ಅಕ್ರಮ ವಸೂಲಿಗೆ ಇಳಿದ ಸರ್ಕಾರ: ವಿಜಯೇಂದ್ರ ಆರೋಪ | GST notice issue

B.Y.Vijayendra
Published on

ಬೆಂಗಳೂರು: ಖಾಲಿಯಾಗಿರುವ ಖಜಾನೆ ತುಂಬಿಕೊಳ್ಳಲು ಅಕ್ರಮ ವಸೂಲಿಗೆ ಇಳಿದ ರಾಜ್ಯ ಸರ್ಕಾರ, ರಾತೋರಾತ್ರಿ ಸಣ್ಣ, ಅತಿಸಣ್ಣ ವ್ಯಾಪಾರಿಗಳಿಗೆ ವಾಣಿಜ್ಯ ಇಲಾಖೆ ನೋಟಿಸ್ ಕೊಡಿಸಿ ದಿಗಿಲು ಹುಟ್ಟಿಸಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಗಂಭೀರ ಆರೋಪ ಮಾಡಿದರು.

ಪಕ್ಷದ ರಾಜ್ಯ ಕಚೇರಿಯಲ್ಲಿ ಸುದ್ದಿಗಾರರಿಗೆ ಬುಧವಾರ ಪ್ರತಿಕ್ರಿಯಿಸಿದ ಅವರು, ಜಿಎಸ್ ಟಿ ಸಂಗ್ರಹದಲ್ಲಿ ರಾಜ್ಯ ಸರ್ಕಾರ ಮೊದಲ ಸ್ಥಾನ ಪಡೆಯಬೇಕು ಎಂದು ತೆರಿಗೆ ಸಂಗ್ರಹಿಸುವ ಇಲಾಖೆಗಳಿಗೆ ಸಿಎಂ ಸಿದ್ದರಾಮಯ್ಯ ಸೂಚನೆ, ಬಹಿರಂಗ ಹೇಳಿಕೆ ನೀಡಿದ್ದಿದೆ. ನೋಟಿಸ್ ವಿರುದ್ಧ ಸಣ್ಣ, ಅತಿಸಣ್ಣ ವ್ಯಾಪಾರಿಗಳು ತಿರುಗಿ ಬೀಳುತ್ತಿದ್ದಂತೆಯೇ ಕೇಂದ್ರ ಸರ್ಕಾರದತ್ತ ಅನೇಕ ಸಚಿವರು ಬೊಟ್ಟು ಮಾಡಿ, ದಾರಿ ತಪ್ಪಿಸಲು ಹವಣಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹಾಲು, ಹಣ್ಣು, ತರಕಾರಿ ಸೇರಿ ಕೆಲವು ವಸ್ತುಗಳು ಜಿಎಸ್ ಟಿ ವ್ಯಾಪ್ತಿಗೆ ಬರುವುದಿಲ್ಲ. ಹಾಗೆಯೇ ಜಿಎಸ್ ಟಿಯಲ್ಲೂ ಹಲವು ಹಂತಗಳಿವೆ. ಆದರೆ ಸಣ್ಣ, ಅತಿಸಣ್ಣ ವ್ಯಾಪಾರಿಗಳಿಗೆ ಸಾರಾಸಗಟು ಶೇಕಡ 18ರಷ್ಟು ಜಿಎಸ್ ಟಿ ಪಾವತಿಗೆ ನೀಡಿದ ನೋಟಿಸ್ ಕಾನೂನುಬಾಹಿರವಾಗಿದೆ. ಈ ಧೋರಣೆ ವಿರೋಧಿಸಿ ಚಿಲ್ಲರೆ ವ್ಯಾಪಾರಿಗಳು ಹೂಡಿರುವ ಹೋರಾಟವನ್ನು ಬಿಜೆಪಿ ಬೆಂಬಲಿಸುತ್ತದೆ ಎಂದು ಬಿ.ವೈ.ವಿಜಯೇಂದ್ರ ಹೇಳಿದರು.

ಗೂಂಡಾ ವರ್ತನೆ

ಕಾಂಗ್ರೆಸ್ ಪಕ್ಷದ ಪುಡಾರಿಗಳಿಗೆ ಹೋರಾಟ ಮಾಡುವ ಚಟವಿದ್ದರೆ ಹೈಕೋರ್ಟ್ ಆದೇಶದಂತೆ ಸ್ವಾತಂತ್ರ್ಯ ಉದ್ಯಾನವನದಲ್ಲಿ ನಡೆಸಲಿ. ಪದೇ ಪದೆ ಬಿಜೆಪಿ ರಾಜ್ಯ ಕಚೇರಿ ಮುಂದೆ ಪ್ರತಿಭಟನೆ ನಡೆಸುವುದು ಗೂಂಡಾ ವರ್ತನೆಯಾಗುತ್ತದೆ ಎಂದು ಎಚ್ಚರಿಸಿದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹೋರಾಟದ ಹಕ್ಕುಗಳನ್ನು ಗೌರವಿಸುತ್ತೇವೆ. ಆದರೆ ಹೈಕೋರ್ಟ್ ಆದೇಶ ಉಲ್ಲಂಘಿಸಿ ಇಂತಹ ಪ್ರಯತ್ನಕ್ಕೆ ಕೈಹಾಕುವುದು ಸರಿಯಲ್ಲ. ಬಿಜೆಪಿ ಕಾರ್ಯಕರ್ತರಿಗೂ ಶಕ್ತಿಯಿದೆ. ಕೆಪಿಸಿಸಿ ಕಚೇರಿ ಮುಂದೆ ಹೋರಾಡುವ ತಾಕತ್ತಿದೆ. ಇಂತಹದ್ದೆಲ್ಲ ಸರಿಯಲ್ಲವೆಂದು ತಮ್ಮ ಪಕ್ಷದ ಕಾರ್ಯಕರ್ತರಿಗೆ ತಿಳಿಹೇಳುವಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಗೆ ಮನವಿ ಮಾಡುತ್ತೇನೆ ಎಂದರು.

ರಾಜ್ಯ ಬಿಜೆಪಿ ಕಚೇರಿ ಮುಂದೆ ಕಾಂಗ್ರೆಸ್ ಕಾರ್ಯಕರ್ತರು ಪದೇ ಪದೆ ಹೋರಾಟ ನಡೆಸುತ್ತಿರುವ ಬಗ್ಗೆ ಪೊಲೀಸ್ ಆಯುಕ್ತರ ಗಮನಸೆಳೆದಿದ್ದೇವೆ. ಕಾನೂನು ಕ್ರಮವಹಿಸಲು ಪಕ್ಷದಿಂದ ಮನವಿ ಮಾಡಿದ್ದೇವೆ ಎಂದು ಬಿ.ವೈ.ವಿಜಯೇಂದ್ರ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net