ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ವಿಜಯದೇವ್ ಆಯ್ಕೆ

bdccbank
Published on

ಬೆಂಗಳೂರು: ಬೆಂಗಳೂರು ನಗರ, ಗ್ರಾಮಾಂತರ, ರಾಮನಗರ ಜಿಲ್ಲಾ ಕೇಂದ್ರ ಸಹಕಾರ (ಬಿಡಿಸಿಸಿ ಬ್ಯಾಂಕ್) ಕೇಂದ್ರ ಬ್ಯಾಂಕ್‌ನ ಅಧ್ಯಕ್ಷರಾಗಿ ಕಾಂಗ್ರೆಸ್‌ನ ಎಂ.ಡಿ.ವಿಜಯದೇವ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಬೆಂಗಳೂರು ನಗರ ಜಿಲ್ಲೆ ಸಹಕಾರ ಸಂಘಗಳ ಉಪನಿಬಂಧಕ ಎಂ.ಪಿ.ಮಂಜುನಾಥ್ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿ ಅಧ್ಯಕ್ಷರ ಆಯ್ಕೆಯನ್ನು ಘೋಷಿಸಿದರು. ಅಧ್ಯಕ್ಷರ ಅವಧಿ ಡಿಸೆಂಬರ್ 2025ರ ವರೆಗೆ ಇರುತ್ತದೆ. ನೂತನ ಅಧ್ಯಕ್ಷರನ್ನು ವಿಧಾನ ಪರಿಷತ್ತು ಸದಸ್ಯ ಎಸ್.ರವಿ, ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷ ಡಿ.ಹನುಮಂತಯ್ಯ ಬ್ಯಾಂಕ್ ಉಪಾಧ್ಯಕ್ಷ ಮಂಜು ವೈ.ಎಚ್, ನಿರ್ದೇಶಕರಾದ ಪಟ್ಟಾಭಿರಾಮಯ್ಯ, ನಾರಾಯಣಪ್ಪ, ಚುಂಚೇಗೌಡ, ರಮೇಶ್, ಎಸ್.ಮೆಹಬೂಬ್, ಕೃಷ್ಣಮೂರ್ತಿ, ಬೆಂಗಳೂರು ಗ್ರಾಮಾಂತರ ಜಿ.ಪಂ. ಮಾಜಿ ಅಧ್ಯಕ್ಷ ಬಿ.ರಾಜಣ್ಣ ಅಭಿನಂದಿಸಿದರು.

9 ಶಾಖೆ ಆರಂಭಿಸಲು ಅನುಮತಿ:

ನೂತನ ಅಧ್ಯಕ್ಷ ಎಂ.ಡಿ.ವಿಜಯದೇವ್ ಮಾತನಾಡಿ, ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ವ್ಯಾಪ್ತಿಗೆ ಬೆಂಗಳೂರು ಮಹಾನಗರ ಸೇರಿ ಒಟ್ಟು 12 ತಾಲ್ಲೂಕುಗಳು ಬರುತ್ತವೆ. ಹಾಲಿ ಕಾರ್ಯಾಚರಿಸುತ್ತಿರುವ ಶಾಖೆಗಳ ಜತೆಗೆ ಮತ್ತೆ 9 ಶಾಖೆಗಳನ್ನು ಪ್ರಾರಂಭಿಸಲು ಆರ್‌ಬಿಐ ಅನುಮತಿ ನೀಡಿದೆ. ಸದ್ಯ ಬ್ಯಾಂಕ್ 10.26 ಕೋಟಿ ರೂ. ಲಾಭದಲ್ಲಿದೆ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net