

ಭಕ್ತಿಯುಗದ ಸಂತ ಕಬೀರರು ಸಾಂಸಾರಿಕ ಜೀವನದಲ್ಲಿ ಇದ್ದಾಗ, ನೇಯ್ಗೆಯ ಕೆಲಸ ಮಾಡುತ್ತ ಕುಟುಂಬವನ್ನು ಸಲಹಿಕೊಳ್ಳುತ್ತಿದ್ದರು. ಮನೆಯಲ್ಲಿ ಒಂದು ಸಣ್ಣ ಮಗ್ಗದ ಯಂತ್ರ ಇತ್ತು. ಅದರಲ್ಲಿ ನೇದ ಬಟ್ಟೆಯನ್ನು ಸಂತೆಯಲ್ಲಿ ಮಾರಿ, ಐದಾರು ರುಪಾಯಿಗಳನ್ನು ತಂದರೆ, ಒಂದು ವಾರವೆಲ್ಲಾ ಸಂಸಾರ ನಿರ್ವಹಣೆಯಾಗುತ್ತಿತ್ತು. ಮನೆಗೆ ಅತಿಥಿಗಳು ಬಂದರೆ, ಗಂಡ ಹೆಂಡತಿ ತಾವು ಉಪವಾಸವಿದ್ದು ಅತಿಥಿಗಳನ್ನು ಸತ್ಕರಿಸುತ್ತಿದ್ದರು. ಮುಂದಿನ ವಾರದ ವೇಳೆಗೆ ಮತ್ತೊಂದು ಬಟ್ಟೆ ಸಿದ್ಧವಾಗುತ್ತಿತ್ತು. ಹೀಗೆ ಅವರ ನೇಯುವ, ದುಡಿಯುವ ಕಾಯಕ ನಡೆಯುತ್ತಿತ್ತು. ಅವರು ನೇದ ಬಟ್ಟೆಗಳೆಲ್ಲ ವರ್ಣರಂಜಿತವಾಗಿ, ಬಹಳ ಸುಂದರವಾಗಿರುತ್ತಿದ್ದವು. ಆದರೆ ಕಬೀರರು ತನ್ನ ಪದಾರ್ಥವನ್ನು ಹೊಗಳಿಕೊಂಡು ಜನಗಳಿಗೆ ಮಾರುವ ಜಾಯಮಾನದವರಲ್ಲ. ಆದರೂ ಜನರು ತಾವಾಗಿಯೇ ಅದನ್ನು ಕೊಂಡುಕೊಳ್ಳುತ್ತಿದ್ದರು. ಒಂದು ಸಲ ಏನು ಕಾರಣವೋ ಬಟ್ಟೆ ಕೊಳ್ಳಲು ಯಾರೂ ಬರಲಿಲ್ಲ. ಸಂಜೆಯಾಗುತ್ತಾ ಬಂತು. ಪಕ್ಕದಲ್ಲಿ ಒಬ್ಬ ವ್ಯಾಪಾರಿ ಬಹಳ ವಾಚಾಳಿ. ತಾನು ತಂದ ಬಟ್ಟೆಯನ್ನು ಬಗೆಬಗೆಯಾಗಿ ಹೊಗಳುತ್ತ ಜನರನ್ನು ಆಕರ್ಷಿಸಿ, ಸರಕನ್ನು ಮಾರಾಟ ಮಾಡಿಕೊಂಡ. ಬೇಗ ಅವನ ವ್ಯಾಪಾರ ಮುಗಿದು ಹೋಯಿತು. ಬೆಳಗಿನಿಂದ ವ್ಯಾಪಾರವಿಲ್ಲದೆ ಕುಳಿತಿದ್ದ ಕಬೀರರನ್ನು ನೋಡಿ ಅವನಿಗೆ ಕನಿಕರ ಬಂತು. ಕಬೀರರ ಬಟ್ಟೆ ತನ್ನ ಎಲ್ಲಾ ಬಟ್ಟೆಗಳಿಗಿಂತ ಚೆನ್ನಾಗಿದೆ ಎಂದೂ ಅವನಿಗೆ ಗೊತ್ತಿತ್ತು. ಅವನು ಅದನ್ನು ಕೈಗೆ ತೆಗೆದುಕೊಂಡು, ‘ನೋಡಿ ಸೊಗಸಾದ ಬಟ್ಟೆ ಒಂದೇ ಇರುವುದು. ಬೇಗ ಬನ್ನಿ ನಿರಾಶರಾಗಬೇಡಿ’ ಎಂದು ಕೂಗತೊಡಗಿದ. ಜನ ಬಂದು ಮುತ್ತಿಕೊಂಡರು. 15 ರೂ ಕೊಡಿ ಎಂದ. ಕೊನೆಗೆ 12 ರೂಪಾಯಿ ಎಂದ. ಮಾರಾಟ ಮಾಡಿ ಬಂದ 12 ರೂಪಾಯಿಗಳಲ್ಲಿ ತನ್ನ ಕಮಿಷನ್ 5 ರೂ. ಇಟ್ಟುಕೊಂಡು 7 ರೂ.ಗಳನ್ನು ಕಬೀರರಿಗೆ ಕೊಡಲು ಹೋದ. ಅವರು ‘ನನಗೆ ಐದು ರೂಪಾಯಿ ಕೊಡಿ ಸಾಕು’ ಎಂದು ಅಷ್ಟನ್ನು ಮಾತ್ರ ತೆಗೆದುಕೊಂಡರು. ಆ ವ್ಯಾಪಾರಿ ‘ಈ ಮನುಷ್ಯ ಎಂತಹ ಮೂರ್ಖ’ ಎಂದು ಹಾಸ್ಯವಾಗಿ ನಗುತ್ತಾ ಅವರು ಕೊಟ್ಟ ಹಣವನ್ನು ಜೇಬಿಗೆ ಹಾಕಿಕೊಂಡು ಹೋದ.
ಕಬೀರದಾಸರು ಬಾಲ್ಯದಿಂದಲೂ ಬಡತನವಿದ್ದರೂ ನಿರ್ವೇಹಿಗಳಾಗಿ ಬದುಕನ್ನು ಜಗತ್ತಿಗೆ ತೋರಿಸಿದವರು. ಕಬೀರರು ತಾವು ನೇಯುವ ಬಟ್ಟೆ ಉತ್ತಮ ದರ್ಜೆಯದಾಗಿದ್ದರೂ ಎಂದೂ ಅದನ್ನು ಹೇಳಿಕೊಳ್ಳುತ್ತಿರಲಿಲ್ಲ. ಸಾಮಾನ್ಯ ಜನರಾದ ನಾವಾದರೋ ನಮ್ಮಲ್ಲಿ ಇದ್ದುದನ್ನು ಇಲ್ಲದ್ದನ್ನು ಎಲ್ಲವನ್ನೂ ಸೇರಿಸಿ ಡಂಗುರ ಬಾರಿಸುತ್ತೇವೆ; ಅದರಿಂದ ಜನರನ್ನು ಸೆಳೆದು ಲಾಭ ಮಾಡಿಕೊಳ್ಳಲು ನೋಡುತ್ತೇವೆ. ನಮ್ಮ ಯೋಗ್ಯತೆ ಮೀರಿ ಹಣ ಬಂದರೂ ಅರ್ಹತೆಗೆ ತಕ್ಕಷ್ಟನ್ನು ಮಾತ್ರ ಸ್ವೀಕರಿಸುವ ಗೋಜಿಗೆ ಹೋಗುವುದಿಲ್ಲ. ‘ಸಾಕು’ ಎನ್ನದೆ ‘ಬೇಕು’ ಎಂಬುದೇ ಮಂತ್ರ. ಆದರೆ, ಮಹಾತ್ಮರ ಮನಸ್ಸಿನ ವ್ರತವನ್ನು ಬಲ್ಲವರಾರು?!
| ಪದ್ಮಾ ಮೂರ್ತಿ
(ಲೇಖಕರು ಹವ್ಯಾಸಿ ಬರಹಗಾರ್ತಿ)