

ಆರ್ಥಿಕ ಹಿಂಜರಿತದ ಪರಿಣಾಮ ಜೀವನಾವಶ್ಯಕ ವಸ್ತುಗಳ ಬೆಲೆ ಏರಿಕೆ ಆಗುತ್ತಿದೆ. ಇದು ಜನಸಾಮಾನ್ಯರ ಜೀವನದ ಮೇಲೂ ವ್ಯತಿರಿಕ್ತ ಪರಿಣಾಮ ಬೀರಿದೆ. ಹಲವು ವಲಯಗಳು ಕಂಗೆಟ್ಟಿವೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ತೆರಿಗೆ ಸಂಗ್ರಹ ಪ್ರಮಾಣ ಇಳಿಕೆ ಆಗಿದೆ. ಇದೆಲ್ಲದರ ಮಧ್ಯೆ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ದರ ದಿಢೀರನೆ ಕುಸಿದ ಪರಿಣಾಮ ಪೆಟ್ರೋಲ್, ಡೀಸೆಲ್ ಬೆಲೆ ಕೊಂಚ ಇಳಿಕೆಯಾಗಿದೆ. ಆದರೆ, ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಲೀಟರ್ಗೆ ಮೂರು ರೂಪಾಯಿ ಏರಿಕೆ ಮಾಡಿದೆ. ತೆರಿಗೆ ಆದಾಯ ವೃದ್ಧಿಸಲು ಸರ್ಕಾರ ಈ ಕ್ರಮ ಕೈಗೊಂಡಿದೆ. ಇದರಿಂದ 39 ಸಾವಿರ ಕೋಟಿ ರೂಪಾಯಿ ಸಂಗ್ರಹಗೊಳ್ಳುವ ನಿರೀಕ್ಷೆ ಇದೆ.
ಅಬಕಾರಿ ಸುಂಕದ ಹೆಚ್ಚಳದಿಂದ ಗ್ರಾಹಕರ ಮೇಲೆ ಯಾವುದೇ ಹೊರೆ ಬೀಳುವುದಿಲ್ಲ ಎಂಬುದು ಸಮಾಧಾನದ ಸಂಗತಿ. ಆದರೆ, ಕಚ್ಚಾತೈಲದ ಬೆಲೆ ಏರಿಕೆ ಆದಾಗ ಪೆಟ್ರೋಲ್, ಡೀಸೆಲ್ ಬೆಲೆಯನ್ನು ತಕ್ಷಣವೇ ಹೆಚ್ಚಿಸಿ, ಆ ಹೊರೆಯನ್ನು ಜನರಿಗೆ ವರ್ಗಾಯಿಸುವುದು ಮಾಮೂಲಿಯಾಗಿ ನಡೆದು ಬಂದಿದೆ. ಹೀಗಿರುವಾಗ, ಅಪರೂಪಕ್ಕೆ ಎಂಬಂತೆ ದರ ಕುಸಿದಿರುವಾಗ ಪೆಟ್ರೋಲ್, ಡೀಸೆಲ್ನ ಬೆಲೆಯನ್ನು ತಗ್ಗಿಸಿ ಅದರ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸಬೇಕಿತ್ತು ಎಂಬ ಅಭಿಪ್ರಾಯಗಳು ವ್ಯಾಪಕ ಪ್ರಮಾಣದಲ್ಲಿ ಕೇಳಿಬಂದಿವೆ. ಬೆಲೆಏರಿಕೆಯಾದಾಗ ಅನಿವಾರ್ಯವಾಗಿ ಜನರ ಜೇಬಿನ ಮೇಲೆ ಭಾರ ಬೀಳುತ್ತದೆ. ಇಂಥ ಸಂದರ್ಭದಲ್ಲಿ ಜನರಿಗೆ ಕೊಂಚ ನಿರಾಳತೆ ಒದಗಿಸಬಹುದಾಗಿತ್ತು. ಆದರೆ, ಕೇಂದ್ರ ಸರ್ಕಾರದ ಸದ್ಯದ ಪರಿಸ್ಥಿತಿ ಇದಕ್ಕೆ ತದ್ವಿರುದ್ಧವಾಗಿದೆ. ಈ ಬಾರಿ ಜಿಎಸ್ಟಿ ಸಂಗ್ರಹ ಸೇರಿ, ಇತರೆ ತೆರಿಗೆಗಳ ಸಂಗ್ರಹವೂ ಕುಸಿದಿರುವುದರಿಂದ ಸಂಪನ್ಮೂಲ ಕ್ರೋಡೀಕರಣಕ್ಕೆ ಹೊಸ ದಾರಿಗಳನ್ನು ಶೋಧಿಸುತ್ತಿದೆ ಎಂಬುದು ಗೊತ್ತಿರುವಂಥದ್ದೇ.
ಅಬಕಾರಿ ಸುಂಕದ ಅಲ್ಪಹೆಚ್ಚಳದಿಂದ, ಒಂದಿಷ್ಟಾದರೂ ಆದಾಯ ಕಂಡುಕೊಳ್ಳಬಹುದು ಎಂಬ ನಿರೀಕ್ಷೆ. ಅಲ್ಲದೆ, ಕಚ್ಚಾತೈಲ ದರದಲ್ಲಿ ಇಳಿಕೆ ಆಗಿದ್ದರೂ ಅದನ್ನು ಸಂಸ್ಕರಿಸಿ, ಮಾರುಕಟ್ಟೆಗೆ ತರುವ ಹೊತ್ತಿಗೆ ಉತ್ಪಾದನಾ ವೆಚ್ಚ ಹೆಚ್ಚಿರುತ್ತದೆ. ಹಾಗಾಗಿ, ಸರ್ಕಾರಕ್ಕೆ ಹೆಚ್ಚಿನ ಲಾಭವೇನೂ ಇಲ್ಲ ಎಂಬುದು ಕ್ಷೇತ್ರತಜ್ಞರ ಅಭಿಮತ. ಅಷ್ಟಕ್ಕೂ, ಕಚ್ಚಾತೈಲ ದರ ಕುಸಿದಿರುವುದು ಕರೊನಾ ಸಂಬಂಧಿತ ಬೆಳವಣಿಗೆಗಳ ಪರಿಣಾಮದಿಂದ. ಹಾಗಾಗಿ, ಮತ್ತೆ ಕೆಲವು ದಿನಗಳಲ್ಲಿ ಕಚ್ಚಾತೈಲ ದರ ಏರುಮುಖವಾದರೂ ಆಶ್ಚರ್ಯವಿಲ್ಲ.
ಹಲವು ರಾಜ್ಯಗಳಲ್ಲಿ ಪ್ರಸಕ್ತ ಪೆಟ್ರೋಲ್, ಡೀಸೆಲ್ನ ಬೆಲೆ ಭಿನ್ನಪ್ರಕಾರವಾಗಿದೆ. ರಾಜ್ಯ ಸರ್ಕಾರಗಳು ಕೂಡ ತೆರಿಗೆ ಆದಾಯ ಸಂಗ್ರಹಿಸಲು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ವ್ಯಾಟ್ ಹೆಚ್ಚಿಸಿವೆ. ಈ ನಡುವೆ, ಪೆಟ್ರೋಲ್ ಮತ್ತು ಡೀಸೆಲ್ ಅನ್ನು ಜಿಎಸ್ಟಿ ವ್ಯಾಪ್ತಿಗೆ ತರಬೇಕು ಎಂಬ ಕೂಗು ಮತ್ತೆ ಜೋರಾಗುತ್ತಿದೆ. ಸರ್ಕಾರದ ಅನಿವಾರ್ಯತೆಗಳು, ಆರ್ಥಿಕ ಸಂದಿಗ್ಧತೆಗಳು ಕಣ್ಣಿಗೆ ಕಾಣುವಂಥಧ್ದೇ. ಆದರೆ, ಕಚ್ಚಾತೈಲ ದರಇಳಿಕೆಯ ಲಾಭವನ್ನು ಶ್ರೀಸಾಮಾನ್ಯರಿಗೆ ಒದಗಿಸಿದರೆ ಅವರಿಗೂ ಅನುಕೂಲ. ಈ ನಿಟ್ಟಿನಲ್ಲಿ ಸಂಬಂಧಪಟ್ಟವರು ಚಿಂತನೆ ನಡೆಸಲಿ.