

ಕಳಾಹೀನವಾಗಿದ್ದ ವಸತಿ ಇಲಾಖೆಗೆ ಈಗ ಹುರುಪು ಬಂದಿದೆ. ಅತಿ ಕಡಿಮೆ ಅವಧಿಯಲ್ಲಿ ದೊಡ್ಡ ಗುರಿಯೊಂದನ್ನು ಸಾಧಿಸುವ ಛಲದೊಂದಿಗೆ ಇಲಾಖೆ ಹೊರಟಂತಿದೆ. ಅನುಭವಿ ವಿ.ಸೋಮಣ್ಣ ಎರಡನೇ ಬಾರಿಗೆ ವಸತಿ ಸಚಿವರಾಗಿ ಜವಾಬ್ದಾರಿ ತೆಗೆದುಕೊಂಡ ನಾಲ್ಕೇ ತಿಂಗಳಲ್ಲಿ ಇಲಾಖೆಯಲ್ಲಿ ಸಂಚಲನ ಸೃಷ್ಟಿಯಾಗಿದೆ. ಈ ಹಿಂದೆ ನಡೆದ ಅಕ್ರಮಗಳನ್ನು ಕೊಡವಿ, ಏರುಪೇರುಗಳನ್ನು ಸರಿಪಡಿಸಿ ವ್ಯವಸ್ಥೆಯನ್ನು ಹಳಿಮೇಲೆ ತರಲು 69ರ ಹರೆಯದ ಸೋಮಣ್ಣ, 28ರ ಯುವಕರಂತೆ ಕೆಲಸ ಮಾಡುತ್ತಾ ಚುರುಕುಮುಟ್ಟಿಸಿದ್ದಾರೆ. ಇಲಾಖೆಯಲ್ಲಿ ಆಗಿರುವ, ಆಗಬೇಕಿರುವ ಕೆಲಸಗಳ ಬಗ್ಗೆ ‘ವಿಜಯವಾಣಿ ಫೋನ್- ಇನ್’ನಲ್ಲಿ ಸಚಿವರು ಮನಬಿಚ್ಚಿ ಮಾತನಾಡಿದ್ದಾರೆ.
ಪೌರಕಾರ್ವಿುಕರು ದೇವರಂತೆ ನಗರಗಳನ್ನು ಸ್ವಚ್ಛವಾಗಿಡುವಲ್ಲಿ ಪೌರಕಾರ್ವಿುಕರ ಪಾತ್ರ ಮಹತ್ವದ್ದು. ಅವರು ದೇವರಿದ್ದ ಹಾಗೆ. ಅವರಿಗೆ ಮನೆ ಕೊಡುವ ವಿಚಾರದಲ್ಲಿ ಪ್ರಥಮ ಪ್ರಾಶಸ್ತ್ಯ ನೀಡಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಸಚಿವ ಸೋಮಣ್ಣ ಉತ್ತರಿಸಿದರು.
ಸ್ಲಂಗಳ ನಿಮೂಲನೆಗೆ 70 ಸಾವಿರ ಮನೆ ನಿರ್ಮಾಣ
ಪ್ರಾಧಿಕಾರಗಳು ವಸತಿ ಇಲಾಖೆಗೆ ಬರಲಿ
ನಗರಾಭಿವೃದ್ಧಿ ಇಲಾಖೆಯಡಿ ಇರುವ ಪ್ರಾಧಿಕಾರಗಳನ್ನು ವಸತಿ ಇಲಾಖೆ ವ್ಯಾಫ್ತಿಗೆ ನೀಡಿದರೆ, ವಸತಿ ಯೋಜನೆಯಲ್ಲಿ ಡೂಪ್ಲಿಕೇಷನ್ ಆಗುವುದನ್ನು ತಡೆಯಲು ಸಾಧ್ಯ ಮತ್ತು ಇನ್ನಷ್ಟು ಸಮರ್ಥವಾಗಿ ಕೆಲಸ ಮಾಡಬಹುದಾಗಿದೆ. ಈ ಬಗ್ಗೆ ಮುಖ್ಯಮಂತ್ರಿಗಳ ಜತೆ ಚರ್ಚೆ ಮಾಡಿ ಪ್ರಸ್ತಾವನೆ ಸಲ್ಲಿಸಿದ್ದೇನೆ. ಸರ್ಕಾರ ಈ ಬಗ್ಗೆ ತೀರ್ಮಾನ ತೆಗೆದು ಕೊಳ್ಳಬೇಕಿದೆ ಎಂದು ಸೋಮಣ್ಣ ತಿಳಿಸಿದರು.
ರೇರಾ ಕಾಯ್ದೆಗೆ ಹೊಸ ರೂಪ
ವಸತಿ ಸಮುಚ್ಛಯಗಳಲ್ಲಿ ಮನೆ ಕೊಳ್ಳಲು ಹೋಗಿ ಮೋಸ ಹೋಗುವ ಸಾಮಾನ್ಯ ಜನರನ್ನು ರಕ್ಷಿಸಲು ರೇರಾ ಕಾಯ್ದೆಗೆ ತಿದ್ದುಪಡಿ ತರಲು ಉದ್ದೇಶಿಸಿದ್ದೇನೆ ಎಂದು ವಸತಿ ಸಚಿವ ವಿ.ಸೋಮಣ್ಣ ಹೇಳಿದರು. ಮನೆ ಕೊಳ್ಳುವ ಉದ್ದೇಶದಿಂದ ಮಧ್ಯಮ ವರ್ಗದವರು ಒಂದಷ್ಟು ಕಂತುಗಳನ್ನು ಪಾವತಿಸುತ್ತಾರೆ, ಮಧ್ಯದಲ್ಲಿ ಒಂದೋ ಎರಡೋ ಕಂತು ಪಾವತಿ ಮಾಡದೆ ಇದ್ದರೆ ಅದನ್ನೇ ನಪವಾಗಿಟ್ಟುಕೊಂಡು ಅವರ ಹಣ ಹಿಂತಿರುಗಿಸಿ ಬೇರೆಯವರಿಗೆ ಮನೆ ಮಾರಾಟ ಮಾಡುವ ದಂಧೆ ಹೆಚ್ಚಾಗಿದೆ ಎಂದರು. ರೇರಾ ಕಾಯ್ದೆ ಉಲ್ಲಂಘನೆ ಸಂಬಂಧ 4000ಕ್ಕಿಂತ ಹೆಚ್ಚು ದೂರುಗಳು ದಾಖಲಾಗಿದೆ. ಇದರಲ್ಲಿ 700 ದೂರು ವಿಲೇವಾರಿ ಮಾಡಲಾಗಿದೆ. ಹೆಚ್ಚಿನ ದೂರುಗಳು ಇದೇ ರೀತಿಯದ್ದಾಗಿವೆ. ಸಣ್ಣ ಪುಟ್ಟ ಉಳಿತಾಯ ಮಾಡಿ ಮನೆ ಕೊಳ್ಳಲು ಹೋದವರಿಂದ ಕಂತು ಕಟ್ಟಿಸಿ ನಂತರ ಆ ಮನೆಗಳನ್ನು ಹೆಚ್ಚಿನ ಬೆಲೆ ಬಂದಾಗ ಬೇರೆಯವರಿಗೆ ಮಾರುತ್ತಿದ್ದಾರೆ ಎಂದ ಸೋಮಣ್ಣ, ನಾನೇನು ಬಿಲ್ಡರ್ಗಳ ವಿರೋಧಿಯಲ್ಲ. ಆದರೆ, ಜನಸಾಮಾನ್ಯರಿಗೆ ವಂಚನೆ ಆಗಬಾರದಲ್ಲ. ಹೀಗಾಗಿ ರೇರಾ ಕಾಯ್ದೆಗೆ ತಿದ್ದುಪಡಿ ತರುತ್ತೇನೆ. ಜನ ಸಾಮಾನ್ಯನೂ ಮನೆ ಕೊಳ್ಳುವಂತೆ ಮಾಡುತ್ತೇನೆ ಎಂದು ಹೇಳಿದರು.
ಅಲೆಮಾರಿಗಳಿಗೆ ವಿಶೇಷ ಪ್ಯಾಕೇಜ್ ಬುಡುಬುಡುಕೆ, ಸುಡುಗಾಡುಸಿದ್ದ, ಹಕ್ಕಿಪಿಕ್ಕಿ, ಕಾಡುಕುರುಬರು, ಕಾಡುಗೊಲ್ಲರು ಸೇರಿ ಅಲೆಮಾರಿ ಜನಾಂಗಗಳ ವಸತಿರಹಿತರಿಗೆ ಮನೆ ನಿರ್ವಿುಸಿಕೊಡಲು ವಿಶೇಷ ಪ್ಯಾಕೇಜ್ ರೂಪಿಸಲಾಗುತ್ತಿದೆ, 60 ಸಾವಿರ ಮನೆಗಳನ್ನು ಈ ವರ್ಗದವರಿಗೆ ನಿರ್ವಿುಸಿಕೊಡುವ ಉದ್ದೇಶವಿದೆ ಎಂದು ಹೇಳಿದರು. ಗ್ರಾಮೀಣ ಪ್ರದೇಶದ ವಸತಿ ರಹಿತರಿಗೆ ಮನೆ ನಿರ್ವಿುಸಲು ಬೇಕಾದ ನಿವೇಶನ ರಚಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಈ ಸಂಬಂಧ ಜಾಗ ಗುರುತಿಸಲು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ. ಇದರಿಂದ ಗ್ರಾಮೀಣ ಪ್ರದೇಶದ ಬಹುತೇಕ ಸಮಸ್ಯೆ ಪರಿಹಾರ ಕಾಣಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
9.74 ಲಕ್ಷ ಮನೆ ಪೂರ್ಣ ನನ್ನ ಮೊದಲ ಗುರಿ
ವಿವಿಧ ಕಾರಣಗಳಿಂದ ನನೆಗುದಿಗೆ ಬಿದ್ದಿರುವ ವಸತಿ ಯೋಜನೆಗಳನ್ನು ಪೂರ್ಣಗೊಳಿಸುವುದೇ ನನ್ನ ಮೊದಲ ಗುರಿ ಎಂದು ವಿ.ಸೋಮಣ್ಣ ತಿಳಿಸಿದರು. ಈ ಹಿಂದಿನ ಸರ್ಕಾರ ವಸತಿ ಯೋಜನೆ ಬಗ್ಗೆ ಕಾಳಜಿ ವಹಿಸಲೇ ಇಲ್ಲ. ನನ್ನ ಹಿಂದಿನ ಅವಧಿಯಲ್ಲಿ ಜಾರಿ ಮಾಡಿದ್ದ ಯೋಜನೆಗಳೇ ಪೂರ್ಣಗೊಳಿಸಲಿಲ್ಲ. ಸರಿಸುಮಾರು 9.74 ಲಕ್ಷ ಮನೆಗಳು ಪ್ರಗತಿಯಲ್ಲಿದ್ದು, ಇವು ಪೂರ್ಣಗೊಳ್ಳಲು 10 ಸಾವಿರ ಕೋಟಿ ರೂ. ಬೇಕಾಗುತ್ತದೆ. ಈ ವಿಷಯವನ್ನು ಮುಖ್ಯಮಂತ್ರಿಯವರ ಗಮನಕ್ಕೆ ತರಲಾಗಿದೆ. ಅವರು ಅನುದಾನ ಕೊಡುವ ಭರವಸೆ ನೀಡಿದ್ದಾರೆ ಎಂದರು. ಗ್ರಾಮೀಣ ಭಾಗದಲ್ಲಿ 1.24 ಲಕ್ಷ ನಿವೇಶನಗಳನ್ನು ಬಡವರಿಗೆ ನೀಡಲು 4523 ಎಕರೆ ಜಾಗವಿದೆ. ಅದನ್ನು ಬಡವರಿಗೆ ಹಂಚದೆ ಬಿಟ್ಟರೆ ಬೇರೆ ಯಾರಿಗಾದರೂ ಮಾರಾಟ ಮಾಡಿಬಿಡುತ್ತಾರೆ. ಹೀಗಾಗಿ ಆದ್ಯತೆ ಮೇಲೆ ನಿವೇಶನ ಹಂಚಿಕೆ ಮಾಡಲು ಉದ್ದೇಶಿಸಲಾಗಿದೆ ಎಂದು ಹೇಳಿದರು. ಕೇಂದ್ರ 1.25 ಲಕ್ಷ ಮನೆ ಹಂಚಿಕೆ ಮಾಡಿದ್ದು, ಈಗಿನ ಎಲ್ಲ ವಸತಿ ಯೋಜನೆ ಒಂದು ಹಂತಕ್ಕೆ ಬಂದ ನಂತರ ಅದನ್ನು ಬಳಸಿಕೊಳ್ಳಲಾಗುತ್ತದೆ. ಇದನ್ನು ಬಳಸಲು ಮೂರು ವರ್ಷ ಕಾಲಾವಕಾಶವಿದೆ ಎಂದರು.
ಬಿಡಿಎ ಎಡವಟ್ಟು
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಹುಟ್ಟಿ ಕೊಂಡಿದ್ದು ಯೋಜನೆ ರೂಪಿಸಲು. ಆದರೆ, ಅದನ್ನು ಬಿಟ್ಟು ಅವರು ಲೇಔಟ್ ಮಾಡಲು ಹೋಗಿ ಎಲ್ಲ ಎಡ ವಟ್ಟಾಯಿತು. ಮೂಲ ಉದ್ದೇಶವೇ ಸಫಲವಾಗಲಿಲ್ಲ. ಹೌಸಿಂಗ್ ಬೋರ್ಡ್ ಉತ್ತಮವಾಗಿ ಕೆಲಸ ಮಾಡುತ್ತಿದೆ ಎಂದು ಸೋಮಣ್ಣ ಹೇಳಿದರು.
ಸೋಮಣ್ಣರ ಮಾರ್ಗದರ್ಶನ