ಸಂಪಾದಕೀಯ- ವಿಶ್ವಾಸಾರ್ಹತೆ ಕುಂದದಿರಲಿ: ತನಿಖಾ ಸಂಸ್ಥೆಗಳ ಮೇಲೆ ಮಹತ್ವದ ಹೊಣೆಗಾರಿಕೆ

ED
Published on

ಯಾವುದೇ ವ್ಯವಸ್ಥೆ ಸುಗಮವಾಗಿ ಸಾಗಬೇಕಾದಲ್ಲಿ ಅಲ್ಲಿ ಮೇಲ್ವಿಚಾರಣೆ ಹಾಗೂ ನಿಗಾ ಇರಬೇಕಾಗುತ್ತದೆ. ಒಂದೊಮ್ಮೆ ಸಂಬಂಧಪಟ್ಟವರು ತಮ್ಮ ಕರ್ತವ್ಯ ಅಥವಾ ಜವಾಬ್ದಾರಿಯನ್ನು ಸರಿಯಾಗಿ ನಿಭಾಯಿಸದಿದ್ದಲ್ಲಿ ಅಥವಾ ಅವ್ಯವಹಾರದಲ್ಲಿ ತೊಡಗಿದಲ್ಲಿ ಅದನ್ನು ಪತ್ತೆಹಚ್ಚಿ ಸೂಕ್ತ ಕ್ರಮವಾಗುವಂತೆ ನೋಡಿಕೊಳ್ಳಬೇಕಾಗುತ್ತದೆ. ಸರ್ಕಾರಿ ವ್ಯವಸ್ಥೆಯಲ್ಲಿ ಇದಕ್ಕೆ ಬೇರೆ ಬೇರೆ ಅಂಗಸಂಸ್ಥೆಗಳಿರುತ್ತವೆ.

ಇವು ಬೇರೆ ಬೇರೆ ಇಲಾಖೆಯಡಿ ಬರುತ್ತಿದ್ದು, ಆಯಾ ಪ್ರಕರಣವನ್ನು ಆಧರಿಸಿ ತನಿಖಾ ಸಂಸ್ಥೆ ಯಾವುದೆಂದು ನಿರ್ಧಾರವಾಗುತ್ತದೆ. ಕೇಂದ್ರ ಸರ್ಕಾರವನ್ನೇ ತೆಗೆದುಕೊಂಡರೆ, ಸಿಬಿಐ, ಆದಾಯ ತೆರಿಗೆ, ಜಾರಿ ನಿರ್ದೇಶನಾಲಯ (ಇ.ಡಿ) ಹೀಗೆ ನಾನಾ ಏಜೆನ್ಸಿಗಳಿವೆ. ಈ ಸಂಸ್ಥೆಗಳ ಕಾರ್ಯವ್ಯಾಪ್ತಿಯೂ ಭಿನ್ನವಾದುದು. ಆದಾಯ ತೆರಿಗೆ ಇಲಾಖೆ, ಸಿಬಿಐ ಸೇರಿ ಸ್ಥಳಿಯ ತನಿಖಾ ಸಂಸ್ಥೆಗಳು ಪತ್ತೆಹಚ್ಚುವ ಯಾವುದೇ ಅಪರಾಧ ಪ್ರಕರಣಗಳಲ್ಲಿ ಅಕ್ರಮ ಹಣ ವಹಿವಾಟು ನಡೆದಿರುವುದು ಗೋಚರಿಸಿದರೆ ಇ.ಡಿ. ಮುಂದಿನ ತನಿಖೆ ನಡೆಸುತ್ತದೆ. ವಿಶೇಷವಾಗಿ ಹಲವು ರಾಜಕಾರಣಿಗಳು, ಉದ್ಯಮಿಗಳು ಹಾಗೂ ಇತರ ಗಣ್ಯರ ಪ್ರಕರಣಗಳ ತನಿಖೆಯನ್ನು ನಿರ್ವಹಿಸುವಾಗ ಇಂಥ ಸಂಸ್ಥೆಗಳು ಹೆಚ್ಚು ಸುದ್ದಿಯಾಗುತ್ತವೆ; ಮತ್ತು ಅನೇಕ ಸಂದರ್ಭಗಳಲ್ಲಿ ಇವನ್ನು ಸರ್ಕಾರದ ಕೈಗೊಂಬೆಯಾಗಿ, ರಾಜಕೀಯ ಕಾರಣಕ್ಕಾಗಿ ಬಳಸಲಾಗುತ್ತದೆ ಎಂಬ ಆಪಾದನೆಗಳು ಕೇಳಿಬರುತ್ತವೆ.

ಯಾವ ಪಕ್ಷ ಅಧಿಕಾರದಲ್ಲಿದ್ದರೂ ಇಂಥ ಆರೋಪ ಸಾಮಾನ್ಯ. ಹೀಗಾಗಿ ತನಿಖಾ ಸಂಸ್ಥೆಗಳು ನಿಷ್ಪಕ್ಷಪಾತ ತನಿಖೆಯ ಮೂಲಕ ವಿಶ್ವಾಸಾರ್ಹತೆಯನ್ನು ಕಾಪಾಡಿಕೊಂಡು ಹೋಗಬೇಕಾದುದು ಮುಖ್ಯ; ಸವೋರ್ಚ್ಚ ನ್ಯಾಯಾಲಯ ಕೂಡ ಈ ಅಂಶವನ್ನು ಅನೇಕ ಸಾರಿ ಹೇಳಿದೆ. ಯಾವುದೇ ರಾಜಕಾರಣಿ ಅಥವಾ ಉದ್ಯಮಿಯ ಮೇಲೆ ಪ್ರಕರಣ ದಾಖಲಾದಾಕ್ಷಣ ಅಥವಾ ದಾಳಿ ಆದಾಕ್ಷಣ ಅವರು ತಪ್ಪಿತಸ್ಥರು ಅಥವಾ ನಿರಪರಾಧಿಗಳು ಎಂದು ಷರಾ ಬರೆಯಲಾಗದು. ತನಿಖೆ ನಡೆದು, ಆರೋಪಪಟ್ಟಿ ದಾಖಲಾಗಿ, ನ್ಯಾಯಾಲಯದಲ್ಲಿ ವಿಚಾರಣೆ ನಡೆದು ತೀರ್ಪ ಪ್ರಕಟವಾದ ಮೇಲಷ್ಟೆ ಅಂತಿಮ ನಿರ್ಣಯ ಆಗುವುದು.

ಆದರೆ ಪ್ರಕರಣದ ತನಿಖೆ ಮತ್ತು ಆರೋಪಪಟ್ಟಿ ಸಲ್ಲಿಕೆ ವಿಚಾರದಲ್ಲಿ ತನಿಖಾ ಸಂಸ್ಥೆಗಳು ಸರಿಯಾಗಿ ಕೆಲಸ ಮಾಡದಿದ್ದಲ್ಲಿ ಕೇಸು ನ್ಯಾಯಾಲಯದಲ್ಲಿ ಬಿದ್ದುಹೋಗುತ್ತದೆ. ಇದಕ್ಕೆ ಒಂದು ಉದಾಹರಣೆ ನೀಡುವುದಾದರೆ, ಜಾರಿ ನಿರ್ದೇಶನಾಲಯವು ಕಳೆದ 22 ವರ್ಷಗಳಲ್ಲಿ ದೇಶದ ವಿವಿಧೆಡೆ ಸಾವಿರಾರು ಪ್ರಕಣಗಳನ್ನು ದಾಖಲಿಸಿಕೊಂಡಿದ್ದರೂ, 23 ಜನರಿಗಷ್ಟೇ ಜೈಲು ಶಿಕ್ಷೆಯಾಗಿದೆ. 2005 ಜು.1ರಿಂದ 2022ರ ಫೆ. 28ರವರೆಗೆ 3086 ಕಡೆ ದಾಳಿ ನಡೆಸಿ, ಶೋಧ ನಡೆಸಿದೆ.

4964 ಇಸಿಐಆರ್​ (ಎನ್​ಫೋರ್ಸ್​ಮೆಂಟ್​ ಕೇಸ್​ ಇನ್ಫಮೇರ್ಷನ್​ ರಿಪೋರ್ಟ್​) ದಾಖಲಿಸಿದೆ. 943 ಪ್ರಾಸಿಕ್ಯೂಷನ್​ ಮೊಕದ್ದಮೆಗಳನ್ನು ಹೂಡಿದ್ದು, ವಿಚಾರಣಾ ನ್ಯಾಯಾಲಯದಲ್ಲಿ ವಿಚಾರಣೆ ಪ್ರಗತಿಯಲ್ಲಿದೆ. ಈವರೆಗೆ 23 ಆರೋಪಿಗಳಿಗಷ್ಟೇ ಶಿಕ್ಷೆಯಾಗಿದೆ. ಪರಿಣಾಮಕಾರಿ ತನಿಖೆಗೆ ಅಗತ್ಯವಿರುವ ಅಧಿಕಾರಿ, ಸಿಬ್ಬಂದಿ ಕೊರತೆ; ಪ್ರಕರಣದಲ್ಲಿ ಪ್ರಬಲ ಸಂಗ್ರಹಿಸುವಲ್ಲಿ ವಿಲವಾಗುವುದು; ಪ್ರತಿಪಕ್ಷ ನಾಯಕರ ಮೇಲೆ ರಾಜಕೀಯ ಕಾರಣಕ್ಕೆ ಇ.ಡಿ.ಯನ್ನು ಅಸ್ತ್ರವನ್ನಾಗಿ ಬಳಸಲಾಗುತ್ತದೆಯೆಂಬ ಆರೋಪ& ಹೀಗೆ ಈ ವೈಲ್ಯಕ್ಕೆ ನಾನಾ ಕಾರಣಗಳಿವೆ. ಇದೇನೇ ಇದ್ದರೂ, ಎಲ್ಲ ತನಿಖಾ ಸಂಸ್ಥೆಗಳು ವಿಶ್ವಾಸಾರ್ಹತೆ ಕಾಪಾಡಿಕೊಂಡು ಹೋಗದಿದ್ದರೆ ಒಟ್ಟಾರೆ ವ್ಯವಸ್ಥೆಯ ಮೇಲೇ ಜನರಿಗೆ ಅಪನಂಬಿಕೆ ಮೂಡುವ ಅಪಾಯವಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net