆಗಳನ್ನು ಹೊರತುಪಡಿಸಿ ಉಳಿದೆಡೆ ಲಾಕ್​ಡೌನ್​ನಲ್ಲಿ ವಿನಾಯಿತಿ ನೀಡಲಾಗುತ್ತಿದೆ. ಅದರಿಂದ ನೀವುಗಳು ಕೆಲಸಕ್ಕೆ ತೆರಳಬಹುದು. ಅದಕ್ಕೆ ಯಾರೂ ಅಡ್ಡಿಪಡಿಸುವುದಿಲ್ಲ.

ಕಟ್ಟಡ ಕಾರ್ವಿುಕನಾಗಿ ಕೆಲಸ ಮಾಡುತ್ತಿದ್ದೇನೆ. ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಾಯಧನ ಪಡೆಯಲು ಏನು ಮಾಡಬೇಕು?

| ರಾಮಚಂದ್ರ ಕಲಬುರಗಿ

ಸಹಾಯಧನ ಅಥವಾ ವಿದ್ಯಾರ್ಥಿ ವೇತನ ಪಡೆಯಲು ಅರ್ಜಿ ಸಲ್ಲಿಸಬೇಕು. ಜೂ. 30ರವರೆಗೆ ಅದಕ್ಕೆ ಅವಕಾಶವಿದೆ. ಕಾರ್ವಿುಕ ಇಲಾಖೆಯಲ್ಲಿ ಅರ್ಜಿ ಸಲ್ಲಿಸಿ.

ನೋಂದಾಯಿತ ಕಟ್ಟಡ ಕಾರ್ವಿುಕರಿಗೆ ನೀಡಲಾಗುವ -ಠಿ; 1 ಸಾವಿರ ನಿವೃತ್ತ ವೇತನ ಕೊಟ್ಟಿಲ್ಲ. ಕಳೆದ ಒಂದು ವರ್ಷದಿಂದ ಹಣ ಬರುವುದು ನಿಂತಿದೆ.

| ವೆಂಕಪ್ಪ ದಾದರಹಟ್ಟಿ ಬಾಗಲಕೋಟೆ

ಕೆಲವೊಂದು ತಾಂತ್ರಿಕ ಸಮಸ್ಯೆಯಿಂದ ನಿವೃತ್ತ ವೇತನ ನೀಡುವಲ್ಲಿ ವಿಳಂಬವಾಗಿದೆ. ಅದನ್ನು ಸರಿಪಡಿಸಲಾಗುತ್ತದೆ.

ಕರೊನಾದಿಂದಾಗಿ ಆಶಾ ಕಾರ್ಯಕರ್ತರು, ಗಾರ್ವೆಂಟ್ಸ್ ನೌಕರರು ಸೇರಿ ಬಹುತೇಕ ಎಲ್ಲ ಕಾರ್ವಿುಕರಿಗೆ ಸಮಸ್ಯೆಯಾಗುತ್ತಿದೆ. ಅದರ ಜತೆಗೆ ವಲಸೆ ಕಾರ್ವಿುಕರು ಆದಾಯವಿಲ್ಲದೆ ಸಂಕಷ್ಟಕ್ಕೀಡಾಗುವಂತಾಗಿದೆ. ಅವರಿಗೆ ನೆರವು ನೀಡಬೇಕು.

| ಮಹಾವೀರ ಕಳಸದ ಕಲಬುರಗಿ

ಕಾರ್ವಿುಕರ ಜತೆಗೆ ಸರ್ಕಾರವೂ ಸಂಕಷ್ಟದಲ್ಲಿದೆ. ಅದರ ನಡುವೆಯೂ ಕಾರ್ವಿುಕರ ಸಮಸ್ಯೆ ನಿವಾರಣೆಗಾಗಿ ನಿತ್ಯ ಕೆಲಸ ಮಾಡಲಾಗುತ್ತಿದೆ. ಆರ್ಥಿಕ ನೆರವು ನೀಡಲು ಎಲ್ಲ ಕ್ರಮ ಕೈಗೊಳ್ಳಲಾಗುತ್ತಿದೆ.

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯೀಕರಣ ಇಲಾಖೆಯಲ್ಲಿ ಕಳೆದ 10 ವರ್ಷದಿಂದ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದೆ. ಆದರೆ, ಮಾರ್ಚ್​ನಲ್ಲಿ ನಮ್ಮನ್ನು ಕೆಲಸದಿಂದ ತೆಗೆದು ಹಾಕಲಾಗಿದೆ.

| ಬಸವರಾಜ್ ಖಾನಾಪುರ

ಈ ಬಗ್ಗೆ ಸಂಬಂಧಪಟ್ಟ ಸಚಿವರು ಮತ್ತು ಅಧಿಕಾರಿಗಳ ಜತೆಗೆ ರ್ಚಚಿಸುತ್ತೇನೆ. ಮತ್ತೆ ಕೆಲಸಕ್ಕೆ ತೆಗೆದುಕೊಳ್ಳಲು ಪ್ರಯತ್ನಿಸುತ್ತೇನೆ.

ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡಿ ನಿವೃತ್ತನಾಗಿದ್ದೇನೆ. ಕೆಲಸ ಮಾಡುವ ಸಂದರ್ಭದಲ್ಲಿ ಭವಿಷ್ಯನಿಧಿ ಮುಂಗಡ ತೆಗೆದುಕೊಂಡಿದ್ದೆ. ಈಗ ಅದನ್ನು ಮರುಪಾವತಿಸಬೇಕಿದೆ. ಆದರೆ, ಲಾಕ್​ಡೌನ್​ನಿಂದ ಅದು ಸಾಧ್ಯವಾಗುತ್ತಿಲ್ಲ. ಅಲ್ಲದೆ, ಅದಕ್ಕೆ ಬಡ್ಡಿ ಹಾಕಲಾಗುತ್ತಿದೆ.

| ಫರ್ನಾಂಡೀಸ್ ಶಿರಸಿ

ಇನ್ನು ಕೆಲದಿನಗಳಲ್ಲಿ ಲಾಕ್​ಡೌನ್ ಸಡಿಲಗೊಳಿಸ ಲಾಗುವುದು. ಆಗ ಹುಬ್ಬಳ್ಳಿಯಲ್ಲಿನ ಭವಿಷ್ಯನಿಧಿ ಕಚೇರಿಗೆ ತೆರಳಿ ಹಣ ಪಾವತಿಸಿ.

ಹಲವು ಕಟ್ಟಡ ಕಾರ್ವಿುಕರು ಸ್ಮಾರ್ಟ್​ಕಾರ್ಡ್ ಪಡೆದಿಲ್ಲ. ಅವರಿಗೆ ಸಹಾಯಧನ ಸಿಗಲಿದೆಯೇ?

| ಚಂದ್ರಶೇಖರ್ ವಿಜಯಪುರ

ಶೀಘ್ರದಲ್ಲಿ ವಿಶೇಷ ಕಾರ್ಡ್ ಅಭಿಯಾನ ಆರಂಭಿಸಲಾಗುವುದು. ಅಲ್ಲಿ ಎಲ್ಲ ಕಾರ್ವಿುಕರು ನೋಂದಣಿ ಮಾಡಿಸಿಕೊಂಡು, ಸ್ಮಾರ್ಟ್​ಕಾರ್ಡ್ ಪಡೆಯಬಹುದು. ಅವಕಾಶವಿದ್ದರೆ ಸಹಾಯಧನ ನೀಡಲಾಗುತ್ತದೆ.

ಇಎಸ್​ಐ ವ್ಯಾಪ್ತಿಗೊಳಪಡುವ ಕಾರ್ವಿುಕರು ಮತ್ತು ನೌಕರರಿಗೆ ಇಎಸ್​ಐನಿಂದ ವೇತನ ನೀಡಲು ಅವಕಾಶವಿದೆ. ಆ ಬಗ್ಗೆ ಸರ್ಕಾರ ಗಮನಹರಿಸಬೇಕು.

| ವೆಂಕಟೇಶ್ ಬೆಂಗಳೂರು

ಭವಿಷ್ಯನಿಧಿ, ಇಎಸ್​ಐ ಕುರಿತು ನಿರ್ಧಾರ ತೆಗೆದುಕೊಳ್ಳುವ ಹಕ್ಕು ಕೇಂದ್ರ ಸರ್ಕಾರಕ್ಕಿದೆ. ಹೀಗಾಗಿ ರಾಜ್ಯ ಸರ್ಕಾರಕ್ಕೆ ಆ ಬಗ್ಗೆ ಯಾವುದೇ ಕ್ರಮ ಕೈಗೊಳ್ಳಲಾಗುವುದಿಲ್ಲ. ಆದರೂ, ಕೇಂದ್ರಕ್ಕೆ ಮನವಿ ಮಾಡಲಾಗುವುದು.

ಗಾರ್ವೆಂಟ್ಸ್ ಉದ್ಯಮಕ್ಕೆ ಪುನಶ್ಚೇತನ

ಗಾರ್ವೆಂಟ್ಸ್ ಉದ್ಯಮವೂ ಸಂಕಷ್ಟದಲ್ಲಿ ಸಿಲುಕಿದ್ದು ಈ ಬಗ್ಗೆ ಸಿಎಂ ಜೊತೆ ರ್ಚಚಿಸಿ, ಉದ್ಯಮ ಪುನಶ್ಚೇತನ ಮತ್ತು ಕಾರ್ವಿುಕರ ಹಿತ ಕಾಯಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಸಚಿವ ಶಿವರಾಮ ಹೆಬ್ಬಾರ್ ಹೇಳಿದರು. ಗಾರ್ವೆಂಟ್ಸ್ ಉದ್ಯಮ ನಡೆಸುವವರಿಗೂ ಅನುಕೂಲವಾಗಬೇಕು. ಇತ್ತ ಕಾರ್ವಿುಕರಿಗೆ ಉದ್ಯೋಗವೂ ಉಳಿಯಬೇಕು. ಈ ಎರಡೂ ವಿಷಯಗಳು ನಮಗೆ ಮುಖ್ಯವಾಗಿವೆ. ಗಾರ್ವೆಂಟ್ಸ್​ಗೆ ಯುರೋಪ್ ದೇಶಗಳು ಮತ್ತು ಅಮೆರಿಕ ಮುಖ್ಯವಾದ ಮಾರುಕಟ್ಟೆಯಾಗಿತ್ತು. ಈಗಾಗಲೆ ಆ ದೇಶಗಳಿಗೆ ರಫ್ತಾಗಿರುವ ಉತ್ಪನ್ನಗಳಿಗೆ 3 ತಿಂಗಳಿಂದ ಹಣ ಬಂದಿಲ್ಲ. ಇಲ್ಲಿ ಇನ್ನೂ 6 ತಿಂಗಳಿಗೆ ಆಗುವಷ್ಟು ಉತ್ಪನ್ನ ಸಿದ್ಧವಿದ್ದು, ಅದನ್ನು ಅಲ್ಲಿಗೆ ಕಳುಹಿಸಿಕೊಡಲು ಆಗದ ಸ್ಥಿತಿಯಲ್ಲಿ ಗಾರ್ವೆಂಟ್ಸ್​ಗಳು ಸಿಲುಕಿಕೊಂಡಿವೆ. ಆದ್ದರಿಂದ ಸರ್ಕಾರವೇ ಇದಕ್ಕೆ ಪರಿಹಾರ ವ್ಯವಸ್ಥೆ ಕಲ್ಪಿಸಲು ಪ್ರಯತ್ನ ಮಾಡುತ್ತಿದೆ ಎಂದರು. ಗಾರ್ವೆಂಟ್ಸ್ ಉದ್ಯಮ ಅವಲಂಬಿಸಿರುವ 6 ಲಕ್ಷ ಕಾರ್ವಿುಕರು ಸಂಕಷ್ಟದಲ್ಲಿ ಸಿಲುಕಿರುವ ಬಗ್ಗೆ ವಿಜಯವಾಣಿ ವಿಶೇಷ ವರದಿಯ ಮೂಲಕ ಗಮನ ಸೆಳೆದಿತ್ತು.

ಶುಭಾಶಯಗಳು

ಸಮಸ್ತ ಕಾರ್ವಿುಕ ವರ್ಗಕ್ಕೆ ವಿಶ್ವ ಕಾರ್ವಿುಕ ದಿನದ ಶುಭಾಶಯಗಳು. ಅದಮ್ಯ ಚೈತನ್ಯದ ಚಿಲುಮೆಯಾದ ಶ್ರಮಿಕರಿಗೆ ಅಭಿನಂದನೆಗಳು. ಕರೊನಾ ಕಷ್ಟ ತಾತ್ಕಾಲಿಕ, ಯಾವೊಬ್ಬ ಕಾರ್ವಿುಕರು ಆತ್ಮವಿಶ್ವಾಸ ಕಳೆದುಕೊಳ್ಳಬಾರದು.

| ಶಿವರಾಮ ಹೆಬ್ಬಾರ್ ಕಾರ್ವಿುಕ ಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net