

ಕಳೆದ ಕೆಲ ದಿನಗಳಲ್ಲಿ ಎರಡು ಘಟನೆಗಳು ರಾಜ್ಯದ ಗಮನ ಸೆಳೆದಿವೆ. ಆರತಕ್ಷತೆ ವೇಳೆ ಕುಸಿದುಬಿದ್ದು, ಜೀವತೆತ್ತ ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲೂಕಿನ ಕೊಡಿಚೆರವು ಗ್ರಾಮದ 24 ವರ್ಷದ ಚೈತ್ರಾ ಏಳು ಜೀವಗಳಿಗೆ ಬೆಳಕಾಗಿ, ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. ಚೈತ್ರಾರ ಕಣ್ಣು, ಹೃದಯ, ಕಿಡ್ನಿಯನ್ನು ಕುಟುಂಬವರ್ಗದವರು ದಾನ ಮಾಡಿದ್ದಾರೆ. ಈ ಮಾನವೀಯ ಕಾರ್ಯವನ್ನು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಕೂಡ ಶ್ಲಾಘಿಸಿದ್ದಾರೆ.
ಬಾಳೆಹೊನ್ನೂರು ತಾಲೂಕಿನ ಎನ್.ಆರ್.ಪುರ ತಾಲೂಕಿನ 22 ವರ್ಷದ ಗಾನವಿ ಗೌಡ ವೃತ್ತಿಯಲ್ಲಿ ನರ್ಸ್. ಕರ್ತವ್ಯದಲ್ಲಿದ್ದಾಗಲೇ ಕುಸಿದು ಬಿದ್ದರು. ಚಿಕಿತ್ಸೆ ಲಕಾರಿಯಾಗದ ಪರಿಣಾಮ ಇವರ ಕುಟುಂಬವರ್ಗದವರು ಗಾನವಿಯವರ ಹೃದಯ, ಕಣ್ಣು, ಕಿಡ್ನಿ, ಲಿವರ್ಗಳನ್ನು ಆಸ್ಪತ್ರೆಗೆ ದಾನ ಮಾಡಿದ್ದಾರೆ. ಸಾವಿನ ನಂತರವೂ ಮತ್ತೊಬ್ಬರ ದೇಹದ ಮೂಲಕ ಬದುಕುವ ಸಾರ್ಥಕತೆ ಇದು. ಅಂಗಾಂಗ ವೈಲ್ಯದಿಂದ ಬಳಲುತ್ತಿರುವವರ ಪಾಲಿಗಂತೂ ಹೊಸಜೀವನವೇ. ಆದರೆ, ಅಂಗಾಂಗ ದಾನದ ಪ್ರಮಾಣ ನಮ್ಮ ರಾಜ್ಯ ಮತ್ತು ದೇಶದಲ್ಲಿ ತುಂಬ ಕಡಿಮೆ ಇದ್ದು, ಈ ನಿಟ್ಟಿನಲ್ಲಿ ಜನರಲ್ಲಿ ಸೂಕ್ತ ಅರಿವು ತುಂಬುವ, ಜಾಗೃತಿ ಮೂಡಿಸುವ ಕಾರ್ಯವಾಗಬೇಕಿದೆ.
ವಯಸ್ಸಿನ ಅಂತರವಿಲ್ಲದೆ, ಲಿಂಗಭೇದವಿಲ್ಲದೆ ಯಾರು ಬೇಕಾದರೂ ಅಂಗಾಂಗ ದಾನ ಮಾಡಬಹುದು. ಆದರೆ, ಈ ಕುರಿತಂತೆ ಸ್ಪಷ್ಟ ತಿಳಿವಳಿಕೆ ಇಲ್ಲದಿರುವುದು ಅಂಗಾಂಗ ದಾನಿಗಳ ಕೊರತೆಗೆ ಕಾರಣ. ಏಮ್ಸ್ನ 2019ರ ಅಂಕಿ-ಅಂಶದ ಪ್ರಕಾರ ವಾಷಿರ್ಕವಾಗಿ 1.5 ಲಕ್ಷದಿಂದ 2 ಲಕ್ಷ ಜನರಿಗೆ ಮೂತ್ರಪಿಂಡ ಕಸಿಯ ಅಗತ್ಯವಿದೆ. ಈ ಪೈಕಿ 8 ಸಾವಿರ ಜನರಿಗೆ (ಶೇಕಡ 4) ಮಾತ್ರ ಮೂತ್ರಪಿಂಡ ಲಭ್ಯವಾಗುತ್ತಿದೆ. ಅದೇ ರೀತಿ, ಹೃದಯ ಕಸಿ ಅಗತ್ಯವಿರುವ 10 ಸಾವಿರ ರೋಗಿಗಳಲ್ಲಿ 200 ಮಂದಿಗೆ ಮಾತ್ರ ಸೂಕ್ತ ಹೊಂದಾಣಿಕೆಯಾಗಿ ದಾನ ದೊರೆಯುತ್ತಿದೆ. ದೇಶದಲ್ಲಿ ಶೇಕಡ 3 ಜನರು ಮಾತ್ರ ಅಂಗಾಂಗ ದಾನಕ್ಕೆ ನೋಂದಣಿ ಮಾಡಿಕೊಳ್ಳುತ್ತಿದ್ದಾರೆ. 2019ರಲ್ಲಿ ದೇಶದಲ್ಲಿ ಅಂಗಾಂಗ ದಾನ ಮಾಡಿದವರ ಸಂಖ್ಯೆ 12,746. ಹಿಂದಿನ ವರ್ಷಗಳಿಗೆ ಹೋಲಿಸಿದರೆ ಈ ಸಂಖ್ಯೆಯಲ್ಲಿ ಏರಿಕೆ ಕಂಡುಬಂದಿದೆಯಾದರೂ, ಈ ಪ್ರಮಾಣ ತುಂಬ ಕಡಿಮೆ ಎನ್ನುತ್ತಾರೆ ತಜ್ಞರು.
ಅಂಗಾಂಗ ದಾನದ ಪ್ರಕ್ರಿಯೆಗಳನ್ನು ಪರಿಣಾಮಕಾರಿಯಾಗಿ ಪೂರೈಸಬೇಕಷ್ಟೇ. ವ್ಯಕ್ತಿ ಮೃತಪಟ್ಟ 48 ಗಂಟೆಗಳ ಒಳಗೆ ಅಂಗಾಂಗಗಳ ಕಸಿ ಪ್ರಕ್ರಿಯೆ ಪೂರ್ಣಗೊಳ್ಳಬೇಕು. ಹೃದಯ ನಾಲ್ಕು ಗಂಟೆಯೊಳಗೆ, ಲೀವರ್ 6-12 ಗಂಟೆ, ಮೂತ್ರಪಿಂಡವನ್ನು 36ರಿಂದ 48 ಗಂಟೆಯೊಳಗೆ ಜೋಡಿಸಬೇಕು. ಅಂಗಾಂಗ ವೈಲ್ಯದಿಂದ ಬಳಲುತ್ತಿರುವವರ ನೆರವಿಗಾಗಿಯೇ ಹಲವು ಸಂ-ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆಯಾದರೂ, ಅವುಗಳಿಗೆ ಇನ್ನಷ್ಟು ಪ್ರೋತ್ಸಾಹ ಸಿಗಬೇಕಿದೆ. ಯಾವುದೇ ಕಾಯಿಲೆ ಇಲ್ಲದೆ ಯೌವನದಲ್ಲಿ ಮರಣ ಹೊಂದಿದವರ ಅಂಗಾಂಗಗಳಿಗೆ ದೇಶದಲ್ಲಿ ಭಾರಿ ಬೇಡಿಕೆ ಇದೆ. ಹೀಗಾಗಿ, ಈ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಗಳು ಆಂದೋಲನದ ರೂಪದಲ್ಲಿ ನಡೆಯಬೇಕು.