

ರಾಷ್ಟ್ರನಿರ್ವಣದಲ್ಲಿ ಶಿಕ್ಷಕರ ಕೊಡುಗೆ ಅಮೂಲ್ಯವಾದುದು ಎಂಬುದು ಹೇಳಿಕೆ ಮಾತ್ರವಲ್ಲ, ಅಕ್ಷರಶಃ ನಿಜ ಕೂಡ. ಏಕೆಂದರೆ, ಮಕ್ಕಳನ್ನು ಉತ್ತಮ ಪ್ರಜೆಗಳನ್ನಾಗಿ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಮುಖ್ಯವಾದುದು. ಶಾಲಾಹಂತದಲ್ಲಿ ಸರಿಯಾದ ಶಿಕ್ಷಣ ದೊರೆಯದಿದ್ದರೆ ಭವಿಷ್ಯದಲ್ಲಿ ಉತ್ತಮ ನಾಗರಿಕರನ್ನು ಕಾಣುವುದು ಕಷ್ಟವೇ ಸರಿ. ಹೀಗಾಗಿಯೇ ನಮ್ಮ ಪರಂಪರೆಯಲ್ಲಿ ಬಹಳ ಹಿಂದಿನಿಂದಲೂ ಗುರು ಅಥವಾ ಶಿಕ್ಷಕನಿಗೆ ಪೂಜ್ಯಸ್ಥಾನವನ್ನು ನೀಡಿರುವುದು. ಮನೆ ಮೊದಲ ಪಾಠಶಾಲೆಯಾದರೆ, ನಂತರದ ಹಂತದಲ್ಲಿ ಮಕ್ಕಳನ್ನು ತಿದ್ದಿತೀಡುವುದು ಶಾಲೆಯೇ. ಅದರಲ್ಲೂ, ಈ ಆಧುನಿಕ ಕಾಲದಲ್ಲಿ, ತಂತ್ರಜ್ಞಾನ ಅಗಾಧವಾಗಿ ಬೆಳೆದಿರುವಾಗ, ಸಾಮಾಜಿಕ ವಾತಾವರಣ ಬದಲಾಗಿರುವಾಗ, ವಿವಿಧ ಮಾಧ್ಯಮಗಳ ಮೂಲಕ ಜಾಗತಿಕ ಮಾಹಿತಿಯ ಭರಪೂರ ಮಾಹಿತಿ ಪ್ರವಾಹದಿಂದಾಗಿ ಬೇರೆ ಬೇರೆ ಪ್ರಭಾವಗಳು ಮಕ್ಕಳನ್ನು ಆವರಿಸುತ್ತಿರುವಾಗ, ಮಕ್ಕಳಿಗೆ ಸರಿತಪ್ಪಿನ ದಾರಿತೋರುವಲ್ಲಿ ಶಿಕ್ಷಕರ ಹೊಣೆಗಾರಿಕೆ ಮತ್ತಷ್ಟು ಹೆಚ್ಚಿದೆ. ‘ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೆ’ ಎಂಬ ಮಾತಿನಂತೆ, ಮಣ್ಣಿನ ಮುದ್ದೆಗಳಂತಿರುವ ಮಕ್ಕಳ ವ್ಯಕ್ತಿತ್ವಕ್ಕೆ ಸರಿಯಾದ ರೂಪಾಕಾರ ಕೊಡುವುದು ಶಿಕಕ್ಷರ ಕೈಲಿದೆ. ಕೇಂದ್ರ ಸರ್ಕಾರ ಈಚೆಗೆ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಘೋಷಿಸಿದ್ದು, ಈವರೆಗಿನ ಕಲಿಕಾಕ್ರಮಕ್ಕೆ ಹೊರತಾದ ಅನೇಕ ಹೊಸ ಅಂಶಗಳು ಇದರಲ್ಲಿವೆ. ಒಟ್ಟಾರೆ ಹೇಳುವುದಾದರೆ, ಇನ್ನು ಹತ್ತು ವರ್ಷಗಳಲ್ಲಿ ಶಿಕ್ಷಣ ರಂಗದ ಸ್ವರೂಪವೇ ಬದಲಾಗಲಿದೆ. ಕರ್ನಾಟಕದಲ್ಲಿ ಈ ಕುರಿತಂತೆ ಈಗಾಗಲೇ ಒಂದಷ್ಟು ಆಲೋಚನೆಗಾಗಿದ್ದು, ಹಂತಹಂತವಾಗಿ ಶಿಕ್ಷಣ ನೀತಿ ಜಾರಿಗೆ ಸಿದ್ಧತೆಗಳು ನಡೆಯುತ್ತಿವೆ. ಪಠ್ಯಕ್ರಮ, ಕಲಿಕಾ ವಿಧಾನ, ಶಿಕ್ಷಕರ ನೇಮಕಾತಿ- ಹೀಗೆ ಎಲ್ಲ ವಿಷಯಗಳಲ್ಲಿ ಸಮಗ್ರ ಬದಲಾವಣೆ ಆಗಲಿದ್ದು, ಶಿಕ್ಷಕರು ಹೊಸ ನೀತಿಯ ಬಗ್ಗೆ ಸರಿಯಾಗಿ ಮಾಹಿತಿ ಪಡೆದು ಅದಕ್ಕ ತಕ್ಕಂತೆ ತಮ್ಮನ್ನು ಸಜ್ಜುಗೊಳಿಸಿಕೊಳ್ಳಬೇಕಿದೆ.
ಶಿಕ್ಷಕರು ಹೊಸ ಹೊಸ ಕಲಿಕೆಯ ಉತ್ಸಾಹ ತೋರುವುದಿಲ್ಲ, ವೃತ್ತಿ ಮೇಲೆ ಆಸಕ್ತಿ-ಪ್ರೀತಿಯಿಲ್ಲ... ಎಂಬಿತ್ಯಾದಿ ಆರೋಪಗಳು ಅಲ್ಲಲ್ಲಿ ಕೇಳಿಬರುತ್ತವೆಂಬುದು ನಿಜ. ಆದರೆ ಎಲ್ಲೋ ಕೆಲವರು ಮಾಡುವ ತಪ್ಪಿಗಾಗಿ ಇಡೀ ಸಮೂಹದತ್ತ ಬೊಟ್ಟುಮಾಡುವುದು ಸರಿಯಲ್ಲ. ಶಿಕ್ಷಕರು ಹೊಸ ಸವಾಲು ಎದುರಿಸಲು ಹೇಗೆ ಸಜ್ಜಾಗಬಲ್ಲರು ಎಂಬುದಕ್ಕೆ ಈಗಿನ ಕರೊನಾ ಪರಿಸ್ಥಿತಿ ಒಂದು ಉತ್ತಮ ನಿದರ್ಶನ. ಕರೊನಾ ಹರಡುವಿಕೆ ಭೀತಿಯಿಂದಾಗಿ ಇನ್ನೂ ಶಾಲೆಗಳು ತೆರೆಯದ್ದರಿಂದಾಗಿ, ಮಕ್ಕಳಿಗೆ ಕಲಿಕೆಯ ಸಮಸ್ಯೆಯಾಗದಂತೆ ಶಿಕ್ಷಕರು ಅನೇಕ ಬಗೆಯಲ್ಲಿ ಪ್ರಯತ್ನ ನಡೆಸಿದ್ದಾರೆ. ಅದೇ ರೀತಿ, ಹೊಸ ಹಾದಿ ಹುಡುಕಲು, ತಮ್ಮನ್ನು ತಾವು ಅಪ್ಡೇಟ್ ಮಾಡಿಕೊಳ್ಳಲೂ ಈ ಸಂದರ್ಭ ಶಿಕ್ಷಕರಿಗೆ ಅವಕಾಶ ಕಲ್ಪಿಸಿದೆ. ಹಾಗೇ, ಶಿಕ್ಷಕರ ಸಮಸ್ಯೆ ಪರಿಹಾರದತ್ತ ಕ್ರಮ ಕೈಗೊಳ್ಳುವ ಹೊಣೆಗಾರಿಕೆ ಸರ್ಕಾರದ ಮೇಲೆ ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಗಳ ಮೇಲೂ ಇರುವುದನ್ನು ಮರೆಯಲಾಗದು. ಕರೊನಾ ತಂದೊಡ್ಡಿರುವ ಸಂಕಷ್ಟವನ್ನು ನೀಗಿ ಹೊಸ ಬದುಕು ನಿರ್ವಿುಸುವಲ್ಲಿ ಎಲ್ಲರ ಪಾತ್ರವೂ ಇದ್ದು, ಶಿಕ್ಷಣ ರಂಗವೂ ತನ್ನ ಹೊಣೆ ನಿಭಾಯಿಸಲು ಸಜ್ಜಾಗಬೇಕಿದೆ. ಶಿಕ್ಷಕರ ದಿನಾಚರಣೆಯು ಈ ಸಂಕಲ್ಪದ ಪುನರುಚ್ಚಾರಕ್ಕೆ ವೇದಿಕೆಯಾಗಲಿ ಎಂಬುದು ಆಶಯ.