ಸಂಪಾದಕೀಯ| ಸುಧಾರಣೆ ಕ್ರಮಗಳೂ ಅಗತ್ಯ

Electricity
Published on

ಉಪಚುನಾವಣೆ ಮುಗಿದ ಬೆನ್ನಲ್ಲೇ ಜನರು ವಿದ್ಯುತ್ ದರ ಏರಿಕೆಯ ಭಾರ ಹೊರಬೇಕಾಗಿದೆ. ಕರೊನಾ ಸಂಕಷ್ಟದಿಂದ ಜನಸಾಮಾನ್ಯರು ಮತ್ತು ಕೈಗಾರಿಕಾ ವಲಯ ನಲುಗಿರುವ ಸಂದರ್ಭದಲ್ಲೇ, ಇಂಥದ್ದೊಂದು ನಿರ್ಣಯ ಹೊರಬಂದಿರುವುದು ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಬೆಸ್ಕಾಂ, ಜೆಸ್ಕಾಂ ಸೇರಿ ರಾಜ್ಯದಲ್ಲಿನ ಇನ್ನಿತರ ವಿದ್ಯುತ್ ಸರಬರಾಜು ಸಂಸ್ಥೆಗಳ ಬೇಡಿಕೆಗೆ ಅಸ್ತು ಎಂದಿರುವ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ (ಕೆಇಆರ್​ಸಿ), ಪ್ರತಿ ಯುನಿಟ್​ಗೆ 40 ಪೈಸೆ ದರ ಹೆಚ್ಚಳ ಮಾಡಿ, ಬುಧವಾರ ಆದೇಶ ಹೊರಡಿಸಿದೆ.

ಸಾಮಾನ್ಯವಾಗಿ ಪ್ರತಿ ವರ್ಷ ಏಪ್ರಿಲ್ ಹೊತ್ತಲ್ಲಿ ವಿದ್ಯುತ್ ದರ ಪರಿಷ್ಕರಿಸುವುದು ವಾಡಿಕೆ. ಆದರೆ, ಈ ಬಾರಿ ಕರೊನಾ ಕಾರಣದಿಂದ ಆ ನಿರ್ಧಾರವನ್ನು ಮುಂದೂಡುತ್ತ ಬಂದು, ಈಗ ಪ್ರಕಟಿಸಲಾಗಿದೆ. ನೂತನ ದರವು ನವೆಂಬರ್ 1ರ ನಂತರ ಬಳಕೆಯಾಗುವ ವಿದ್ಯುತ್​ಗೆ ಅನ್ವಯವಾಗಲಿದೆ. ವಿದ್ಯುತ್ ಸರಬರಾಜು ನಿಗಮಗಳ ಆರ್ಥಿಕ ಹೊರೆ ಹೆಚ್ಚಿರುವ ಕಾರಣ ದರ ಪರಿಷ್ಕರಣೆ ಮಾಡಲಾಗಿದೆ. ಈ ದರ ಮುಂದಿನ ಐದು ತಿಂಗಳುಗಳಿಗೆ (2021 ಮಾರ್ಚ್ 31ರವರೆಗೆ) ಅನ್ವಯವಾಗಲಿದೆ. ಸರಬರಾಜು ನಿಗಮಗಳ ಆರ್ಥಿಕ ಹೊರೆ ತಗ್ಗಿಸುವ ಉದ್ದೇಶದಿಂದ ದರ ಏರಿಕೆ ಮಾಡಲಾಗಿದೆಯಾದರೂ, ಇದು ಜನಸಾಮಾನ್ಯರ ಮೇಲಿನ ಹೊರೆಯನ್ನು ಮತ್ತಷ್ಟು ಹೆಚ್ಚಿಸಲಿದೆ ಎಂಬುದರಲ್ಲಿ ಅನುಮಾನವಿಲ್ಲ.

ಇಲ್ಲಿ ದರಏರಿಕೆವೊಂದೇ ವಿಷಯವಲ್ಲ. ಸೇವೆಯ ಗುಣಮಟ್ಟವೂ ಹೆಚ್ಚಬೇಕು ಎಂಬುದು ಪ್ರಮುಖ ಬೇಡಿಕೆ. ವಿದ್ಯುತ್ತಿನ ಸೋರಿಕೆ ಭಾರಿ ಪ್ರಮಾಣದಲ್ಲಿ ನಡೆಯುತ್ತಿರುವ ವಾಸ್ತವ ಸಂಗತಿ ಕೆಇಆರ್​ಸಿಗೆ ಗೊತ್ತಿದ್ದರೂ ಅದಕ್ಕೆ ಪರಿಣಾಮಕಾರಿಯಾಗಿ ಕಡಿವಾಣ ಹಾಕಲು ಸಾಧ್ಯವಾಗಿಲ್ಲ. ಇದರಿಂದ ಆಗುತ್ತಿರುವ ನಷ್ಟದ ನಿಖರ ಅಂದಾಜನ್ನು ಮಾಡಿದರೆ ಸಮಸ್ಯೆಯ ಗಂಭೀರತೆ ಅರ್ಥವಾಗಬಹುದು. ಮೂಲಭೂತ ಸೌಕರ್ಯಗಳ ಕೊರತೆಯೂ ವಿದ್ಯುತ್ ರಂಗಕ್ಕೆ ಕಾಡುತ್ತಿದೆ. ವಿದ್ಯುತ್ ಉತ್ಪಾದನೆಯ ಗುರಿಯನ್ನು ತಲುಪುವುದು ಎಷ್ಟು ಮುಖ್ಯವೋ, ಅದರ ವಿತರಣಾ ಜಾಲವನ್ನು ಸಮರ್ಪಕವಾಗಿ ನಿರ್ವಹಿಸುವುದು ಕೂಡ ಅಷ್ಟೇ ಮುಖ್ಯ. ಈ ನಿಟ್ಟಿನಲ್ಲಿ ಕರ್ನಾಟಕದಲ್ಲಿ ಮಹತ್ವದ ಸುಧಾರಣೆಗಳ ಅಗತ್ಯವಿದೆ ಎಂಬ ಅಭಿಪ್ರಾಯ ತಜ್ಞರದ್ದು. ಸುಧಾರಣೆಯ ಕ್ರಮಗಳತ್ತ ಮುಖ ಮಾಡದೆ ಮತ್ತು ವ್ಯವಸ್ಥೆಯಲ್ಲಿನ ಲೋಪದೋಷಗಳನ್ನು ನಿವಾರಿಸದೆ ವರ್ಷಕ್ಕೊಮ್ಮೆ ದರ ಏರಿಕೆ ಮಾಡುತ್ತ ಹೋದರೆ ಏನು ಪ್ರಯೋಜನ?

ವಿತರಣಾ ಜಾಲದಲ್ಲಿನ ತೊಡಕುಗಳನ್ನು ನಿವಾರಿಸುವುದು ಆದ್ಯತೆ ಆಗಬೇಕು. ಕೈಗಾರಿಕೆಗಳು ಮತ್ತು ಜನಸಾಮಾನ್ಯರ ದೂರುದುಮ್ಮಾನಗಳಿಗೆ ಸಂಬಂಧಪಟ್ಟ ಅಧಿಕಾರಿಗಳು/ಸಿಬ್ಬಂದಿ ಸಮರ್ಪಕ ಪರಿಹಾರವನ್ನು ಕಲ್ಪಿಸಬೇಕು. ಎಷ್ಟೋ ಬಾರಿ ವಿದ್ಯುತ್ ಶುಲ್ಕವನ್ನು ತಪು್ಪತಪ್ಪಾಗಿ ಹಾಕಿ, ಅದನ್ನು ಸರಿ ಮಾಡಲು ಹತ್ತಾರು ಸಲ ಸರ್ಕಾರಿ ಕಚೇರಿಗೆ ಓಡಾಡುವಂತಾಗುತ್ತದೆ. ಇಂಥ ಅಪಸವ್ಯಗಳೆಲ್ಲ ದೂರವಾಗಬೇಕು. ಮುಖ್ಯವಾಗಿ, ಕೆಲ ರಾಜ್ಯಗಳು ವಿದ್ಯುತ್ ಕ್ಷೇತ್ರದಲ್ಲಿ ಮಾದರಿ ಎನಿಸುವಂಥ ಸುಧಾರಣೆಗಳನ್ನು ಅನುಷ್ಠಾನಕ್ಕೆ ತಂದಿವೆ. ಅವುಗಳ ಅಧ್ಯಯನ ನಡೆಸಿ, ಸೂಕ್ತವಾದದ್ದನ್ನು ಕರ್ನಾಟಕದಲ್ಲಿ ಜಾರಿಗೆ ತರುವ ಇಚ್ಛಾಶಕ್ತಿ ಪ್ರಕಟವಾಗಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net