ಸಾಮಾಜಿಕ ನ್ಯಾಯ ವಿತರಣೆಗೆ ನೈಜ ಬದ್ಧತೆ: ವಿಜಯೇಂದ್ರ ಪ್ರಶಂಸೆ | Congress is trying to create rift between castes

B Y Vijayendra
Published on

ಬೆಂಗಳೂರು: ಜನಗಣತಿಯೊಂದಿಗೆ ಜಾತಿಗಣತಿಯನ್ನೂ ಸೇರ್ಪಡೆಗೊಳಿಸುವ ಮೂಲಕ ಸಾಮಾಜಿಕ ನ್ಯಾಯ ವಿತರಿಸಲು ನೈಜ ಬದ್ಧತೆಯನ್ನು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ತೋರಿಸಿದೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಪ್ರಶಂಸಿಸಿದ್ದಾರೆ.

ಐದು ದಶಕಗಳಷ್ಟು ದೇಶವನ್ನು ಆಳಿದ ಕಾಂಗ್ರೆಸ್ ಪಕ್ಷ ಎಂದೂ ಇಂತಹ ಸಾಮಾಜಿಕ ನ್ಯಾಯದ ಪರ ಬದ್ಧತೆಯನ್ನು ತೋರದೇ ಜನಗಣತಿಗಷ್ಟೇ ತನ್ನ ವ್ಯಾಪ್ತಿಯನ್ನು ಸೀಮಿತಗೊಳಿಸಿಕೊಂಡಿತ್ತು ಎಂದು ಟೀಕಿಸಿ, ಸಾಮಾಜಿಕ ಜಾಲತಾಣದ ತಮ್ಮ ಖಾತೆಯಲ್ಲಿ ಸಂದೇಶ ಹಂಚಿಕೊಂಡಿದ್ದಾರೆ.

ಸಮಾಜದ ಶೋಷಿತರು, ಹಿಂದುಳಿದವರು, ಅತಿ ಹಿಂದುಳಿದವರ ಶೈಕ್ಷಣಿಕ, ಆರ್ಥಿಕ ಹಾಗೂ ಔದ್ಯೋಗಿಕ ಸ್ಥಿತಿಗತಿ ಅರಿಯಲು ಜನಗಣತಿಯೊಂದಿಗೆ ಜಾತಿಗಣತಿಯನ್ನೂ ಸೇರ್ಪಡೆಯು ಐತಿಹಾಸಿಕ ನಿರ್ಧಾರವಾಗಿದೆ ಎಂದು ಬಣ್ಣಿಸಿದ್ದಾರೆ.

ಜಾತಿ ಎತ್ತಿ ಕಟ್ಟುವ ಕಾಂಗ್ರೆಸ್

ಕಾಂಗ್ರೆಸ್ ಎಂದರೆ ಜಾತಿ -ಜಾತಿಗಳನ್ನು ಎತ್ತಿ ಕಟ್ಟುವುದು, ಮತೀಯ ಶಕ್ತಿಗಳನ್ನು ಮತ ಬೇಟೆಗಾಗಿ ಓಲೈಸುವುದಾಗಿದೆ. ಕರ್ನಾಟಕದಲ್ಲಿ ಇತ್ತೀಚೆಗೆ ಜಾತಿ ಗಣತಿಯ ಹೆಸರಿನಲ್ಲಿ ವಿಪರೀತ ಗೊಂದಲ ಸೃಷ್ಟಿಸಿದೆ ಎಂದು ವಾಗ್ದಾಳಿ ಮಾಡಿದ್ದಾರೆ.

ಅವೈಜ್ಞಾನಿಕ ಅಂಶಗಳಿಂದ ಕೂಡಿದ ವಾಸ್ತವಕ್ಕೆ ದೂರವಾದ ವರದಿಯನ್ನು ಬಿಡುಗಡೆ ಮಾಡಲು ಯತ್ನಿಸಿದೆ. ಸಮುದಾಯಗಳ ನಡುವೆ ಬಿರುಕು ಮೂಡಿಸುವ ಕೆಲಸಕ್ಕೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಕೈಹಾಕಿದ್ದು, ಇದರ ವಿರುದ್ಧ ನಾಡಿನದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.

ಈ ನಡುವೆ ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರ ಸಾಮಾಜಿಕ ಸ್ಥಿತಿಗತಿ ಅದರಲ್ಲೂ ಜಾತಿ ಆಧಾರಿತ ಸ್ಥಿತಿ ಗತಿಗಳನ್ನು ಅಳೆಯಲು ಜನಗಣತಿಯ ಜತೆಗೆ ಜಾತಿಗಣತಿಯನ್ನು ಸೇರಿಸಿದ್ದಾರೆ. ಆ ಮೂಲಕ ಕಾಂಗ್ರೆಸ್ಸಿಗರ ಮತ ಬ್ಯಾಂಕ್ ರಾಜಕಾರಣಕ್ಕೆ ತಕ್ಕ ಉತ್ತರ ನೀಡಲಿದ್ದಾರೆ.

ಆಶಯಕ್ಕೆ ಪೂರಕ

ಬಾಬಾ ಸಾಹೇಬ್ ಡಾ.ಅಂಬೇಡ್ಕರ್ ಅವರ ಸಿದ್ಧಾಂತ ಹಾಗೂ ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯುವ ನಿಟ್ಟಿನಲ್ಲಿ ಜಾತಿಗಣತಿಗೆ ಮುಂದಾಗಿದ್ದು, ಸಮಾನತೆ ಹಾಗೂ ಸಬಲೀಕರಣದತ್ತ ದಿಟ್ಟ ಹೆಜ್ಜೆಯಿರಿಸಿದಂತಾಗಿದೆ.

ಜಗಜ್ಯೋತಿ ಬಸವೇಶ್ವರರ ಜಯಂತಿಯಂದೇ ಈ ನಿರ್ಧಾರ ಕೈಗೊಂಡಿರುವುದು ಸಾಮಾಜಿಕ ನ್ಯಾಯದ ಕ್ರಾಂತಿಗೆ ನ್ಯಾಯದ ಕಹಳೆ ಮೊಳಗಿಸಿದಂತಾಗಿದೆ ಎಂದು ಬಿ.ವೈ.ವಿಜಯೇಂದ್ರ ವಿಶ್ಲೇಷಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net