

ಬೆಂಗಳೂರು: ದೀಪಾವಳಿ ಸಂದರ್ಭದಲ್ಲಿ ಕನ್ನಡದ ನಂ.1 ದಿನಪತ್ರಿಕೆ ‘ವಿಜಯವಾಣಿ’ ನಡೆಸಿದ್ದ ದೀಪಾವಳಿ ಕಥಾಸ್ಪರ್ಧೆ- 2024 ವಿಜೇತರಿಗೆ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ನಿಯೋಜಿತ ಅಧ್ಯಕ್ಷ ಗೊ.ರು. ಚನ್ನಬಸಪ್ಪ ಬಹುಮಾನ ಪ್ರದಾನ ಮಾಡಿದರು.
‘ವಿಜಯವಾಣಿ’ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ‘ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ’ ಕಥೆಗೆ ಪ್ರಥಮ ಬಹುಮಾನಕ್ಕೆ ಆಯ್ಕೆಯಾದ ಚಾಮರಾಜನಗರ ಜಿಲ್ಲೆಯ ಹರವೆ ಗ್ರಾಮದ ಗೃಹಿಣಿ ಶೀಲಾ ಸತ್ಯೇಂದ್ರ ಸ್ವಾಮಿ, ‘ನರ್ತನ ಶಾಲಾ’ ಕಥೆಗೆ ದ್ವಿತೀಯ ಬಹುಮಾನಕ್ಕೆ ಪಾತ್ರರಾದ ಧಾರವಾಡದಲ್ಲಿ ಸಹಾಯಕ ಅಂಚೆ ಅಧೀಕ್ಷಕರಾಗಿರುವ ಬಳ್ಳಾರಿ ಮೂಲದ ಶ್ರೀನಿಧಿ ಕೆ. ಹಾಗೂ ‘ಅಮ್ನೇಷಿಯಾ’ ಕಥೆಗೆ ತೃತೀಯ ಬಹುಮಾನಕ್ಕೆ ಆಯ್ಕೆಯಾದ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕು ಅರಳಸುರಳಿ ಗ್ರಾಮದ ವಿನಾಯಕ ಅವರಿಗೆ ನಾಡೋಜ ಗೊ.ರು. ಚನ್ನಬಸಪ್ಪ ಅವರು ಕ್ರಮವಾಗಿ 20, 15 ಹಾಗೂ 10 ಸಾವಿರ ರೂ. ನಗದು ಬಹುಮಾನ, ಪಾರಿತೋಷಕ ವಿತರಿಸಿ ಸನ್ಮಾನಿಸಿದರು.
ಹುಬ್ಬಳ್ಳಿಯ ಸಾಹಿತ್ಯ ಪ್ರಕಾಶನದವರು ಪ್ರಾಯೋಜಿಸಿದ್ದ ಕಥಾಸ್ಪರ್ಧೆಗೆ 3800ಕ್ಕೂ ಅಧಿಕ ಕಥೆಗಳು ಬಂದಿದ್ದವು. ಅದರಲ್ಲಿ 3 ಬಹುಮಾನಿತ ಹಾಗೂ 3 ಮೆಚ್ಚುಗೆ ಪಡೆದ ಕಥೆಗಳನ್ನು ತೀರ್ಪಗಾರರಾದ ಹಿರಿಯ ವಿಮರ್ಶಕ ಡಾ. ಜಿ.ಎಂ. ಹೆಗಡೆ, ಕಥೆಗಾರರಾದ ಡಾ. ಅಜಕ್ಕಳ ಗಿರೀಶ ಭಟ್ ಹಾಗೂ ಚಂದ್ರಶೇಖರ ವಸ್ತ್ರದ ಅವರು ಆಯ್ಕೆ ಮಾಡಿದ್ದರು. ಕಾರ್ಯಕ್ರಮದಲ್ಲಿ ಸಾಹಿತ್ಯ ಪ್ರಕಾಶನ ಮುಖ್ಯಸ್ಥ ಎಂ.ಎ. ಸುಬ್ರಹ್ಮಣ್ಯ, ಹಿರಿಯ ಲೇಖಕ ರಾಮನಾಥ್, ವಿಜಯವಾಣಿ ಡಿಜಿಟಲ್ ವಿಭಾಗದ ಸಂಪಾದಕ ಸಿದ್ದು ಕಾಳೋಜಿ ಮತ್ತಿತರರಿದ್ದರು.
ಸಾಮಾಜಿಕ ಸಮಸ್ಯೆಗೆ ಕಲೆಯ ಸ್ಪರ್ಶ ನೀಡಲಿ: ಹೊಸ ಪೀಳಿಗೆಯ ಕಥೆಗಾರರು ತಮ್ಮ ಬರಹಗಳಲ್ಲಿ ಸಾರ್ವಜನಿಕ ಜೀವನ ವನ್ನು ತೆರೆದ ಕಣ್ಣಿನಿಂದ ನೋಡುವ, ಜೀವನ ಮೌಲ್ಯಗಳನ್ನು ಮುನ್ನೆಲೆಗೆ ತರುವ ಅಂಶಗಳತ್ತ ಹೆಚ್ಚಿನ ಗಮನ ನೀಡಬೇಕಿದೆ. ನಮ್ಮ ಸುತ್ತಮುತ್ತಲಿನ ಸಾರ್ವಜನಿಕ ಜೀವನದ ಬಗ್ಗೆ ಒಳಗಣ್ಣಿನಿಂದ ವಿಶ್ಲೇಷಿಸಿ ಕಲೆಯ ಸ್ಪರ್ಶ ನೀಡಬೇಕು. ಜತೆಗೆ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಒದಗಿಸುವಂತಹ ಸೂತ್ರವನ್ನು ಕೃತಿರೂಪಕ್ಕೆ ತರುವ ಕೆಲಸದತ್ತ ದೃಷ್ಟಿಹರಿಸಬೇಕು. ಇಂತಹ ವಿಶಿಷ್ಟ ಹಾಗೂ ಸಿದ್ಧಸೂತ್ರದಿಂದ ಹೊರಬಂದು ಓದುಗರಿಗೆ ಹೊಸ ಅನುಭವ ನೀಡುವ ಕಥಾವಸ್ತುಗಳನ್ನು ಆಯ್ಕೆ ಮಾಡಿಕೊಳ್ಳಬೇಕಿದೆ ಎಂದು ಡಾ. ಜಿ.ಎಂ. ಹೆಗಡೆ ಆಶಿಸಿದರು.
ಸರ್ಕಾರ ಪುಸ್ತಕ ಖರೀದಿಸಲಿ: ನಾಡಿನಲ್ಲಿ ಕನ್ನಡದ ಸೃಜನಶೀಲ ಮನಸ್ಸುಗಳು ತೆರೆದುಕೊಂಡಿವೆ. ಪುಸ್ತಕಗಳನ್ನು ಓದುವವರ ಸಂಖ್ಯೆಯೂ ವೃದ್ಧಿಸುತ್ತಿದೆ. ಆದರೆ, ಸರ್ಕಾರ 4 ವರ್ಷದಿಂದ ಪುಸ್ತಕಗಳನ್ನು ಖರೀದಿಸುತ್ತಿಲ್ಲ. ಪತ್ರಿಕೆಗಳು ಮಾಡುತ್ತಿರುವ ಕೆಲಸವನ್ನು ಸರ್ಕಾರ ಮಾಡದಿದ್ದರೆ ಹೇಗೆ? ಕನ್ನಡದ ಕೃತಿಗಳ ಖರೀದಿಗೆ ಕನಿಷ್ಠ 10 ಕೋಟಿ ರೂ. ಅನುದಾನ ನಿಗದಿಪಡಿಸಬೇಕು. ಗ್ರಂಥಾಲಯ ಕರದ ಬಾಕಿ ಹಣ ಬಳಸಿಕೊಂಡು ಪುಸ್ತಕ ಖರೀದಿಗೆ ವಿನಿಯೋಗಿಸಬೇಕು. ಸರ್ಕಾರವು ಕನ್ನಡ ಭಾಷೆಯನ್ನು ಬೆಂಬಲಿಸಬೇಕು. ಸಾಹಿತ್ಯ ಬೆಳೆಸಲು, ಕನ್ನಡ ಶಾಲೆಗಳನ್ನು ಸದೃಢಗೊಳಿಸಿ, ಶಿಕ್ಷಕರ ನೇಮಕಾತಿ ಹಾಗೂ ಹೊರನಾಡಿನಲ್ಲಿ ಕನ್ನಡ ಅಧ್ಯಯನ ಪೀಠ ಆರಂಭಿಸಬೇಕು ಎಂದು ಹೆಗಡೆ ಹೇಳಿದರು.
ವಿಜಯವಾಣಿಯಿಂದ ಕನ್ನಡಕ್ಕೆ ಕೊಡುಗೆ: ವಿಜಯವಾಣಿಯ ಮೊದಲ ಸಂಚಿಕೆ ಬಿಡುಗಡೆ ವೇಳೆ ಹಾಜರಿದ್ದು ಶುಭ ಹಾರೈಸಿದ್ದೆ. ಈಗ ದೀಪಾವಳಿ ಕಥಾ ಸ್ಪರ್ಧೆಯ ವಿಜೇತರಿಗೆ ಬಹುಮಾನ ನೀಡಲು ಬಂದಿರುವುದು ಇನ್ನಷ್ಟು ಖುಷಿಯ ವಿಚಾರ. ನಾಡಿನ ಸಾಹಿತ್ಯ, ಸಂಸ್ಕೃತಿ ಸಂವರ್ಧನೆ, ಸಂರಕ್ಷಣೆಗೆ ಎಲ್ಲ ಕನ್ನಡಿಗರ ಕರ್ತವ್ಯದಂತೆ ಭಾಷಾ ಬೆಳವಣಿಗೆಯಲ್ಲಿ ತೊಡಗಿಸಿಕೊಂಡು ಅಪೂರ್ವ ದಾಖಲೆ ಸ್ಥಾಪಿಸಿರುವ ವಿಜಯವಾಣಿ ಕನ್ನಡಕ್ಕೆ ಸಾಕಷ್ಟು ಕೊಡುಗೆ ನೀಡಿದೆ. ಇದಕ್ಕಾಗಿ ಸಂಪಾದಕೀಯ ಬಳಗಕ್ಕೆ ಅಭಿನಂದನೆ ಸಲ್ಲಿಸುವೆ. ಹಳ್ಳಿಯಲ್ಲಿ ಹುಟ್ಟಿದ ವ್ಯಕ್ತಿ ಇಷ್ಟೊಂದು ಜನರ ಅಭಿಮಾನ ಗಳಿಸಿದ್ದಕ್ಕೆ ನನ್ನಲ್ಲಿ ಸಾರ್ಥಕತೆ ಇದೆ. ಮಂಡ್ಯದ ಸಾಹಿತ್ಯ ಸಮ್ಮೇಳನದ ಅಧ್ಯಕ್ಷನಾಗಿ ಆಯ್ಕೆ ಮಾಡಿರುವುದಕ್ಕೆ ಧನ್ಯವಾದ ಅರ್ಪಿಸುವೆ ಎಂದು ಗೊ.ರು. ಚನ್ನಬಸಪ್ಪ ಹೇಳಿದರು.
ದೀಪಾವಳಿ ಕಥಾ ಸ್ಪರ್ಧೆಗೆ ಸಾಹಿತ್ಯ ಲೋಕದಿಂದ ವ್ಯಾಪಕ ಸ್ಪಂದನೆ ಸಿಗುತ್ತಿದೆ. ಈ ಬಾರಿ ಹಿರಿಯ ಲೇಖಕರು, ಕಥೆಗಾರರು ಸೇರಿ 3,800ಕ್ಕೂ ಹೆಚ್ಚು ಮಂದಿ ಕಥೆಗಳನ್ನು ಕಳುಹಿಸಿದ್ದರು. ಇವುಗಳನ್ನು ವಿವಿಧ ಕೋನಗಳಿಂದ ಪರಾಮಶಿಸಿ ತೀರ್ಪಗಾರರು ವಿಜೇತರನ್ನು ಆಯ್ಕೆ ಮಾಡಿದ್ದಾರೆ. ಎಲ್ಲ ಪುರಸ್ಕೃತ ಕಥೆಗಾರರಿಗೆ ಅಭಿನಂದನೆಗಳು.
| ಕೆ.ಎನ್. ಚನ್ನೇಗೌಡ ಸಂಪಾದಕ
ಕಥಾ ಸ್ಪರ್ಧೆ ಬಹುಮಾನವನ್ನು ಹಿರಿಯ ಸಾಹಿತಿ ಗೊರುಚ ಕೈಯಿಂದ ಕೊಡಿಸಿದ್ದು, ನಮ್ಮಂತಹ ಸಣ್ಣ ಕಥೆಗಾರರಿಗೆ ಸಂದ ದೊಡ್ಡ ಗೌರವ. ಇದು ನನ್ನ ಬದುಕಿನ ಸಾರ್ಥಕ ಕ್ಷಣಗಳಲ್ಲಿ ಒಂದಾಗಿದೆ. ಅದಕ್ಕಾಗಿ ವಿಜಯವಾಣಿ ಬಳಗಕ್ಕೆ ಧನ್ಯವಾದ ಅರ್ಪಿಸುವೆ. ಸಾಮಾನ್ಯ ರೈತ ಮಹಿಳೆ ಆಗಿರುವ ನನಗೆ ನಾನೂ ಬರೆಯಬಹುದು, ಓದುಗರನ್ನು ಸಮರ್ಥವಾಗಿ ತಲುಪಬಹುದೆಂಬ ನಿರೀಕ್ಷೆ ಮೂಡಿಸಿದ್ದೇ ಪತ್ರಿಕೆಗಳು. ಗಡಿ ಜಿಲ್ಲೆ ಚಾಮರಾಜನಗರದಲ್ಲಿರುವ ನನ್ನನ್ನು ಇಡೀ ರಾಜ್ಯಕ್ಕೆ ಪರಿಚಯಿಸಿದ್ದು ವಿಜಯವಾಣಿ. ಬಹು ಮಾನವು ನನ್ನ ಸಾಮಾಜಿಕ ಜವಾಬ್ದಾರಿ ಹೆಚ್ಚಿಸಿದೆ. ಮತ್ತಷ್ಟು ಬರೆಯಬಲ್ಲೆ ಎಂಬ ಧೈರ್ಯ ವೃದ್ಧಿಸಿದೆ.
| ಶೀಲಾ ಸತ್ಯೇಂದ್ರಸ್ವಾಮಿ ಪ್ರಥಮ ಬಹುಮಾನ ವಿಜೇತೆ
ಕಳೆದ 25 ವರ್ಷದಿಂದ ಕಥೆ ಬರೆಯುತ್ತಿದ್ದೇನೆ. ಈವರೆಗೂ 80ಕ್ಕೂ ಅಧಿಕ ಕಥೆಗಳು ಪ್ರಕಟವಾಗಿವೆ. ಈ ಕಥಾ ಸ್ಪರ್ಧೆಯಲ್ಲಿ ನನ್ನ ಕಥೆಗೆ ಬಹುಮಾನ ದೊರೆತಿರುವುದು ಬರವಣಿಗೆಗೆ ಇನ್ನಷ್ಟು ಪ್ರೇರಣೆ ಒದಗಿಸಿದೆ. ಇದಕ್ಕಾಗಿ ವಿಜಯವಾಣಿ ಪತ್ರಿಕೆಗೆ ಧನ್ಯವಾದ ಅರ್ಪಿಸುತ್ತೇನೆ.
| ಕೆ. ಶ್ರೀನಿಧಿ ದ್ವಿತೀಯ ಬಹುಮಾನ ವಿಜೇತ
ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವವರು ಅವರದ್ದೇ ಕೆಲಸದಲ್ಲಿ ಹುದುಗಿ ಹೋಗಿರುತ್ತಾರೆ. ಇಂತಹ ಸಂದರ್ಭದಲ್ಲಿ ಎಲ್ಲೋ ಮೂಲೆಯಲ್ಲಿ ಕುಳಿತಿರುವ ಪ್ರತಿಭೆಯನ್ನು ಹೆಕ್ಕಿ ತೆಗೆಯುವ ಕೆಲಸ ವಿಜಯವಾಣಿ ಪತ್ರಿಕೆ ಮಾಡಿದೆ. ಈ ಕಥಾ ಸ್ಪರ್ಧೆ ಮೂಲಕ ಎಲ್ಲೋ ಇದ್ದ ನಮ್ಮನ್ನು ಗುರುತಿಸಿ ಬೆಳಕಿಗೆ ತಂದಿದೆ.
| ವಿನಾಯಕ ಅರಳಸುರಳಿ ತೃತೀಯ ಬಹುಮಾನ ವಿಜೇತ
ಪ್ರಸ್ತುತ ಸಾಹಿತ್ಯ ಚಳವಳಿ ಇಲ್ಲವಾಗಿದೆ. ಇದರ ಜಾಗದಲ್ಲಿ ಶುದ್ಧ ವಾಸ್ತವಿಕತೆ ಮಾತ್ರ ಉಳಿದಿದೆ. ಕಾದಂಬರಿಕಾರರು ಕೊನೆಗೊಳ್ಳುತ್ತಿದ್ದಾರೆಯೇ ಎಂಬ ಆತಂಕದ ಮಧ್ಯೆ ಕಥಾಸ್ಪರ್ಧೆ ಮೂಲಕ ಸೃಜನಶೀಲ ಲೇಖಕರು ಬೆಳಕಿಗೆ ಬರುವಂತಾಗಿದೆ. ಹೊಸಬರು ತಮ್ಮ ಭಾವನೆಗಳನ್ನು ಕಥೆಗಳ ಮೂಲಕ ಓದುಗರಿಗೆ ದಾಟಿಸಿದ್ದಾರೆ. ಇಂತಹ ಕಥೆಗಾರರನ್ನು ಪ್ರೋತ್ಸಾಹಿಸುತ್ತಿರುವ ವಿಜಯವಾಣಿ ಅಭಿನಂದನಾರ್ಹ.
| ಎಂ.ಎ.ಸುಬ್ರಹ್ಮಣ್ಯ ಸಾಹಿತ್ಯ ಪ್ರಕಾಶನದ ಮುಖ್ಯಸ್ಥರು