

ಬೆಂಗಳೂರು: ಕರೊನಾ ಸೋಂಕು ಹರಡದಂತೆ ದೇಶಾದ್ಯಂತ ಏಪ್ರಿಲ್ 14ರ ತನಕ ಲಾಕ್ಡೌನ್ ಘೋಷಣೆಯಾಗಿದೆ. ಈ ಅವಧಿಯಲ್ಲಿನ ನಿತ್ಯ ನಡೆಯುವ ವಾಸ್ತವ ವಿದ್ಯಮಾನಗಳ ವಿವರವನ್ನು ಯಥಾವತ್ ಜನರಿಗೆ ತಲುಪಿಸುವ ಕೆಲಸವನ್ನು ದಿನಪತ್ರಿಕೆಗಳು ಮಾಡುತ್ತವೆ. ದಿನಪತ್ರಿಕೆಗಳು, ನಿಯತಕಾಲಿಕೆಗಳು ನಾಗರಿಕ ಜಗತ್ತಿನ ಅವಿಭಾಜ್ಯ ಅಂಗ. ಹೊಣೆಗಾರಿಕೆಯ ಪ್ರತೀಕ. ಸೇವೆಯ ದ್ಯೋತಕ. ಸ್ವಾತಂತ್ರ್ಯ ಹೋರಾಟದಿಂದ ಹಿಡಿದು ಇವತ್ತಿನ ಕರೊನಾ ಆಪತ್ತಿನ ತನಕ ಜನರಿಗೆ ಅಗತ್ಯ-ಅಧಿಕೃತ ಸುದ್ದಿ ಮುಟ್ಟಿಸುವಲ್ಲಿ ದಿನಪತ್ರಿಕೆಗಳು ಮಹತ್ವದ ಪಾತ್ರ ವಹಿಸಿವೆ, ವಹಿಸುತ್ತಾ ಇವೆ ಕೂಡ.
ನಮ್ಮ ಜೀವರಕ್ಷಣೆ ಮತ್ತು ದೇಶದ ಹಿತರಕ್ಷಣೆಗಾಗಿ ಇದೊಂದು ತುರ್ತು ಸಂದರ್ಭವೆಂದು ಭಾವಿಸಿ ನಾವೆಲ್ಲ ಸರ್ಕಾರದ ಆದೇಶ ಪಾಲಿಸಲೇಬೇಕಿದೆ. ಪ್ರಧಾನಿ ನರೇಂದ್ರ ಮೋದಿ ಅವರು ವೈದ್ಯರು, ಮಿಲಿಟರಿ, ಪೊಲೀಸ್ ಸಮೂಹದ ಜತೆ ಮಾಧ್ಯಮದವರನ್ನೂ ಅಗತ್ಯ ಸೇವಕರೆಂದು ಘೊಷಿಸಿದ್ದಾರೆ. ಮುಖ್ಯಮಂತ್ರಿ ಯಡಿಯೂರಪ್ಪ ಸಹ ಮಾಧ್ಯಮವನ್ನು ಅಗತ್ಯ ಸೇವೆಗಳ ಪಟ್ಟಿಗೆ ಸೇರಿಸಿದ್ದಾರೆ.
ಯುದ್ಧ, ಅತಿವೃಷ್ಟಿ, ಅನಾವೃಷ್ಟಿಯಂಥ ವಿಷಮ ಸಂದರ್ಭಗಳಲ್ಲೂ ಜೀವದ ಹಂಗು ತೊರೆದು ಕಾರ್ಯ ನಿರ್ವಹಿಸುವುದು ಮಾಧ್ಯಮದ ಜಾಯಮಾನ ಮತ್ತು ಕರ್ತವ್ಯ. ಆದರೆ ಕರೊನಾದಂತಹ ಮಾರಣಾಂತಿಕ ಕಾಯಿಲೆ ಸಂದರ್ಭದಲ್ಲಿ ಕೇವಲ ಕೆಚ್ಚು ಇದ್ದರೆ ಸಾಲದು, ಮುನ್ನೆಚ್ಚರಿಕೆಯೂ ಬೇಕೆಂಬ ಅರಿವು ನಮಗಿದೆ. ಈಗಾಗಲೇ ನಮ್ಮ ಪತ್ರಿಕಾಲಯಗಳು, ಪ್ರಿಂಟಿಂಗ್ ಪ್ರೆಸ್ಗಳು ಅತ್ಯಾಧುನಿಕ, ಹೈಟೆಕ್ ತಂತ್ರಜ್ಞಾನವನ್ನು ಬಳಕೆಗೆ ತಂದಿವೆ. ಮನುಷ್ಯನ ಕೈ ಸ್ಪರ್ಶವೇ ಇಲ್ಲದೆ ಪತ್ರಿಕೆಗಳು ಮುದ್ರಣಗೊಂಡು ಕೊನೆಯ ವಿತರಣಾ ಕೇಂದ್ರದವರೆಗೆ ತಲುಪಿಸುವ ವ್ಯವಸ್ಥೆ ಜಾರಿಯಾಗುತ್ತಿದೆ. ಕೊನೆಯ ವಿತರಣಾ ಕೇಂದ್ರದಿಂದ ವಿತರಕರು ಬರಿಗೈನಲ್ಲಿ ಪತ್ರಿಕೆಯನ್ನು ಮುಟ್ಟದೇ ವಿತರಣೆ ಮಾಡುವ ವ್ಯವಸ್ಥೆಯನ್ನು ರೂಪಿಸುತ್ತಿದ್ದೇವೆ. ಆಸ್ಪತ್ರೆಯಲ್ಲಿ ವೈದ್ಯರು ಎಷ್ಟು ಸುರಕ್ಷಾ ಕ್ರಮಗಳನ್ನು ತೆಗೆದುಕೊಳ್ಳಬಹುದೋ ಪತ್ರಿಕಾ ಸಂಸ್ಥೆಗಳೂ ಪತ್ರಿಕೆಗಳ ವಿತರಣೆಗೆ ಅಷ್ಟೇ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿವೆ. ಪತ್ರಿಕೆಗಳಿಂದ ಕರೊನಾ ಹರಡುವ ಸಾಧ್ಯತೆಗಳು ಇಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆಯೇ ಸ್ಪಷ್ಟಪಡಿಸಿದೆ.
ಪತ್ರಿಕೆಗಳಿಂದ ಯಾವುದೇ ವೈರಸ್ ಹರಡಿದ ಒಂದೇ ಒಂದು ಉದಾಹರಣೆ ಇಲ್ಲ. ಇದೇ ಮೊದಲ ಬಾರಿ ಪತ್ರಿಕೆಗಳು ಇಂಥ ಸುಳ್ಳು ವದಂತಿಯ ಅಪಾಯಎದುರಿಸುತ್ತಿವೆ. ಕರೊನಾದಂತಹ ತುರ್ತು ಸಂದರ್ಭಗಳಲ್ಲಿ ಖಚಿತ ಮಾಹಿತಿ ಪಡೆಯುವ ವಿಶ್ವಾಸಾರ್ಹ ಮಾಧ್ಯಮವೆಂದರೆ ಅವು ಪತ್ರಿಕೆಗಳು ಎನ್ನುವುದನ್ನು ಮರೆಯಬಾರದು. ನಿಮ್ಮ ವಿಜಯವಾಣಿಯ ಮುದ್ರಣ, ವಿತರಣೆ ಹೇಗಾಗುತ್ತಿದೆ ಎಂಬುದನ್ನು ಈ ಕೆಳಗಿನ ಇನ್ಸ್ಟಾಗ್ರಾಂ ವಿಡಿಯೋದಲ್ಲಿ ನೋಡಿ..