ಸಂಪಾದಕೀಯ: ಶೈಕ್ಷಣಿಕ ವರ್ಷದ ಸವಾಲು

Pu Result
Published on

ವಿದ್ಯಾರ್ಥಿಗಳು, ಪಾಲಕರು ಬಹು ನಿರೀಕ್ಷೆಯಿಂದ ಎದುರು ನೋಡುತ್ತಿದ್ದ ದ್ವಿತೀಯ ಪಿಯು ಫಲಿತಾಂಶ ಮಂಗಳವಾರ ಪ್ರಕಟವಾಗಿದ್ದು, ಕಳೆದ ಬಾರಿಗಿಂತ ಫಲಿತಾಂಶ ಕೊಂಚ ಏರಿಕೆ ಕಂಡಿದೆ. ಒಟ್ಟು ಶೇಕಡ 69.29 (ಕಳೆದ ಬಾರಿ ಶೇಕಡ 68.68) ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಪ್ರತಿ ವರ್ಷದಂತೆ ಈ ಬಾರಿಯೂ ವಿದ್ಯಾರ್ಥಿನಿಯರು ಮೇಲುಗೈ ಸಾಧಿಸಿದ್ದಾರೆ. ಉಡುಪಿ, ದಕ್ಷಿಣ ಕನ್ನಡ ಶೇ.90.71 ಫಲಿತಾಂಶದೊಂದಿಗೆ ಮೊದಲ ಸ್ಥಾನದಲ್ಲಿದ್ದರೆ, ಕೊಡಗು ಎರಡನೇ ಸ್ಥಾನ ಪಡೆದುಕೊಂಡಿದೆ. ಶೈಕ್ಷಣಿಕ ಸುಧಾರಣೆ ಮತ್ತು ಫಲಿತಾಂಶ ಉತ್ತಮಗೊಳಿಸಲು ನಡೆಸಿದ ಹಲವು ಪ್ರಯತ್ನಗಳ ಹೊರತಾಗಿಯೂ ಕಲಬುರಗಿ 29ನೇ ಸ್ಥಾನದಲ್ಲಿದೆ. ಶೇ.54.22 ಫಲಿತಾಂಶದೊಂದಿಗೆ ವಿಜಯಪುರ ಕೊನೇ ಸ್ಥಾನದಲ್ಲಿದೆ. ಮಾರ್ಚ್ 4ರಿಂದ 21ರವರೆಗೆ 6.75 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಆದರೆ, ಲಾಕ್​ಡೌನ್ ಜಾರಿ ಹಿನ್ನೆಲೆಯಲ್ಲಿ ಇಂಗ್ಲಿಷ್ ಪರೀಕ್ಷೆಯನ್ನು ಜೂನ್ 18ರಂದು ನಡೆಸಲಾಗಿತ್ತು. ಈ ಬಾರಿ ನಾಲ್ಕು ಸರ್ಕಾರಿ ಕಾಲೇಜ್ ಸೇರಿ 92 ಕಾಲೇಜುಗಳು ಶೇಕಡ 100ರಷ್ಟು ಫಲಿತಾಂಶ ಪಡೆದಿರುವುದು ಗಮನಾರ್ಹ. ಮತ್ತೊಂದೆಡೆ, 10 ಸರ್ಕಾರಿ ಕಾಲೇಜ್ ಸೇರಿ 88 ಕಾಲೇಜ್ ಶೂನ್ಯ ಫಲಿತಾಂಶ ಪಡೆದಿವೆ.

ಶೈಕ್ಷಣಿಕ ಬದುಕಿನ ಮಹತ್ವದ ಘಟ್ಟವಾದ ದ್ವಿತೀಯ ಪಿಯು ಫಲಿತಾಂಶ ಪ್ರಕಟವಾಗಿರುವುದರಿಂದ, ಮುಂದಿನ ಶೈಕ್ಷಣಿಕ ಪ್ರಕ್ರಿಯೆಗಳು ಇಷ್ಟರಲ್ಲೇ ಗರಿಗೆದರಲಿವೆ. ಕರೊನಾ ಸೋಂಕಿನ ಹಾವಳಿ ಎಲ್ಲ ವಲಯಗಳಿಗೆ ತಟ್ಟಿದ್ದರೂ ಶೈಕ್ಷಣಿಕ ವಲಯ ಮಾತ್ರ ಅಸ್ತವ್ಯಸ್ತವಾಗಿ ಹೋಗಿದೆ. ಸೋಂಕು ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇಷ್ಟರಲ್ಲೇ ಶಾಲಾ-ಕಾಲೇಜುಗಳನ್ನು ಆರಂಭಿಸುವುದು ಸಾಧ್ಯವಿಲ್ಲ. ಸೆಪ್ಟೆಂಬರ್-ಅಕ್ಟೋಬರ್ ಅವಧಿಯಲ್ಲಿ ಪುನರಾರಂಭಗೊಳ್ಳಬಹುದೇ ಎಂಬ ಪ್ರಶ್ನೆಗೆ ಖಚಿತ ಉತ್ತರ ನೀಡಲು ಸಾಧ್ಯವಾಗುತ್ತಿಲ್ಲ. ಹಾಗಾಗಿ, ತರಗತಿಗಳು ಹೇಗೆ, ಮಕ್ಕಳ ಭವಿಷ್ಯ ಹೇಗೆ ಎಂಬ ಚಿಂತೆ ಪಾಲಕರನ್ನು ಕಾಡುತ್ತಿರುವುದು ನಿಜ. ಕಾಲೇಜುಗಳು ಆರಂಭಗೊಂಡಿಲ್ಲವಾದರೂ, ಶೈಕ್ಷಣಿಕ ಚಟುವಟಿಕೆಗಳು ಸ್ತಬ್ಧಗೊಂಡಿಲ್ಲ. ಶೈಕ್ಷಣಿಕ ಸಂಸ್ಥೆಗಳು ತಂತ್ರಜ್ಞಾನದ ಹಲವು ಸಾಧ್ಯತೆಗಳನ್ನು ಬಳಸಿಕೊಂಡು ಆನ್​ಲೈನ್ ತರಗತಿ, ಪಾಠದ ಟಿಪ್ಪಣಿ ನೀಡುವುದು, ಕಿರುಪರೀಕ್ಷೆ ನಡೆಸುವುದು, ಅಸೈನ್​ವೆುಂಟ್ ನೀಡಿ, ಪರಿಶೀಲಿಸುವುದು ಹೀಗೆ ಹಲವು ಪ್ರಕ್ರಿಯೆಗಳನ್ನು ಪರಿಣಾಮಕಾರಿಯಾಗಿಯೇ ನಡೆಸುತ್ತಿವೆ. ಪದವಿ ತರಗತಿಗಳು ಬಹುತೇಕ ಆನ್​ಲೈನ್ ಬಲದ ಮೇಲೆಯೇ ನಡೆಯುತ್ತಿವೆ. ಆದರೆ, ಇವು ತರಗತಿಯಲ್ಲಿನ ಕಲಿಕೆಯಂತೆ ಆಗುವುದಿಲ್ಲ ಎಂಬ ವಾಸ್ತವ ಬೋಧಕ ಸಿಬ್ಬಂದಿಗೂ, ವಿದ್ಯಾರ್ಥಿಗಳಿಗೂ ಗೊತ್ತಿದೆ. ಅಲ್ಲದೆ, ಹಲವೆಡೆ ಈ ಹೊಸ ವ್ಯವಸ್ಥೆಗೆ ಹೊಂದಿಕೊಳ್ಳಲು ಹಲವು ಅಡ್ಡಿಆತಂಕಗಳು ಎದುರಾಗಿವೆ. ಈಗ ದ್ವಿತೀಯ ಪಿಯು ಉತ್ತೀರ್ಣವಾಗಿ ವಿವಿಧ ಪದವಿಗಳಿಗೆ ಪ್ರವೇಶ ಪಡೆಯುವ ವಿದ್ಯಾರ್ಥಿಗಳ ಎದುರು ಇಂಥ ಸವಾಲುಗಳು ಇರುವುದು ನಿಜ. ಹಾಗಂತ ಧೃತಿಗೆಡಬೇಕಿಲ್ಲ. ಪರಿಹಾರದ ಹಾದಿಗಳು ಇವೆ. ಸರ್ಕಾರ, ಶೈಕ್ಷಣಿಕ ಸಂಸ್ಥೆಗಳು, ಪಾಲಕರು, ವಿದ್ಯಾರ್ಥಿಗಳು ಹೀಗೆ ಎಲ್ಲರೂ ಒಟ್ಟಾಗಿ ಉತ್ತರ ಕಂಡುಕೊಳ್ಳಲು ಯತ್ನಿಸಬೇಕಿದೆ. ಶೈಕ್ಷಣಿಕ ವರ್ಷ ಸುಗಮವಾಗಿ, ವಿದ್ಯಾರ್ಥಿಗಳ ಕಲಿಕೆಗೆ ಪೂರಕವಾಗಿ ನಡೆಸುವಂಥ ಹೊಣೆ ಸರ್ಕಾರದ ಮುಂದೆ ಇದ್ದು, ಅದನ್ನು ಪರಿಣಾಮಕಾರಿಯಾಗಿ ನಿರ್ವಹಿಸಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net