ರೈತರಿಗೆ ಭೂಮಿ: ಉತ್ತಮ ನಿರ್ಧಾರ

Editorial
Published on

ರೈತರಿಗೆ ಸಂಬಂಧಿಸಿದ ಸಮಸ್ಯೆಗಳಿಗೆ ಶೀಘ್ರ ಪರಿಹಾರ ಸಿಗುವುದೇ ಇಲ್ಲ. ಸರ್ಕಾರದ ಮಟ್ಟದಲ್ಲಿ ವಿಳಂಬವೊಂದು ಕಾರಣವಾದರೆ, ಅಧಿಕಾರಿಗಳ ಇಚ್ಛಾಶಕ್ತಿಯ ಕೊರತೆ ಪರಿಣಾಮ ಅದೆಷ್ಟೋ ಸಮಸ್ಯೆಗಳು ಹಲವು ದಶಕಗಳಾದರೂ ಇತ್ಯರ್ಥಗೊಳ್ಳುವುದಿಲ್ಲ. ರೈತರ ಸ್ವಾಧೀನದಲ್ಲಿರುವ ಸರ್ಕಾರಿ ಜಮೀನು ಅಥವಾ ಅರಣ್ಯದಂಚಿನ ಭೂಮಿಯ ಬಗೆಗಿನ ಗೊಂದಲ, ವಿವಾದವೂ ತುಂಬ ಹಳೆಯದು. ಇದನ್ನು ಇತ್ಯರ್ಥ ಪಡಿಸಿ, ರೈತರ ಗೊಂದಲ ನಿವಾರಿಸಲಾಗುವುದು ಎಂಬ ಆಶ್ವಾಸನೆ ಕಾಲಕಾಲಕ್ಕೂ ಸರ್ಕಾರ, ಅಧಿಕಾರಿಗಳಿಂದ ಹೊಮ್ಮಿದೆಯಾದರೂ, ಕಾರ್ಯರೂಪಕ್ಕೆ ಬಂದಿಲ್ಲ. ಕಡೆಗೂ, ಕೃಷಿಕರ ಇಷ್ಟು ವರ್ಷಗಳ ಕಾಯುವಿಕೆ ಅಂತ್ಯಗೊಳ್ಳುವ ಭರವಸೆ ಮೂಡಿದ್ದು, ರಾಜ್ಯ ಸರ್ಕಾರ ಮಹತ್ವದ ಮತ್ತು ನಿರ್ಣಾಯಕ ಕ್ರಮಕ್ಕೆ ಮುಂದಾಗಿರುವುದು ಸ್ವಾಗತಾರ್ಹ ಬೆಳವಣಿಗೆ.

ಕುಮ್ಮಿ, ಬಾಣೆ, ಬೆಟ್ಟ, ಹಾಡಿ, ಕಾನ್, ಸೊಪ್ಪಿನ ಬೆಟ್ಟ, ಜಮ್ಮ ಮಲೈ, ಮೇಟಸ್ಥಳ, ವರ್ಗಭೂಮಿ ಹೀಗೆ ವಿವಿಧ ಹೆಸರಲ್ಲಿ ಕರೆಯಲ್ಪಡುವ, ರೈತರ ಸ್ವಾಧೀನದಲ್ಲಿರುವ ಭೂಮಿಯನ್ನು ಅವರಿಗೆ ನೀಡಲು ಸರ್ಕಾರ ಮುಂದಾಗಿದೆ. ಕಂದಾಯ ಸಚಿವ ಆರ್. ಅಶೋಕ್ ಬುಧವಾರ ವಿಧಾನ ಪರಿಷತ್​ನಲ್ಲಿ ಹೇಳಿಕೆ ನೀಡಿ, ‘ಜಮ್ಮಾ, ಬಾಣೆ ಭೂಮಿಯನ್ನು ಶೀಘ್ರ ರೈತರಿಗೆ ನೀಡಲಾಗುವುದು’ ಎಂದಿದ್ದಾರೆ. ಈ ನಿರ್ಧಾರದಿಂದ 7-8 ಲಕ್ಷ ಹೆಕ್ಟೇರ್ ಭೂಮಿಯ ಹಕ್ಕು ಉಳುಮೆ ಮಾಡುವವರಿಗೆ ಸಿಗಲಿದೆ. ಈ ಪೈಕಿ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿಯೇ 4 ಲಕ್ಷ ಹೆಕ್ಟೇರ್ ಈ ರೀತಿಯ ಭೂಮಿ ಇದೆ.

ರಾಜ್ಯದಲ್ಲಿನ ಡೀಮ್್ಡ ಅರಣ್ಯ ಮತ್ತು ಕಂದಾಯ ಇಲಾಖೆಗಳ ಭೂಮಿಗೆ ಸಂಬಂಧಿಸಿದಂತೆ ಇರುವ ಗೊಂದಲಗಳಿಂದಾಗಿ, ಈ ಎಲ್ಲ ಭೂಮಿಗಳ ಸಮಸ್ಯೆ ಹಲವು ವರ್ಷಗಳಿಂದ ಬಗೆಹರಿದಿಲ್ಲ. ಇದಕ್ಕೆ ಈಗ ರ್ತಾಕ ಅಂತ್ಯ ನೀಡಲು ಸರ್ಕಾರ ಮುಂದಾಗಿದೆ. ಕೊಡಗಿನ ವರ್ಗ ಭೂಮಿಯನ್ನು ಹಂಚಿಕೆ ಮಾಡುವಂತೆ 2019ರಲ್ಲಿ ಸುಪ್ರೀಂ ಕೋರ್ಟ್ ಆದೇಶ ಮಾಡಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು. ನ್ಯಾಯಾಲಯದ ಈ ಆದೇಶದ ಪರಿಣಾಮ ಸರ್ಕಾರ ಉಳಿದೆಡೆ ಉಳುಮೆ ಮಾಡುತ್ತಿರುವ ರೈತರಿಗೂ ಭೂಮಿಯ ಹಕ್ಕು ನೀಡಬಹುದೆಂಬ ನಿರೀಕ್ಷೆ ಗರಿಗೆದರಿತ್ತು. ಈ ಬಗ್ಗೆ ಸರ್ಕಾರ ಆಸಕ್ತಿ ತೋರಿದರೂ, ಅಧಿಕಾರಿಗಳ ನಿರುತ್ಸಾಹದಿಂದ ಭೂಮಿ ಕಗ್ಗಂಟು ಹಾಗೆಯೇ ಉಳಿದುಕೊಂಡಿತು. ಅರಣ್ಯ ಒತ್ತುವರಿ ಮಾಡಿಕೊಂಡು, ಕಾಫಿ ತೋಟ ಮಾಡಿಕೊಂಡವರಿಗೆ ಬಾಡಿಗೆ ಆಧಾರದಲ್ಲಿ ಭೂಮಿ ನೀಡಲು ಸರ್ಕಾರ ಚಿಂತನೆ ನಡೆಸಿದೆ.

ಈ ಎಲ್ಲ ಪ್ರಕ್ರಿಯೆಗಳು ನಿಗದಿತ ಕಾಲಮಿತಿಯಲ್ಲಿ ಪೂರ್ಣಗೊಳ್ಳುವುದು ಅವಶ್ಯಕ. ಏಕೆಂದರೆ, ಹಿಂದೆ ಇಂಥ ಭರವಸೆಗಳು ನೀಡಲಾಗಿದ್ದರೂ, ಅವು ಹುಸಿಯಾಗಿ ಹೋದವು. ಮತ್ತೆ ಅದೇ ನಿರ್ಲಕ್ಷ್ಯ ಮರುಕಳಿಸಬಾರದು. ಅರಣ್ಯ ಜಮೀನು ಕೃಷಿಯ ಪಾಲಾಗದಂತೆ, ಪರಿಸರ ಸಮತೋಲನ ಕಾಪಾಡುವುದೂ ಮುಖ್ಯ. ಆದರೆ, ಉಳಿದ ಕುಮ್ಮಿ, ಬಾಣೆ ಭೂಮಿಯನ್ನು ಉಳುಮೆದಾರರಿಗೆ ನೀಡಲು ತಾಂತ್ರಿಕ ಕಾರಣಗಳು ಅಡ್ಡಿಯಾಗಬಾರದು. ಈ ಹಳೆಯ ಸಮಸ್ಯೆಗೆ ಪರಿಣಾಮಕಾರಿ ಮದ್ದರೆಯುವ ಸಮಯ ಬಂದಿದ್ದು, ವಿಳಂಬಧೋರಣೆ ತಳೆಯದೆ ಸರ್ಕಾರ ಭರವಸೆ ಈಡೇರಿಸುವಂತಾಗಲಿ.

ಆಯಾ ಪ್ರದೇಶದಲ್ಲಿ ಇಂಥ ಭೂಮಿ ಮತ್ತು ಉಳುಮೆ ಮಾಡುವವರನ್ನು ಗುರುತಿಸುವ, ಮೂಲಸೌಕರ್ಯಗಳ ಕೊರತೆ ನಿವಾರಿಸುವ ಕೆಲಸವೂ ಆಗಬೇಕಿದೆ. ಅಧಿಕಾರಿಗಳು ದಕ್ಷತೆ ಮತ್ತು ಚುರುಕಿನಿಂದ ಈ ಕಾರ್ಯದಲ್ಲಿ ತೊಡಗಿಸಿಕೊಳ್ಳುವಂತೆ ಮಾಡಬೇಕು. ಒಟ್ಟಾರೆ, ದೀರ್ಘಾವಧಿಯ ಸಮಸ್ಯೆ, ಇಕ್ಕಟ್ಟು ಪರಿಹಾರ ಕಂಡು, ರೈತರು ನಿರಾಳರಾಗಲಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net