

ಬೆಂಗಳೂರು: ನೀವು ಕಾನೂನಿನ ಪಾಠ ಹೇಳುವುದು ಕಳ್ಳನೊಬ್ಬ ಸತ್ಸಂಗದಲ್ಲಿ ಪ್ರವಚನ ನೀಡಿದಂತೆ! ಎಂದು ವಿಜಯೇಂದ್ರ ವಿರುದ್ಧ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಟಾಂಗ್ ಕೊಟ್ಟರು.
ಖರ್ಗೆ ಕುಟುಂಬಕ್ಕೆ ಸೇರಿದ ಟ್ರಸ್ಟ್ ಸರ್ಕಾರಕ್ಕೆ ನಿವೇಶನಗಳನ್ನು ವಾಪಸ್ ನೀಡಲು ಮುಂದಾಗಿರುವ ಕುರಿತು ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ರಾಜಕೀಯ ಜಟಾಪಟಿಗೆ ಕಾರಣವಾಗಿದೆ.
ಪ್ರಿಯಾಂಕ್ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹಲವು ಆರೋಪ ಮಾಡಿದ್ದರು. ಇದಕ್ಕೆ ತಿರುಗೇಟು ನೀಡಿರುವ ಪ್ರಿಯಾಂಕ್ ಖರ್ಗೆ, ವಿಜಯೇಂದ್ರರವರೇ ನೀವು ಕಾನೂನಿನ ಪಾಠ ಹೇಳುವುದು ಕಳ್ಳನೊಬ್ಬ ಸತ್ಸಂಗದಲ್ಲಿ ಪ್ರವಚನ ನೀಡಿದಂತೆ ಭಾಸವಾಗುತ್ತದೆ! ಎಂದು ವ್ಯಂಗ್ಯವಾಡಿದರು.
ಪೋಕ್ಸೋ ಪ್ರಕರಣವನ್ನು ಎದುರಿಸುತ್ತಿರುವ ಪೂಜ್ಯ ತಂದೆಯವರ ಸುಪುತ್ರರು ನೀವು. ಅಕ್ರಮ ಹಣ ವರ್ಗಾವಣೆ ಪ್ರಕರಣ ಎದುರಿಸುತ್ತಿರುವ ವಿಜಯೇಂದ್ರ ಅವರು ನಿಯಮ, ಕಾನೂನು, ನೈತಿಕತೆ ಎಂಬ ಪದಗಳನ್ನು ಬಳಸುವುದು ಸ್ಟ್ಯಾಂಡ್ ಅಪ್ ಕಾಮಿಡಿ ಎನಿಸುತ್ತದೆ ಎಂದು ಲೇವಡಿ ಮಾಡಿದರು.
ಸಿದ್ದಾರ್ಥ ವಿಹಾರ ಟ್ರಸ್ಟ್ ನಿವೇಶನ ಹಿಂದಿರುಗಿಸಿಲ್ಲ. ನಿವೇಶನ ಹಸ್ತಾಂತರವೇ ಆಗದೆ ನಿವೇಶನ ಹಿಂದುರಿಗಿಸಲು ಸಾಧ್ಯವಾಗುವುದಿಲ್ಲ. ನಿವೇಶನಕ್ಕಾಗಿ ಸಲ್ಲಿಸಿದ್ದ ಕೋರಿಕೆಯನ್ನು ಹಿಂಪಡೆಯಲಾಗಿದೆ. ಬಿಜೆಪಿಯವರು ತಮ್ಮ ತಿಳುವಳಿಕೆಯನ್ನು, ಹೇಳಿಕೆಗಳನ್ನು ಸರಿಪಡಿಸಿಕೊಳ್ಳಲಿ ಎಂದು ತಿರುಗೇಟು ನೀಡಿದರು.
ಸಿದ್ಧಾರ್ಥ ವಿಹಾರ ಟ್ರಸ್ಟ್ ಸಿಎ ನಿವೇಶನ ಪಡೆದಿದ್ದು ಹೇಗೆ ಕಾನೂನುಬಾಹಿರವಾಗುತ್ತದೆ ಎಂಬುದನ್ನು ಇದುವರೆಗೂ ಬಿಜೆಪಿಯವರಿಗೆ ನಿರೂಪಿಸಲು ಸಾಧ್ಯವಾಗಿಲ್ಲ. ಈಗಲಾದರೂ ಹೇಳುವ ಪ್ರಯತ್ನ ಮಾಡಲಿ. ಆರ್‌ಟಿಜಿಎಸ್ ಮೂಲಕ ಪಡೆಯುವ ಲಂಚ ಹೇಗೆ ಕಾನೂನಾತ್ಮಕವಾಗುತ್ತದೆ ಎನ್ನುವುದನ್ನು ಹೇಳುವಿರಾ? ಎಂದು ಕೆಣಕಿದರು.
ದುಬೈ, ಮಾರಿಷಸ್‌ನಲ್ಲಿ ಎಷ್ಟು ಅಕ್ರಮ ಹಣ ಹೂಡಿಕೆ ಮಾಡಿದ್ದೀರಿ ಎಂಬ ನಿಮ್ಮದೇ ಪಕ್ಷದ ಯತ್ನಾಳ್ ಪ್ರಶ್ನೆಗೆ ಉತ್ತರಿಸುತ್ತೀರಾ? ತಮ್ಮ ಮೇಲೆ ಅಕ್ರಮ ಹಣ ವರ್ಗಾವಣೆ ಕೇಸ್ ದಾಖಲಾಗಿದ್ದೇಕೆ ಏನು ಹೇಳುತ್ತೀರಿ? ಪ್ರೇರಣಾ ಟ್ರಸ್ಟ್ ಹೆಸರಲ್ಲಿ ಕೊಳ್ಳೆ ಹೊಡೆದ ಭೂಮಿ ಎಷ್ಟು ಎಂಬುದನ್ನು ಬಹಿರಂಗಪಡಿಸಿತ್ತೀರಾ? ಕೋವಿಡ್ ಸಮಯದಲ್ಲಿ ಕೊಲ್ಕತ್ತ ಮೂಲದ ಕಂಪನಿಗಳಿಂದ ನಿಮ್ಮ ಖಾತೆಗಳಿಗೆ ಹಣ ವರ್ಗಾವಣೆಯಾಗಿದ್ದು ಏಕೆ ಎನ್ನುವುದನ್ನು ಹೇಳಿ ಎಂದು ಪ್ರಶ್ನಿಸಿದರು.
ಸಿದ್ಧಾರ್ಥ ಟ್ರಸ್ಟ್‌ಗೆ ಕೆಐಎಡಿಬಿಯಿಂದ ಮಂಜೂರಾಗಿದ್ದ 5 ಎಕರೆ ಸಿಎ ನಿವೇಶನವನ್ನು ಬೇಷರತ್ ಹಿಂದಿರುಗಿಸಿ ಖರ್ಗೆ ಕುಟುಂಬ ಮುಡಾ ಹಗರಣದ ರೂವಾರಿ ಸಿದ್ದರಾಮಯ್ಯನವರ ಹಾದಿಯನ್ನೇ ತುಳಿದಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಟೀಕಿಸಿದ್ದರು.