ಅಮಿತ್ ಶಾ ದಾರಿಯಲ್ಲಿ ವಿಜಯೇಂದ್ರ ಹೆಜ್ಜೆ !

IMG-20231111-WA0010
Published on

ಬೆಂಗಳೂರು: 'ಬೂತ್ ಗೆದ್ದರೆ ಚುನಾವಣೆಯಲ್ಲಿ ಗೆಲುವಿನ ದಾರಿ' ಸುಗಮವೆಂಬ ಬಿಜೆಪಿ ರಾಷ್ಟ್ರೀಯ ವರಿಷ್ಠರ ಅದರಲ್ಲೂ ಕೇಂದ್ರ ಗೃಹ ಅಮಿತ್ ಶಾ ಅವರ ಬಲವಾದ ನಂಬಿಕೆ ಹಾಗೂ ಸಂಘಟನಾ ತತ್ವಗಳಲ್ಲಿ ಪ್ರಧಾನವಾಗಿದೆ. ಅದೇ ದಾರಿಯಲ್ಲಿ ರಾಜ್ಯ ಬಿಜೆಪಿ ನೂತನ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹೆಜ್ಜೆಯಿಟ್ಟಿದ್ದಾರೆ !.

ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಪಕ್ಷದ ರಾಜ್ಯಾಧ್ಯಕ್ಷರನ್ನಾಗಿ ನೇಮಿಸಿ, ಬೆನ್ನುತಟ್ಟಿ ಸಂಘಟನಾ ಕೆಲಸಕ್ಕೆ ಹುರಿದುಂಬಿಸಿದ ಮರು ದಿನವಾದ ಇಂದು ಬೆಂಗಳೂರಿನ ಗಾಂಧಿನಗರ ವಿಧಾನಸಭೆ ಕ್ಷೇತ್ರದ ಕುಮಾರ ಕೃಪಾ ಮತಗಟ್ಟೆ ಸಂಖ್ಯೆ 40ರ ಅಧ್ಯಕ್ಷ ಶಶಿಧರ ಮನೆಗೆ ಭೇಟಿ ನೀಡಿ, ಸಿಹಿ ತಿನ್ನಿಸಿ ಕುಟುಂಬ ಸದಸ್ಯರು ಹಾಗೂ ಪಕ್ಷದ ಕಾರ್ಯಕರ್ತರ ಸಂತಸ, ಸಂಭ್ರಮದಲ್ಲಿ ಭಾಗಿಯಾದರು.

ಕೇಶವ ಕೃಪಾಕ್ಕೆ ಭೇಟಿ

ಬೂತ್ ಕಾರ್ಯಕರ್ತರ ಭೇಟಿಯ ಬಳಿಕ ಚಾಮರಾಜ ಪೇಟೆಯಲ್ಲಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘ ( ಆರ್ ಎಸ್ ಎಸ್)ದ ಕಚೇರಿ 'ಕೇಶವ ಕೃಪಾ'ಕ್ಕೆ ಧಾವಿಸಿ ಸಂಘದ ಪ್ರಮುಖರ ಶುಭಾಶೀರ್ವಾದ ಪಡೆದು, ಔಪಚಾರಿಕವಾಗಿ ಮಾತುಕತೆ ನಡೆಸಿದರು. ಮುಂದಿನ ನಡೆಯ ಕುರಿತು ಆರಂಭಿಕ ಸಲಹೆಗಳನ್ನು ಪಡೆದರು ಎಂದು ಮೂಲಗಳು ತಿಳಿಸಿವೆ.

ಒಂದೆಡೆ ಸಂಘಟನೆಗೆ ಭದ್ರ ಬುನಾದಿ ಮತಗಟ್ಟೆ, ಮತ್ತೊಂದೆಡೆ ಸಂಘಟನೆಯ ತಲೆ ಕಾಯ್ದು ಕಾಪಾಡುವ ' ಕೇಶವ ಕೃಪಾ'ಕ್ಕೆ ಭೇಟಿ ನೀಡುವ ಮೂಲಕ ಬಿ.ವೈ.ವಿಜಯೇಂದ್ರ ಅವರು ಕಾರ್ಯತತ್ಪರತೆ ಹೇಗಿರಲಿದೆ ಎಂಬ ಸಣ್ಣ ಸುಳಿವು ಬಿಟ್ಟುಕೊಟ್ಟಿದ್ದಾರೆ. ಅಲ್ಲದೆ, ಪ್ರತಿ ಹಂತದಲ್ಲೂ ಸಂಘಟನೆಯೊಂದಿಗೆ ವಿಶ್ವಾಸ, ಕಾರ್ಯಕರ್ತರ ನಿಕಟತೆ, ಸಂಘದ ಮಾರ್ಗದರ್ಶನದಂತೆ ಸಾಗುವೆ ಎಂಬ ನಿಲುವು ನಡೆಯ ಮೂಲಕ ತೋರಿಸಿ ಕೊಟ್ಟಿದ್ದಾರೆ.

ಬಿ.ವೈ.ವಿಜಯೇಂದ್ರ ಅವರಿಗೆ ಸಂಸದ ಪಿ‌.ಸಿ.ಮೋಹನ್, ಹಲವು ಮುಖಂಡರು ಹಾಗೂ ಕಾರ್ಯಕರ್ತರು ಸಾಥ್ ನೀಡಿ ಹರ್ಷೋಲ್ಲಾಸ ಹಂಚಿಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net