

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರಿಗೆ ಭೇಟಿಯಾದ ಕೆಲ ದಿನಗಳ ಅಂತರದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರನ್ನೂ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಭೇಟಿಯಾಗಿ, ‘ಕಾರ್ಯಸಾಧನೆ’ ವರದಿ ಸಲ್ಲಿಸಿದ್ದಾರೆ.
ವೈಯಕ್ತಿಕ ಕೆಲಸದ ನಿಮಿತ್ತ ನವದೆಹಲಿಗೆ ತೆರಳಿದ್ದ ವಿಜಯೇಂದ್ರ, ಇದೇ ವೇಳೆ ಅಮಿತ್ ಷಾಗೆ ಭೇಟಿ ಮಾಡಿ ಹೊಸ ವರ್ಷದ ಶುಭ ಹಾರೈಸಿ ‘ವಚನ’ ಗ್ರಂಥವನ್ನು ನೀಡಿದರು. ಇದೇ ಸಂದರ್ಭದಲ್ಲಿ ಒಂದು ವರ್ಷದ ಕಾರ್ಯಸಾಧನೆ, ಮುಂದಿನ ಕಾರ್ಯತಂತ್ರದ ವರದಿ ಮಂಡಿಸಿದರು.
ರಾಜ್ಯದಲ್ಲಿ ಪಕ್ಷದ ಸಂಘಟಿಸುವ ನಿಟ್ಟಿನಲ್ಲಿ ಕಳೆದ ವರ್ಷದಿಂದೀಚೆಗೆ ಹಮ್ಮಿಕೊಂಡಿರುವ ಕಾರ್ಯಕ್ರಮಗಳು, ಹೋರಾಟಗಳು ಹಾಗೂ ಕಾಂಗ್ರೆಸ್ ಆಡಳಿತದ ಪರಿಣಾಮವಾಗಿ ಪ್ರಸ್ತುತ ಉದ್ಭವಿಸಿರುವ ಸಮಸ್ಯೆಗಳನ್ನು ವಿವರಿಸಿದರು.
ಕಾಂಗ್ರೆಸ್ ಸರ್ಕಾರ, ಸಚಿವರುಗಳ ವಿರುದ್ಧ ಆರೋಪಗಳ ಕುರಿತು ಮಾಹಿತಿ ನೀಡಿ, ಮುಂಬರುವ ದಿನಗಳಲ್ಲಿ ಹೋರಾಟದ ಕಾರ್ಯತಂತ್ರ, ಸಂಘಟನೆಯನ್ನು ಮತ್ತಷ್ಟು ಬಲವೃದ್ಧಿಗೊಳಿಸಲು ಯೋಜಿಸಿರುವ ಕಾರ್ಯಕ್ರಮಗಳನ್ನು ವಿವರಿ ಅಮಿತ್ ಷಾ ಮಾರ್ಗದರ್ಶನವನ್ನು ವಿಜಯೇಂದ್ರ ಕೋರಿದರು.
ಜನಪರವಾಗಿ ಕೆಲಸ ಮಾಡುವ ಬದ್ಧತೆ, ಛಲಬಿಡದ ಹೋರಾಟ, ಸಂಘಟನೆಯ ಬಗೆಗಿನ ಕಾಳಜಿ, ಬದ್ಧತೆ, ಪಕ್ಷ ಕಟ್ಟುವ ಕಾಯಕದಲ್ಲಿ ಅಮಿತ್ ಷಾ ಪ್ರೇರಣಾಶಕ್ತಿಯಾಗಿದ್ದು, ಅವರ ಭೇಟಿಯು ಇನ್ನಷ್ಟು ಉತ್ಸಾಹ ತುಂಬಿ, ನಿರೀಕ್ಷಿತ ಗುರಿ ತಲುಪಲು ಆತ್ಮವಿಶ್ವಾಸ ಹೆಚ್ಚಿಸಿದೆ ಎಂದು ವಿಜಯೇಂದ್ರ ಹೇಳಿದ್ದಾರೆ.