ಶೋಭಾ‌ ಪರವಾಗಿ ವಿಜಯೇಂದ್ರ ಮತಶಿಕಾರಿ

20240419_161227
Published on

ಬೆಂಗಳೂರು: ಲೋಕಸಭೆ ಚುನಾವಣೆ‌ ಪ್ರಚಾರದ ಕಾವು ರಾಜಧಾನಿಯಲ್ಲಿ ಏರತೊಡಗಿದೆ. ಬೆಂಗಳೂರು ಉತ್ತರ ಲೋಕಸಭೆ ಕ್ಷೇತ್ರದ ಅಭ್ಯರ್ಥಿ ಶೋಭಾ‌ ಕರಂದ್ಲಾಜೆ ಪರವಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಶುಕ್ರವಾರ ಮತಶಿಕಾರಿಗೆ ಧುಮುಕಿದರು. ಭರ್ಜರಿ ರೋಡ್ ಶೋ, ಬೈಕ್ ರ‌್ಯಾಲಿಯಲ್ಲಿ ಭಾಗಿಯಾದ ಅವರು, ಮಾರ್ಗದುದ್ದಕ್ಕೂ ಎರಡೂ ಬದಿಯಲ್ಲಿ ನೆರೆದ ಜನಸ್ತೋಮಕ್ಕೆ ಮತ್ತೊಮ್ಮೆ ಮೋದಿ ಸರ್ಕಾರಕ್ಕೆ‌ ಬೆಂಬಲಿಸಲು ಮನವಿ ಮಾಡಿದರು‌.

ಮಹಾಲಕ್ಷ್ಮಿ ಲೇಔಟ್ ವಿಧಾನಸಭೆ ಕ್ಷೇತ್ರದ ವೃಷಭಾವತಿ ನಗರದ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ವಿಜಯೇಂದ್ರ‌ ಅವರು ರೋಡ್ ಶೋಗೆ‌ ಚಾಲನೆ ನೀಡುತ್ತಿದ್ದಂತೆಯೇ‌ ಜಯ‌ ಘೋಷಗಳು ಮೊಳಗಿದವು. ಮುಂಬದಿ ಬೈಕ್ ಗಳ ಸಾಲು, ತೆರೆದ ವಾಹನದಲ್ಲಿ ಮೆರವಣಿಗೆ ಸಾಗಿತು. ಬಿ.ವೈ.ವಿಜಯೇಂದ್ರ, ಅಭ್ಯರ್ಥಿ ಶೋಭಾ ಕರಂದ್ಲಾಜೆ, ಶಾಸಕ ಕೆ.ಗೋಪಾಲಯ್ಯ, ಬೆಂಗಳೂರು ಉತ್ತರ ಜಿಲ್ಲಾ ಅಧ್ಯಕ್ಷ ಎಸ್.ಹರೀಶ್ ಇನ್ನಿತರ ಮುಖಂಡರು‌ ಇದ್ದರು.

ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ

ರೋಡ್ ಶೋನಲ್ಲಿ ಭಾಗವಹಿಸುವ ಮುನ್ನ ಸುದ್ದಿಗಾರರೊಂದಿಗೆ ಬಿ.ವೈ.ವಿಜಯೇಂದ್ರ ಮಾತನಾಡಿ ಕೊಲೆಗಳು, ಹಲ್ಲೆ, ದೌರ್ಜನ್ಯಗಳು ಮಿತಿ ಮೀರಿ ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟು, ಅರಾಜಕತೆ‌ ಸೃಷ್ಟಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹುಬ್ಬಳ್ಳಿಯಲ್ಲಿ ವಿದ್ಯಾರ್ಥಿನಿ ಹತ್ಯೆಯಾಗಿದೆ. ಬೆಂಗಳೂರಿನಲ್ಲಿ ಜೈಶ್ರೀರಾಮ್ ಎಂದು ಘೋಷಣೆ ಕೂಗುವುದಕ್ಕೆ ಅಡ್ಡಿಪಡಿಸಿ ಹಲ್ಲೆ ಮಾಡುವ ಜತೆಗೆ ಬೆದರಿಕೆ‌ ಹಾಕಲಾಗಿದೆ. ಸಿಎಂ ಸಿದ್ದರಾಮಯ್ಯ ಅವರು‌ ಇದರ ಹೊಣೆ ಹೊರಬೇಕು ಎಂದು ಆಗ್ರಹಿಸಿದರು.

ಗ್ಯಾರಂಟಿಗಳ ಮೂಲಕ ಜನರಿಗೆ ಟೋಪಿ ಹಾಕಿದವರೇ‌ ಕಾಂಗ್ರೆಸ್ ನಾಯಕರು. ಕೊಟ್ಟ ಮಾತು ಸರಿಯಾಗಿ ಪಾಲಿಸದೆ ರಾಜ್ಯದ ಮಾನ, ಮರ್ಯಾದೆ‌ ತೆಗೆಯುವ ಕೆಲಸ ಮಾಡುತ್ತಿದ್ದಾರೆ. ಗ್ಯಾರಂಟಿ ಗಳ ಹೆಸರಿನಲ್ಲಿ ಚೊಂಬು ನೀಡಿದ ಕಾಂಗ್ರೆಸ್ ನವರಿಗೆ ಈ ಚುನಾವಣೆಯಲ್ಲಿ ಜನರೇ ತಕ್ಕಪಾಠ ಕಲಿಸುತ್ತಾರೆ‌ ಎಂದು ಬಿ.ವೈ.ವಿಜಯೇಂದ್ರ ವಾಗ್ದಾಳಿ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net