ಸಂಪಾದಕೀಯ| ಪ್ರಜಾತಂತ್ರದ ಉತ್ಸವ

Vote
Published on

ಕೇಂದ್ರ ಚುನಾವಣಾ ಆಯೋಗ ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭಾ ಚುನಾವಣೆ ದಿನಾಂಕಗಳ ವೇಳಾಪಟ್ಟಿಯನ್ನು ಶುಕ್ರವಾರ ಪ್ರಕಟಿಸಿದೆ. ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ, ಅಸ್ಸಾಂ ಮತ್ತು ಪುದುಚೇರಿಯಲ್ಲಿ ಮಾರ್ಚ್ 27ರಿಂದ ಏಪ್ರಿಲ್ 29ರವರೆಗೆ ವಿವಿಧ ಹಂತಗಳಲ್ಲಿ ಮತದಾನ ನಡೆಯಲಿದೆ. ಮೇ 2ರಂದು ಫಲಿತಾಂಶ ಘೋಷಣೆಯಾಗಲಿದೆ. ಕೆಲ ತಿಂಗಳಿಂದಲೇ ಈ ರಾಜ್ಯಗಳಲ್ಲಿ ರಾಜಕೀಯ ಚಟುವಟಿಕೆಗಳು ಬಿರುಸುಗೊಂಡಿದ್ದು, ಚುನಾವಣೆ ತಯಾರಿ ಭರ್ಜರಿಯಾಗಿ ನಡೆದಿದೆ. ಚುನಾವಣೆ ಪ್ರಜಾಪ್ರಭುತ್ವ ವ್ಯವಸ್ಥೆಯ ಪ್ರಕ್ರಿಯೆ ಮಾತ್ರವಲ್ಲ, ಪ್ರಜಾತಂತ್ರ ವ್ಯವಸ್ಥೆಯನ್ನು ಬಲಿಷ್ಠಗೊಳಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ.

ಚುನಾವಣೆ ಎಂದಮೇಲೆ ರಾಜಕೀಯ ಆರೋಪ, ಪ್ರತ್ಯಾರೋಪ ಇದ್ದದ್ದೇ. ಮತದಾರರ ಮುಂದೆ ಅವರವರ ವಿಚಾರಗಳನ್ನು ಮಂಡಿಸಲು ಯಾವುದೇ ಅಭ್ಯಂತರವಿಲ್ಲ. ಆದರೆ, ಸೈದ್ಧಾಂತಿಕ ಸಮರದ ಹೆಸರಲ್ಲಿ ರಾಜಕೀಯ ಹಿಂಸಾಚಾರ, ಸಮಾಜವಿರೋಧಿ ಕೃತ್ಯಗಳು ನಡೆಯುತ್ತಿರುವುದು ತೀವ್ರ ಆತಂಕದ ಸಂಗತಿ. ಪಶ್ಚಿಮ ಬಂಗಾಳ ಮತ್ತು ಕೇರಳದಲ್ಲಿ ಇಂಥ ಘಟನೆಗಳನ್ನು ನೋಡುತ್ತಲೇ ಇದ್ದೇವೆ. ರಾಜಕೀಯ ಪ್ರತಿಸ್ಪರ್ಧಿಗಳನ್ನು ವೈರಿಗಳಂತೆ ಕಾಣಲಾಗುತ್ತಿದ್ದು, ಹಲ್ಲೆ, ದಾಳಿ, ಕೊಲೆಯತ್ನದಂಥ ಘಟನೆಗಳು ಸಂಭವಿಸುತ್ತಿರುವುದು ದುರ್ದೈವ ಕರ. ಪ.ಬಂಗಾಳ ದಲ್ಲಿಯಂತೂ ಮುಕ್ತವಾಗಿ ಪ್ರಚಾರ ನಡೆಸುವ ವಾತಾವರಣವೂ ಉಳಿದಿಲ್ಲ. ಈಗಾಗಲೇ ಹಲವು ರಾಜಕೀಯ ನಾಯಕರ ಮೇಲಿನ ದಾಳಿ, ಹಲ್ಲೆಯ ಪ್ರಕರಣಗಳು ಅಲ್ಲಿನ ರಾಜಕೀಯ ವ್ಯವಸ್ಥೆ ಕಲುಷಿತಗೊಂಡಿರುವುದಕ್ಕೆ ಸಾಕ್ಷಿಯಾಗಿವೆ. ಅಲ್ಲದೆ, ರಾಜಕೀಯ ಘರ್ಷಣೆ, ಹಿಂಸಾಚಾರದ ಪ್ರಕರಣಗಳಲ್ಲಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವುದು ವಿರಳ ಪ್ರಕರಣಗಳಲ್ಲಿ ಮಾತ್ರ. ಕೇರಳದಲ್ಲೂ ಪರಿಸ್ಥಿತಿ ಭಿನ್ನವಾಗೇನೂ ಇಲ್ಲ. ಸೈದ್ಧಾಂತಿಕ ವಿರೋಧದ ಹೆಸರಲ್ಲಿ ಹಿಂಸಾಚಾರ ಬಹಿರಂಗವಾಗಿ ತಾಂಡವವಾಡುತ್ತಿದೆ. ಈ ಘಟನೆಗಳನ್ನು ನೋಡಿದಾಗ ನಾವೆಲ್ಲಿ ಸಾಗುತ್ತಿದ್ದೇವೆ, ಪ್ರಜಾಪ್ರಭುತ್ವದ ಮೌಲ್ಯಗಳನ್ನೆಲ್ಲ ಬದಿಗೊತ್ತಿ ರಾಜಕೀಯ ಹಿತಾಸಕ್ತಿ ಮಾತ್ರ ಮುಖ್ಯವಾಗಿದೆಯೇನೋ ಎಂಬ ಆತಂಕ ಕಾಡುತ್ತಿದೆ.

ಚುನಾವಣೆ ಎಂದ ಮೇಲೆ ಗೆಲುವು-ಸೋಲು ಸಹಜವೇ. ಇದನ್ನು ಪ್ರತಿಷ್ಠೆಯಾಗಿ ಭಾವಿಸಿದರೆ ಸಮಸ್ಯೆ ಮತ್ತಷ್ಟು ಉಲ್ಬಣಿಸುತ್ತದೆ. ಇಲ್ಲಿ ಮತದಾರರ ನಿರ್ಧಾರವೇ ಮುಖ್ಯವಾಗಿ ಇರುವುದರಿಂದ ಹಗೆತನ, ಹಿಂಸಾಚಾರ, ಅಶಾಂತಿಯ ಘಟನೆಗಳು ಏಕೆ? ಚುನಾವಣೆಗಳು ಕ್ರೀಡಾಸ್ಪೂರ್ತಿಯಿಂದ ನಡೆಯಬೇಕು. ಯಾರೇ ಗೆದ್ದರೂ, ಜನರ ಆಶೋತ್ತರಗಳನ್ನು ಈಡೇರಿಸಲು ಶ್ರಮಿಸಬೇಕು. ಪ್ರತಿಪಕ್ಷಗಳು ಸರ್ಕಾರದ ಮೇಲೆ ಹದ್ದಿನ ಕಣ್ಣಿಟ್ಟು, ಜನಹಿತವನ್ನು ಕಾಪಾಡಬೇಕು.

ರಾಜಕೀಯ ವ್ಯವಸ್ಥೆ ಮತ್ತು ಅದಕ್ಕೆ ಸಂಬಂಧಿಸಿದ ಪ್ರಕ್ರಿಯೆ ಬಗ್ಗೆ ಈಗಾಗಲೇ ಜನಸಾಮಾನ್ಯರಲ್ಲಿ ಆಕ್ರೋಶವಿದೆ. ಸಂಭಾವಿತರು ಈಗಿನ ರಾಜಕಾರಣದಲ್ಲಿ ನೆಲೆ ಕಂಡುಕೊಳ್ಳಲು ಸಾಧ್ಯವೇ ಇಲ್ಲ ಎಂಬ ಭಾವನೆ ಬಲವಾಗಿ ಬೇರೂರಿದೆ. ಖಂಡಿತವಾಗಿಯೂ ಇದು ಒಳ್ಳೆಯ ಬೆಳವಣಿಗೆಯಲ್ಲ. ಎಲ್ಲ ರಾಜಕೀಯ ಪಕ್ಷಗಳು ಪ್ರಜ್ಞಾವಂತಿಕೆ, ವಿವೇಚನೆಯೊಂದಿಗೆ ಸಾಗಬೇಕಾದ ಕಾಲವಿದು. ಚುನಾವಣೆಗಳು ಪಾರದರ್ಶಕವಾಗಿ ನಡೆಯಬೇಕೆ ಹೊರತು, ಅವು ಹಿಂಸೆಯ ಛಾಯೆಗೆ ಸಿಲುಕಬಾರದು. ನಾಯಕರು ಪ್ರಚಾರದ ವೇಳೆ ಸಾಮರಸ್ಯ ಕದಡಿಸುವಂಥ ಹೇಳಿಕೆಗಳನ್ನು ನೀಡದಿರಲಿ. ಪ್ರಜಾತಂತ್ರದ ಈ ಉತ್ಸವದಲ್ಲಿ ಜನಸಾಮಾನ್ಯರು ಉತ್ಸಾಹದಿಂದ ಪಾಲ್ಗೊಂಡು, ಮತದಾನ ಮಾಡುವಂತಾಗಲಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net