

ನೂತನ ಕೃಷಿ ಕಾಯ್ದೆಗಳನ್ನು ಕೇಂದ್ರ ಸರ್ಕಾರ ಹಿಂಪಡೆಯಬೇಕು ಎಂದು ಆಗ್ರಹಿಸಿ ಗಣರಾಜ್ಯೋತ್ಸವ ದಿನದಂದು ರೈತರ ಹೆಸರಲ್ಲಿ ನಡೆಸಿದ ಹೋರಾಟ ಅನುಚಿತ ವರ್ತನೆ, ಹಿಂಸಾಚಾರಕ್ಕೆ ಕಾರಣವಾಗಿರುವುದು ಅಕ್ಷಮ್ಯ. ಇಡೀ ದೇಶ ಒಂದೆಡೆ ಗಣರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸುತ್ತಿತ್ತು. ದೇಶದ ಸಾಧನೆ-ಸವಾಲುಗಳನ್ನು ಅವಲೋಕಿಸಿಕೊಳ್ಳುವ ದಿನವೂ ಇದು. ಆದರೆ, ರಾಷ್ಟ್ರದ ಹೆಮ್ಮೆಯ ಮತ್ತು ಸಾರ್ವಭೌಮತೆಯ ಪ್ರತೀಕವಾಗಿರುವ ಐತಿಹಾಸಿಕ ಕೆಂಪುಕೋಟೆಗೆ ಮುತ್ತಿಗೆ ಹಾಕಿರುವುದು, ಅಲ್ಲಿ ಒಂದು ಪಂಥದ ಧ್ವಜವನ್ನು ಹಾರಿಸಿರುವುದು ಇತಿಹಾಸದಲ್ಲೇ ಕರಾಳ ಘಟನೆಯಾಗಿ ದಾಖಲಾಗಿದೆ. ಪ್ರತಿಭಟನಾಕಾರರು ಪೊಲೀಸರೊಂದಿಗೆ ನಡೆದುಕೊಂಡಿರುವ ರೀತಿ, ಟ್ರಾ್ಯಕ್ಟರ್ಗಳನ್ನು ಅಡ್ಡಾದಿಡ್ಡಿಯಾಗಿ ಚಲಾಯಿಸಿ ಅಪಾಯದ ಆತಂಕ ಸೃಷ್ಟಿಸಿದ್ದು, ನಿಯಮಗಳನ್ನೆಲ್ಲ ಗಾಳಿಗೆ ತೂರಿದ್ದು ಸೇರಿದಂತೆ ಅನೇಕ ಅಹಿತಕರ ಘಟನೆಗಳಿಗೆ ಪ್ರತಿಭಟನೆ ಸಾಕ್ಷಿಯಾಗಿದೆ. ‘ಕೆಲ ಸಮಾಜದ್ರೋಹಿ ಶಕ್ತಿಗಳು ಸೇರಿಕೊಂಡು ಈ ಕೃತ್ಯ ಎಸಗಿದ್ದಾರೆ. ಅವರನ್ನು ನಿಯಂತ್ರಿಸಲು ಸಾಧ್ಯವಾಗಿಲ್ಲ’ ಎಂದು ಕಿಸಾನ್ ಮೋರ್ಚಾದ ನಾಯಕರು ಹೇಳಿಕೆ ಕೊಟ್ಟಿದ್ದಾರೆ. ಆದರೆ, ಇಂಥ ಅಪಾಯದ ಸಾಧ್ಯತೆ ಮೊದಲೇ ವ್ಯಕ್ತವಾಗಿತ್ತು. ಅಲ್ಲದೆ, ಎರಡು ತಿಂಗಳುಗಳಿಂದ ಪ್ರತಿಭಟನೆ ನಡೆಯುತ್ತಿದ್ದು, ರೈತ ಮುಖಂಡರು ಸಮಾಜದ್ರೋಹಿ ಶಕ್ತಿಗಳನ್ನು ಆಗಲೇ ಗುರುತಿಸಿ, ಹೊರಗಟ್ಟಬಹುದಿತ್ತಲ್ಲವೇ?
ಟ್ರಾ್ಯಕ್ಟರ್ ರ‍್ಯಾಲಿ ಹೆಸರಲ್ಲಿ ನಡೆದ ಹಿಂಸಾಚಾರ ಹಲವು ತಪು್ಪಸಂದೇಶ ರವಾನಿಸಿದೆ. ಕೃಷಿ ಮಸೂದೆ ಕುರಿತು ಭಿನ್ನಾಭಿಪ್ರಾಯ ಇರಬಹುದು. ಅದನ್ನು ವಿರೋಧಿಸಿ ಪ್ರತಿಭಟಿಸುವ ಹಕ್ಕು ಕೂಡ ಇದೆ. ಆದರೆ, ಕೇಂದ್ರ ಸರ್ಕಾರ 11 ಸುತ್ತಿನ ಮಾತುಕತೆ ನಡೆಸಿದರೂ, ರ್ತಾಕ ಅಂತ್ಯಕ್ಕೆ ಬರಲು ಸಾಧ್ಯವಾಗದಿರುವುದು ವಿಪರ್ಯಾಸಕರ. ರೈತರ ಕಳವಳಗಳನ್ನು ಅರ್ಥಮಾಡಿಕೊಂಡೇ ಸರ್ಕಾರ ಒಂದೂವರೆ ವರ್ಷದ ಮಟ್ಟಿಗೆ ಹೊಸ ಕೃಷಿ ಕಾನೂನುಗಳನ್ನು ಅಮಾನತ್ತಿನಲ್ಲಿ ಇಡುವುದಾಗಿ ಆಶ್ವಾಸನೆ ನೀಡಿತು. ಇದು ರೈತಹೋರಾಟಕ್ಕೆ ಸಿಕ್ಕ ಗೆಲುವೇ ಆಗಿತ್ತು. ಒಂದೂವರೆ ವರ್ಷದ ಅವಧಿಯಲ್ಲಿ ಕಾಯ್ದೆಯ ಎಲ್ಲ ಆಯಾಮಗಳ ಕುರಿತಂತೆ ಚರ್ಚೆ ನಡೆಸಿ, ಪರಿಹಾರಸೂತ್ರ ಕಂಡುಹಿಡಿಯಬಹುದಿತ್ತು. ಕೃಷಿಉತ್ಪನ್ನಗಳಿಗೆ ನ್ಯಾಯಯುತ ಬೆಲೆ ಸಿಗಬೇಕು, ರೈತರ ಆರ್ಥಿಕ ಸ್ಥಿತಿ ಉತ್ತಮಗೊಳ್ಳಬೇಕು, ಅದಕ್ಕಾಗಿ ಅವರ ಆದಾಯ ಹೆಚ್ಚಬೇಕು ಎಂಬ ಕಳಕಳಿ ಎಲ್ಲರಲ್ಲೂ ಇದೆ. ರೈತರಿಗಾಗುವ ನೋವು, ಸಂಕಷ್ಟದ ಬಗ್ಗೆ ಕಾಳಜಿಯೂ, ಅನುಕಂಪವೂ ಇದೆ. ಹಾಗಾಗಿ, ಕೃಷಿವಲಯದ ಮತ್ತು ರೈತರ ಬೇಡಿಕೆಗಳು ಈಡೇರಬೇಕು ಎಂಬ ಆಗ್ರಹ ಜನಮಾನಸದ್ದೂ ಆಗಿದೆ. ಈ ನಿಟ್ಟಿನಲ್ಲಿ ಸರಿಯಾದ ಮಾರ್ಗದಲ್ಲಿ ಸಾಗಬೇಕಷ್ಟೇ.
ರೈತರ ಹೆಸರಲ್ಲಿ ದೆಹಲಿಯನ್ನೇ ರಣರಂಗದಂತೆ ಮಾಡಲಾಗಿದೆ. ಟ್ರಾ್ಯಕ್ಟರ್ ರ‍್ಯಾಲಿ ನಡೆಸಲು ಮೊದಲೇ ಮಾರ್ಗಗಳನ್ನು ನಿಗದಿ ಮಾಡಿ, ಪೊಲೀಸ್ ಇಲಾಖೆ ಅನುಮತಿ ನೀಡಿತ್ತು. ಆದರೆ, ಉದ್ದೇಶಪೂರ್ವಕವಾಗಿ ಆ ಮಾರ್ಗಗಳನ್ನು ಉಲ್ಲಂಘಿಸಿ, ಕೆಂಪುಕೋಟೆಗೂ ಲಗ್ಗೆ ಇಟ್ಟ ಕ್ರಮ ಸರಿಯಾದುದಲ್ಲ. ಹೀಗೆ ಆದರೆ ಪ್ರತಿಭಟನೆ/ಹೋರಾಟದ ಆಶಯಗಳು ಸತ್ತು ಹೋಗುತ್ತವೆ. ಪ್ರತಿಭಟನೆಯ ದನಿ ಅಡಗುವುದು ಪ್ರಜಾಪ್ರಭುತ್ವ ಸ್ವಾಸ್ಥ್ಯದ ದೃಷ್ಟಿಯಿಂದಲೂ ಸರಿಯಲ್ಲ. ಹಾಗಂತ ಹೋರಾಟವನ್ನು ನಿಮಿತ್ತ ಮಾಡಿಕೊಂಡು ಹಿಂಸೆ ಹರಡಿದರೆ ಸಹಿಸಲು ಆಗುವುದಿಲ್ಲ. ಇಂಥ ಘಟನೆಗಳು ಜನರ ನಂಬಿಕೆಗೂ ಪೆಟ್ಟು ನೀಡುತ್ತವೆ. ರೈತನಾಯಕರೂ, ಅವರನ್ನು ದಾಳವಾಗಿಸಿಕೊಂಡು ರಾಜಕಾರಣ ಮಾಡುವವರೂ ಒಮ್ಮೆ ಆತ್ಮಾವಲೋಕನ ಮಾಡಿಕೊಳ್ಳಲು ಇದು ಸಕಾಲ.