ರಾಜ್ಯೋತ್ಸವ ಮಾಸದಲ್ಲಿ ಕನ್ನಡದಲ್ಲಿ ಮಿಂದೇಳಿ, ವಿಜಯವಾಣಿ ‘ನಾನು ಕನ್ನಡಿಗ’ ಅಭಿಯಾನ

vijayavani kannada
Published on

| ರಮೇಶ ದೊಡ್ಡಪುರ, ಬೆಂಗಳೂರು

ನವೆಂಬರ್ ಬಂತೆಂದರೆ, ಪ್ರತಿವರ್ಷ ಕೆಂಪು-ಹಳದಿಯಿಂದ ತುಂಬಿಕೊಂಡು ಕಾರ್ಯಕ್ರಮಗಳ ಸಂದಣಿಯಲ್ಲಿ ಕನ್ನಡ ಕಂಪು ಸವಿಯಲಾಗುತ್ತಿತ್ತು. ಈ ವರ್ಷ ಕರೊನಾ ಕಾರಣಕ್ಕೆ ಬಹಿರಂಗ ಕಾರ್ಯಕ್ರಮಗಳು ಇಲ್ಲವಾದರೂ ತಂತ್ರಜ್ಞಾನ ಬಳಸಿ ಕನ್ನಡಿಗರನ್ನು ತಲುಪಲು ‘ವಿಜಯವಾಣಿ’ ಸೇರಿ ಅಕಾಡೆಮಿ, ಸಂಘ-ಸಂಸ್ಥೆಗಳಿಂದ ಸಿದ್ಧತೆ ಮಾಡಿಕೊಳ್ಳಲಾಗಿದೆ. ಕನ್ನಡ ಪುಸ್ತಕಗಳ ಮೇಲೆ ಗರಿಷ್ಠ ರಿಯಾಯಿತಿಯೂ ಇದ್ದು, ಖರೀದಿಸಿ ಮನೆಯಲ್ಲೇ ಕುಳಿತು ಕನ್ನಡ ಸವಿ ಸವಿಯುವ ಅವಕಾಶವಿದೆ. ಈ ನಿಟ್ಟಿನ ಮಾಹಿತಿಗಳು ಓದುಗರಿಗಾಗಿ ಇಲ್ಲಿ ಲಭ್ಯವಿವೆ.

ಸಾಹಿತ್ಯ ಅಕಾಡೆಮಿಯಿಂದ ಕಾವ್ಯೋತ್ಸವ: ಕರೊನಾ ಸಮಯದಲ್ಲಿ ಈಗಾಗಲೆ ಆನ್​ಲೈನ್ ಮೂಲಕ ಸಂವಾದ ಏರ್ಪಡಿಸುತ್ತಿರುವ ಕರ್ನಾಟಕ ಸಾಹಿತ್ಯ ಅಕಾಡೆಮಿ ‘ಕನ್ನಡ ಕಾವ್ಯೋತ್ಸವ’ ಹೆಸರಿನಲ್ಲಿ 30 ದಿನ 30 ಉಪನ್ಯಾಸ ಏರ್ಪಡಿಸಿದೆ. ಪ್ರತಿದಿನ ಸಂಜೆ 5ರಿಂದ 6ರವರೆಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಫೇಸ್​ಬುಕ್ ಹಾಗೂ ಯೂಟ್ಯೂಬ್ ಖಾತೆಗಳಲ್ಲಿ ಉಪನ್ಯಾಸ ಮಾಲೆ ನಡೆಯಲಿದೆ. ಡಾ.ಪಿ.ವಿ.ನಾರಾಯಣ, ಪ್ರೊ.ಬಸವರಾಜ ಕಲ್ಗುಡಿ, ಡಾ.ಚಂದ್ರಶೇಖರ ನಂಗಲಿ, ಪ್ರೊ.ಕೃಷ್ಣಮೂರ್ತಿ ಹನೂರು, ಡಾ.ಎಚ್.ಎಸ್.ವೆಂಕಟೇಶಮೂರ್ತಿ ಸೇರಿ 30 ಸಾಹಿತಿಗಳು ಉಪನ್ಯಾಸ ನಡೆಸಿಕೊಡಲಿದ್ದಾರೆ ಎಂದು ಅಕಾಡೆಮಿ ಅಧ್ಯಕ್ಷ ಡಾ.ಬಿ.ವಿ.ವಸಂತಕುಮಾರ್ ತಿಳಿಸಿದ್ದಾರೆ.

ಕನ್ನಡ ಪುಸ್ತಕ ಪರಿಚಯ: ಪ್ರತಿ ವರ್ಷ ರಾಜ್ಯದಲ್ಲಿ 5 ಸಾವಿರಕ್ಕೂ ಹೆಚ್ಚು ಕನ್ನಡ ಪುಸ್ತಕಗಳು ಪ್ರಕಟವಾಗುತ್ತವಾದರೂ ಓದುಗರಿಗೆ ಅವುಗಳ ಅರಿವಿರುವುದಿಲ್ಲ. ಈ ಪೈಕಿ ಉತ್ತಮ ಕೃತಿಗಳನ್ನು ಕಡಿಮೆ ಸಮಯದಲ್ಲಿ, ಸರಳವಾಗಿ ವಿಡಿಯೋಗಳ ಮೂಲಕ ಪರಿಚಯಿಸುವ ಕಾರ್ಯವನ್ನು ಬೆಂಗಳೂರಿನ ‘ಸುಕೃತಿ’ ತಂಡ ನಡೆಸುತ್ತಿದೆ. ನವೆಂಬರ್ ಪೂರ್ತಿ ಪ್ರತಿದಿನ 2-3ರಂತೆ ಕನ್ನಡದ ಉತ್ತಮ ಕೃತಿಗಳ ಪರಿಚಯ ಮಾಡಿಕೊಡಲಾಗುತ್ತದೆ. ಓದುಗರು ತಮಗೆ ಆಸಕ್ತಿದಾಯಕ ಕೃತಿಗಳನ್ನು ಓದಲು ಪ್ರೇರಣೆಯಾಗಲಿ ಎಂಬುದು ಉದ್ದೇಶ.Sukruthi-Pustaka Parichaya ಫೇಸ್​ಬುಕ್ ಹಾಗೂ ಯೂಟ್ಯೂಬ್ ಖಾತೆ ಮೂಲಕ ಪ್ರಸಾರ ಮಾಡಲಾಗುತ್ತದೆ ಎಂದು ಸುಕೃತಿ ತಂಡದ ನ.ಗೋ.ಪ್ರಮೋದ್ ತಿಳಿಸಿದ್ದಾರೆ.

ವಿಜಯವಾಣಿ ನಾನು ಕನ್ನಡಿಗ

ಮನೆಯಲ್ಲೇ ಕುಳಿತು ಕನ್ನಡಾಭಿಮಾನದ ಹಾಗೂ ನೆನಪುಗಳ ಬುತ್ತಿ ಬಿಚ್ಚಿಡುವ ಅವಕಾಶವೊಂದನ್ನು ಕನ್ನಡದ ನಂ.1 ದಿನಪತ್ರಿಕೆ ‘ವಿಜಯವಾಣಿ’ ಒದಗಿಸುತ್ತಿದೆ.

ಯಾವುದೇ ಪ್ರಸಂಗ, ಕಥೆ, ಕವಿತೆ, ಹಳೆಯ ನೆನಪುಗಳು, ಸೆಲ್ಪಿ ಫೋಟೊ, ವಿಡಿಯೋಗಳ ಮೂಲಕ ವಿಜಯವಾಣಿ ಜತೆ ರಾಜ್ಯೋತ್ಸವ ಆಚರಿಸಲು ‘ನಾನು ಕನ್ನಡಿಗ’ ಅಭಿಯಾನ ನಡೆಸುತ್ತಿದೆ. ಇಡೀ ತಿಂಗಳು ಕನ್ನಡಿಗರು ತಮ್ಮೆಲ್ಲ ಅನುಭವಗಳನ್ನು ಹಂಚಿಕೊಂಡು ಕನ್ನಡ ಮಾಸವನ್ನು ಹಬ್ಬದಂತೆ ಆಚರಿಸಲು ವಿಜಯವಾಣಿ ವೆಬ್​ಸೈಟ್ ಹಾಗೂ ಫೇಸ್​ಬುಕ್ ಪುಟಗಳಲ್ಲಿ ಅವಕಾಶ ನೀಡಲಿದೆ. ಹೆಚ್ಚಿನ ವಿವರಗಳಿಗೆ vijayavani.net ನೋಡಬಹುದು.

ರಿಯಾಯಿತಿ ದರದಲ್ಲಿ ಪುಸ್ತಕಗಳು

ಕನ್ನಡ ಸಾಹಿತ್ಯ ಪರಿಷತ್ತು ತನ್ನೆಲ್ಲ ಪ್ರಕಟಣೆಗಳ ಮೇಲೆ ಶೇ.10ರಿಂದ ಶೇ.75ರವರೆಗೆ ರಿಯಾಯಿತಿ ನೀಡುತ್ತಿದೆ. ತಿಂಗಳ 30 ದಿನಗಳೂ (ಸರ್ಕಾರಿ ರಜಾದಿನ ಸೇರಿ) ಕಸಾಪ ಪುಸ್ತಕ ಮಳಿಗೆಯಲ್ಲಿ ಬೆಳಗ್ಗೆ 10ರಿಂದ ಸಂಜೆ 6ರವರೆಗೆ ಮಾರಾಟ ನಡೆಯುತ್ತದೆ ಎಂದು ಕಸಾಪ ಅಧ್ಯಕ್ಷ ಡಾ. ಮನು ಬಳಿಗಾರ್ ತಿಳಿಸಿದ್ದಾರೆ. ಕುವೆಂಪು ಭಾಷಾ ಭಾರತಿ ಪ್ರಾಧಿಕಾರವು ತನ್ನೆಲ್ಲ ಪ್ರಕಟಣೆಗಳ ಮೇಲೆ ಶೇ.50 ರಿಯಾಯಿತಿ ನೀಡುತ್ತಿದೆ. ಕಲಾಗ್ರಾಮದಲ್ಲಿರುವ ಕಚೇರಿ, ರವೀಂದ್ರ ಕಲಾಕ್ಷೇತ್ರ ಆವರಣದ ಸಿರಿಗನ್ನಡ ಪುಸ್ತಕ ಮಳಿಗೆ, ಜಿಲ್ಲೆಗಳ ಸಹಾಯಕ ನಿರ್ದೇಶಕರ ಕಚೇರಿಗಳ ಜತೆಗೆ http://kuvempubhashabharathi.org/books.php ವೆಬ್​ಸೈಟ್ ಮೂಲಕವೂ ಖರೀದಿ ನಡೆಸಲು ಅವಕಾಶವಿದೆ. ಹಂಪಿ ಕನ್ನಡ ವಿವಿ ಪ್ರಸಾರಾಂಗ ವಿಭಾಗವು ತನ್ನೆಲ್ಲ ಪ್ರಕಟಣೆಗಳ ಮೇಲೆ ನವೆಂಬರ್​ನಲ್ಲಿ ಶೇ.50 ರಿಯಾಯಿತಿ ನೀಡುತ್ತಿದೆ. ಹೆಚ್ಚಿನ ಮಾಹಿತಿಗೆ 9449630606, 9449262647 ಸಂಪರ್ಕಿಸಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net