

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ರ ಭಾರತ ಭೇಟಿ ಭಾರಿ ಉತ್ಸಾಹದಿಂದಲೇ ಆರಂಭಗೊಂಡಿದೆ. ಇಲ್ಲಿ ದೊರೆತ ಅದ್ಭುತ ಸ್ವಾಗತದಿಂದ ಸ್ವಾಭಾವಿಕವಾಗಿಯೇ ಟ್ರಂಪ್ ಪುಳಕಿತರಾಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಶಿಷ್ಟಾಚಾರವನ್ನು ಬದಿಗಿರಿಸಿ ಅಹಮದಾಬಾದ್ನ ಸರ್ದಾರ್ ಪಟೇಲ್ ವಿಮಾನ ನಿಲ್ದಾಣಕ್ಕೆ ತೆರಳಿ ಟ್ರಂಪ್ರನ್ನು ಬರಮಾಡಿಕೊಂಡಿದ್ದು ಗಮನಾರ್ಹ. ಸಾಬರಮತಿ ಆಶ್ರಮಕ್ಕೆ ಭೇಟಿ ನೀಡಿದ ಬಳಿಕ ಮೊಟೆರಾ ಕ್ರೀಡಾಂಗಣದಲ್ಲಿ ಲಕ್ಷಕ್ಕೂ ಅಧಿಕ ಜನರನ್ನು ಉದ್ದೇಶಿಸಿ ಮಾತನಾಡುವಾಗ ಟ್ರಂಪ್ ಭಾರತದ ಶಕ್ತಿ, ಸಾಮರ್ಥ್ಯವನ್ನು ಮನಗಾಣಿದ್ದು ಸ್ಪಷ್ಟವಾಗಿತ್ತು. ‘ಭಾರತೀಯರು ಬದ್ಧತೆ ಉಳ್ಳವರು. ಅವರು ಮನಸು ಮಾಡಿದರೆ ಯಾವ ಸಾಧನೆಯನ್ನೂ ಮಾಡಬಹುದು. ಪ್ರಧಾನಿ ನರೇಂದ್ರ ಮೋದಿ ಸಾಧನೆ ಅದಕ್ಕೆ ನಿದರ್ಶನವಾಗಿದೆ. ಅಲ್ಲದೆ, ಮಾನವೀಯತೆ ದೃಷ್ಟಿಯಿಂದ ಪ್ರಪಂಚಕ್ಕೆ ಭಾರತ ದೊಡ್ಡ ಭರವಸೆ ಆಗಿದೆ’ ಎಂಬ ಅವರ ಮಾತು ಈ ದೇಶದ ಬಗ್ಗೆ ಟ್ರಂಪ್ಎಷ್ಟು ಉತ್ಸುಕರಾಗಿದ್ದಾರೆ ಎಂಬುದರ ನಿದರ್ಶನ.
ಮುಖ್ಯವಾಗಿ, ಉಭಯ ರಾಷ್ಟ್ರಗಳ ನಡುವಿನ ಸಂಬಂಧಗಳು ಹೇಗೆ ಇನ್ನಷ್ಟು ಎತ್ತರಕ್ಕೆ ಏರಲಿವೆ ಎಂಬುದರತ್ತ ಎಲ್ಲರ ಗಮನ ನೆಟ್ಟಿತ್ತು. ಆ ಬಗ್ಗೆಯೂ ಟ್ರಂಪ್ ಸ್ಪಷ್ಟ ಉತ್ತರವನ್ನೇ ನೀಡಿದ್ದಾರೆ. ‘ಎರಡೂ ದೇಶಗಳ ನಡುವೆ ವಾಣಿಜ್ಯ ವಹಿವಾಟು ಶೇಕಡ 40ರಷ್ಟು ಅಧಿಕಗೊಂಡಿದ್ದು, ವ್ಯಾಪಾರ ಒಪ್ಪಂದಕ್ಕೆ ಸಂಬಂಧಿಸಿ ಶೀಘ್ರದಲ್ಲೇ ಅಂತಿಮ ತೀರ್ವನಕ್ಕೆ ಬರಲಾಗುವುದು’ ಎಂಬ ಭರವಸೆ ನೀಡಿದ್ದಾರೆ. ‘ಹೆಲಿಕಾಪ್ಟರ್ ಖರೀದಿ ಸೇರಿ 3 ಶತಕೋಟಿ ಡಾಲರ್ (-ಠಿ; 25 ಸಾವಿರ ಕೋಟಿ) ಮೊತ್ತದ ರಕ್ಷಣಾ ಒಪ್ಪಂದ ಏರ್ಪಡಲಿದೆ. ಭಾರತಕ್ಕೆ ಆಧುನಿಕ ಶಸ್ತ್ರಾಸ್ತ್ರಗಳನ್ನು ಒದಗಿಸಲು ಬದ್ಧರಾಗಿದ್ದೇವೆ’ ಎಂದೂ ಸ್ಪಷ್ಟಪಡಿಸಿದ್ದಾರೆ. ‘ಟ್ರಂಪ್ ಅಮೆರಿಕ ಚುನಾವಣೆಯನ್ನು ದೃಷ್ಟಿಯಲ್ಲಿ ಇರಿಸಿಕೊಂಡು ಭಾರತ ಪ್ರವಾಸಕ್ಕೆ ಬಂದಿದ್ದಾರೆ. ಮಹತ್ವದ ಒಪ್ಪಂದಗಳೇನೂ ಏರ್ಪಡುವುದಿಲ್ಲ’ ಎಂಬ ಕೆಲ ಊಹಾಪೋಹದ ವಿಶ್ಲೇಷಣೆಗಳಿಗೆ ಈ ಮೂಲಕ ಉತ್ತರ ನೀಡಿದ್ದಾರೆ. ರಕ್ಷಣಾ ಕ್ಷೇತ್ರದಲ್ಲಿ ಅಮೆರಿಕ ಮೊದಲಿನಿಂದಲೂ ಭಾರತಕ್ಕೆ ಸಹಯೋಗ ನೀಡುತ್ತ ಬಂದಿದ್ದು, ಅದು ಮತ್ತಷ್ಟು ವೃದ್ಧಿಸಲಿದೆ ಎಂಬುದರಲ್ಲಿ ಅನುಮಾನವಿಲ್ಲ.
ಇಲ್ಲಿನ ಬಾಲಿವುಡ್, ಕ್ರೀಡಾಸಾಧಕರು, ಸಂಸ್ಕೃತಿ, ಅನಿವಾಸಿ ಭಾರತೀಯರ ಕೊಡುಗೆ ಇದೆಲ್ಲದರ ಬಗ್ಗೆಯೂ ಟ್ರಂಪ್ ಹೆಮ್ಮೆಯಿಂದ ಮಾತನಾಡಿದ್ದಾರೆ. ಎರಡು ರಾಷ್ಟ್ರಗಳ ನಡುವಿನ ಸಂಬಂಧಗಳು ಬಲಗೊಂಡು, ಹಲವು ರಂಗಗಳ ಶಕ್ತಿ ಹೆಚ್ಚಲು ಇವೆಲ್ಲ ದೊಡ್ಡ ಕೊಡುಗೆಯನ್ನೇ ನೀಡಲಿವೆ. ಭಾರತ ಮೊದಲಿನಂತಿಲ್ಲ. ಅದು ಬಲಾಢ್ಯ ರಾಷ್ಟ್ರವಾಗಿ ಬದಲಾಗಿದೆ ಮತ್ತು ಜಾಗತಿಕ ರಂಗದಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ ಎಂಬ ವಾಸ್ತವವನ್ನು ಅಮೆರಿಕ ಸಹಿತ ವಿಶ್ವದ ಹಲವಾರು ಶಕ್ತಿಶಾಲಿ ರಾಷ್ಟ್ರಗಳು ಮನಗಂಡಿವೆ. ಹಾಗಾಗಿಯೇ, ಪರಸ್ಪರ ಬಾಂಧವ್ಯವೃದ್ಧಿಗೆ ಒತ್ತು ನೀಡುತ್ತಿದ್ದು, ಇದಕ್ಕೆ ಪೂರಕ ಎಂಬಂತೆ ಭಾರತದ ವಿದೇಶಾಂಗ ನೀತಿಯೂ ಬಲಗೊಂಡಿದೆ. ಟ್ರಂಪ್ ಭೇಟಿ ಹಲವು ಪ್ರಶ್ನೆಗಳಿಗೆ ಉತ್ತರ ನೀಡುವ ಜತೆಗೆ ಎರಡೂ ರಾಷ್ಟ್ರಗಳ ನಡುವಿನ ಸ್ನೇಹ, ಸೌಹಾರ್ದವನ್ನೂ ಹೆಚ್ಚಿಸಿದೆ.