

ಕನ್ನಡ ಅನ್ನದ ಭಾಷೆ ಆಗಬೇಕು. ಕನ್ನಡಿಗರಿಗೆ ಉದ್ಯೋಗದಲ್ಲಿ ಆದ್ಯತೆ ಸಿಗಬೇಕು ಎಂಬ ಬೇಡಿಕೆ ಹಲವು ದಶಕಗಳಿಂದಲೂ ಇದೆ. ಜಾಗತೀಕರಣದ ಪ್ರಭಾವ, ಖಾಸಗಿ ರಂಗದಲ್ಲಿ ತೀವ್ರ ಪೈಪೋಟಿ, ಕೌಶಲಯುತ ಮಾನವ ಸಂಪನ್ಮೂಲಕ್ಕೆ ಹೆಚ್ಚಿದ ಬೇಡಿಕೆ, ಸ್ಥಳೀಯರಿಗೆ ಕೆಲಸ ನೀಡಲು ಖಾಸಗಿ ರಂಗದವರ ಹಿಂದೇಟು ಹೀಗೆ ಹಲವಾರು ಕಾರಣಗಳಿಂದಾಗಿ ಸಮಸ್ಯೆ ಮತ್ತಷ್ಟು ಬಿಗಡಾಯಿಸಿತೆ ಹೊರತು ಪರಿಹಾರದ ದಾರಿ ಕಾಣಲಿಲ್ಲ. ಕರ್ನಾಟಕದಲ್ಲಿ ಅನ್ಯ ರಾಜ್ಯದವರೇ ಉದ್ಯೋಗವಲಯದಲ್ಲಿ ಪಾರಮ್ಯ ಸಾಧಿಸಿದ ಪರಿಣಾಮ, ಕನ್ನಡಿಗರು ಉದ್ಯೋಗಕ್ಕಾಗಿ ಪರದಾಡುವುದು, ಕೆಲಸ ಅರಸಿ ಇವರೂ ಬೇರೆ ರಾಜ್ಯಗಳಿಗೆ ವಲಸೆ ಹೋಗುವಂಥ ಬೆಳವಣಿಗೆಗಳು ಸರ್ವೆಸಾಮಾನ್ಯ ಎಂಬಂತೆ ನಡೆಯುತ್ತಲೇ ಇವೆ. ಆದರೆ, ಕನ್ನಡಿಗರು ಇನ್ನೆಷ್ಟು ದಿನ ಈ ಅಪಸವ್ಯಗಳನ್ನು ಅನುಭವಿಸಬೇಕು ಎಂಬುದಕ್ಕೆ ಉತ್ತರವೇ ಇರಲಿಲ್ಲ. ಖಾಸಗಿ ವಲಯದಲ್ಲೂ ಕನ್ನಡಿಗರಿಗೆ ಆದ್ಯತೆ ನೀಡುವ ಡಾ.ಸರೋಜಿನಿ ಮಹಿಷಿ ವರದಿ ಜಾರಿಯ ಆಗ್ರಹವೂ ನನೆಗುದಿಗೆ ಬಿದ್ದಿತ್ತು. ಆದರೆ, ಕಡೆಗೂ, ಈ ದೀರ್ಘಕಾಲದ ಕೂಗಿಗೆ ಸರ್ಕಾರ ಸ್ಪಂದಿಸಿದೆ.
ಖಾಸಗಿ ವಲಯದಲ್ಲಿ ಉದ್ಯೋಗ ಮೀಸಲಿಗೆ ಕರಡು ಸಿದ್ಧವಾಗಿದ್ದು, ಕನ್ನಡಿಗರಿಗೆ ಶೇಕಡ 75 ಮೀಸಲು ಕಲ್ಪಿಸಲು ನಿರ್ಧರಿಸಲಾಗಿದೆ. ಈ ಕರಡು ಮಸೂದೆಯನ್ನು ಇದೇ ಅಧಿವೇಶನದಲ್ಲಿ ಮಂಡಿಸಲು ಸರ್ಕಾರ ಮುಂದಾಗಿದೆ. ಈ ಹಿಂದಿನ ಅಂದರೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಈ ಬಗ್ಗೆ ಪ್ರಯತ್ನಗಳು ನಡೆದಿದ್ದವಾದರೂ, ತಾಂತ್ರಿಕ ಸಮಸ್ಯೆಯಿಂದ ಸಾಧ್ಯವಾಗಿರಲಿಲ್ಲ. ಕನ್ನಡಿಗರಿಗೆ ಉದ್ಯೋಗ ಮೀಸಲು ಕಾನೂನು ಮಾಡಿದರೆ ನ್ಯಾಯಾಲಯದಲ್ಲಿ ಮಾನ್ಯತೆ ಸಿಗದೆ ಹೋಗಬಹುದು. ಜತೆಗೆ, ಉದ್ಯೋಗದಾತರಿಗೂ ಸಮಸ್ಯೆ ಆಗಲಿದೆ ಎಂಬ ಬಲವಾದ ಅಭಿಪ್ರಾಯ ಕೇಳಿಬಂದಿತ್ತು. ಹಾಗಾಗಿಯೇ, ಮತ್ತೆ ತಾಂತ್ರಿಕ ಸಮಸ್ಯೆಗಳು ತಲೆದೋರಬಾರದು ಎಂದು ಮುಂಜಾಗ್ರತೆ ವಹಿಸಿ ಕೆಲ ಪ್ರಮುಖ ಪರಿಷ್ಕರಣೆಗಳೊಂದಿಗೆ ಕನ್ನಡಿಗರಿಗೆ ಶೇಕಡ 75 ಉದ್ಯೋಗ ಮೀಸಲು ಕಲ್ಪಿಸುವ ಸಂಬಂಧ ಕಾರ್ವಿುಕ ಇಲಾಖೆ ಕರಡು ಮಸೂದೆ ಸಿದ್ಧಪಡಿಸಿದೆ. ಆಂಧ್ರಪ್ರದೇಶದಲ್ಲಿ ಅನುಷ್ಠಾನಗೊಂಡಿರುವ ಮೀಸಲಾತಿ ಕಾಯ್ದೆ ಮಾದರಿಯನ್ನೇ ಕರ್ನಾಟಕದಲ್ಲೂ ಜಾರಿಗೆ ತರಲು ಇಲಾಖೆ ಒಲವು ತೋರಿದೆ. ಕಾನೂನಿನ ವ್ಯಾಪ್ತಿಗೊಳಪಡುವ ಎಲ್ಲರ ಜತೆ ಕಾರ್ವಿುಕ ಇಲಾಖೆ ಕಾರ್ಯದರ್ಶಿ ಚರ್ಚೆಯನ್ನೂ ನಡೆಸಿದ್ದಾರೆ.
ದೀರ್ಘಾವಧಿಯ ಬೇಡಿಕೆಯನ್ನು ಈಡೇರಿಸಲು ಸರ್ಕಾರ ದಿಟ್ಟ ಹೆಜ್ಜೆ ಇರಿಸಲು ಮುಂದಾಗಿರುವುದು ಸ್ವಾಗತಾರ್ಹವೇ. ಆದರೆ, ಬರೀ ಕಾನೂನಿನಿಂದ ಮಾತ್ರ ಇದು ಸಾಧ್ಯವೆ? ಅದರಲ್ಲಿನ ವಿನಾಯ್ತಿಗಳನ್ನು ಬಳಸಿಕೊಂಡೇ ಕೆಲವರು ಕನ್ನಡಿಗರಿಗೆ ಉದ್ಯೋಗ ನೀಡದಿರಬಹುದು. ಇಲ್ಲಿ ಇನ್ನೊಂದು ಆತಂಕವೂ ಕಾಣುತ್ತಿದೆ. ಹೂಡಿಕೆ ವಿಷಯದಲ್ಲಿ ಎಲ್ಲ ರಾಜ್ಯಗಳ ನಡುವೆ ಸ್ಪರ್ಧೆ ಇದ್ದು, ಅದಕ್ಕಾಗಿ ಬಹುತೇಕ ರಾಜ್ಯಗಳು ಹೂಡಿಕೆ ಸಮಾವೇಶಗಳನ್ನು ಕಾಲಕಾಲಕ್ಕೆ ಆಯೋಜಿಸುತ್ತ ಬರುತ್ತಿವೆ. ಹೀಗಿರುವಾಗ ಮೀಸಲು ಕಾನೂನು ಜಾರಿಗೆ ಬಂದರೆ ಇಂಥ ಷರತ್ತುಗಳಿಂದ ಹೂಡಿಕೆದಾರರು ಹಿಂದೆ ಸರಿಯಬಹುದು ಎಂಬ ಮಾತೂ ಇದೆ. ಕೆಲಸದ ಕ್ಷೇತ್ರದಲ್ಲಿ ಕೌಶಲದ ಪ್ರಶ್ನೆಯೂ ಎದುರಾಗುತ್ತದೆ. ಹಾಗಾಗಿ, ಸರ್ಕಾರ, ಖಾಸಗಿ ರಂಗ, ಕನ್ನಡಿಗರ ಸಾಮೂಹಿಕ ಸಹಭಾಗಿತ್ವ, ಹೊಣೆಗಾರಿಕೆಯಿಂದ ಮಾತ್ರ ಉದ್ಯೋಗಪರ್ವದ ಸಂಕಷ್ಟಗಳನ್ನು ಕಳೆಯಲು ಸಾಧ್ಯ. ಅಂಥ ಸಾಮೂಹಿಕ ಬದ್ಧತೆ ವ್ಯಕ್ತವಾಗಲಿ.